ಬೆಂಗಳೂರು, ಮಾ.17- ಲೋಕಸಭಾ ಚುನಾವಣೆ ದಿನಾಂಕ ಪ್ರಕಟವಾದ ಹಿನ್ನೆಲೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಮೂರು ಚೆಕ್ ಪೋಸ್ಟ್ ಗಳಂತೆ ನಗರದಾದ್ಯಂತ ನೂರಾಕ್ಕೂ ಹೆಚ್ಚು ಚೆಕ್‍ಪೋಸ್ಟ್ ಗಳನ್ನು ನಿರ್ಮಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ತಿಳಿಸಿದ್ದಾರೆ. ಈ ಸಂಜೆಯೊಂದಿಗೆ ಮಾತನಾಡಿದ ಅವರು, ಈ ಚೆಕ್ ಪೋಸ್ಟ್ ಗಳು ದಿನದ 24 ಗಂಟೆಗಳಲ್ಲೂ ಕಾರ್ಯನಿರ್ವಹಿಸುತ್ತವೆ. ಪಾಳಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಾರೆ ಎಂದು ಹೇಳಿದರು.
ಈ ಚೆಕ್‍ಪೋಸ್ಟ್ ಗಳಲ್ಲಿ ನಮ್ಮ ಪೊಲೀಸರು, ಬಿಬಿಎಂಪಿ, ಆರ್‍ಟಿಒ, ಅಬಕಾರಿ, ವಾಣಿಜ್ಯ ತೆರಿಗೆ ಹೀಗೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇರುತ್ತಾರೆ.ಆ ರಸ್ತೆಗಳಲ್ಲಿ ಬರುವ ಪ್ರತಿಯೊಂದು ವಾಹನವನ್ನು ಈ ಸಿಬ್ಬಂದಿಗಳು ಸೂಕ್ಷ್ಮವಾಗಿ ಪರಿಶೀಲನೆ ಮಾಡಲಿದ್ದಾರೆ.
ಒಂದು ವೇಳೆ ಹಣ, ಮದ್ಯ, ದಾಖಲೆ ಇಲ್ಲದ ವಸ್ತುಗಳು ಕಂಡುಬಂದರೆ ತಕ್ಷಣ ಅವುಗಳನ್ನು ಜಪ್ತಿಮಾಡಿಕೊಳ್ಳುತ್ತಾರೆ. ಸೂಕ್ತ ದಾಖಲೆಗಳನ್ನು ಕೊಟ್ಟರೆ ವಶಪಡಿಸಿಕೊಂಡಿರುವ ಹಣ ಹಾಗೂ ಇನ್ನಿತರೆ ವಸ್ತುಗಳನ್ನು ಬಿಡುಗಡೆ ಮಾಡುತ್ತಾರೆ ಎಂದು ಅವರು ಹೇಳಿದರು.
ಲೋಕಸಭಾ ಚುನಾವಣೆ ನಿಮಿತ್ತ ನಗರದಾದ್ಯಂತ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿಕೊಂಡಿದ್ದೇವೆ. ಈಗಾಗಲೇ ಕೇಂದ್ರದಿಂದ ಸಿಐಎಸ್‍ಎಫ್‍ನ ಒಂದು ತುಕಡಿ ಬಂದಿದೆ. ಹಂತ ಹಂತವಾಗಿ ಕೇಂದ್ರ ಪಡೆಗಳು ಬರಲಿವೆ ಎಂದು ಆಯುಕ್ತರು ತಿಳಿಸಿದರು.
ಸ್ಥಳೀಯ ಪೊಲೀಸರ ಜೊತೆಗೆ ಈ ಕೇಂದ್ರ ಪಡೆಗಳನ್ನು ಬಂದೋಬಸ್ತ್‍ಗಾಗಿ ನಿಯೋಜಿಸಲಾಗುವುದು. ಒಟ್ಟಾರೆ ಮುಕ್ತ ಹಾಗೂ ಶಾಂತಿಯುತವಾಗಿ ಚುನಾವಣೆ ನಡೆಸಲು ನಾವು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಿದ್ದೇವೆ ಎಂದು ಅವರು ಹೇಳಿದರು.