Friday, May 24, 2024
Homeರಾಜಕೀಯಬಾಕಿ ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹುಡುಕಾಡುತ್ತಿರುವ ಕಾಂಗ್ರೆಸ್-ಬಿಜೆಪಿ-ಜೆಡಿಎಸ್

ಬಾಕಿ ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹುಡುಕಾಡುತ್ತಿರುವ ಕಾಂಗ್ರೆಸ್-ಬಿಜೆಪಿ-ಜೆಡಿಎಸ್

ನವದೆಹಲಿ,ಮಾ.17- ಲೋಕಸಭೆಯ ಚುನಾವಣೆಗೆ ದಿನಾಂಕ ಪ್ರಕಟಗೊಂಡ ಬೆನ್ನಲ್ಲೇ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಚುರುಕುಗೊಂಡಿದೆ. ದಿನಾಂಕ ಘೋಷಣೆಗೂ ಮುನ್ನವೇ ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಒಂದಿಷ್ಟು ಕ್ಷೇತ್ರಗಳಿಗೆ ತನ್ನ ಹುರಿಯಾಳುಗಳನ್ನು ಪ್ರಕಟಿಸಿದ್ದವು. ಮೊದಲ ಹಂತದ ಚುನಾವಣೆಗೆ ಮಾ.28 ರಿಂದ ಅಧಿಸೂಚನೆ ಜಾರಿಯಾಗಲಿದೆ. 11 ದಿನಗಳು ಮಾತ್ರ ಬಾಕಿ ಇದ್ದು ಆ ವೇಳೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಬೇಕಾದ ಅನಿವಾರ್ಯತೆ ಮೂರೂ ಪಕ್ಷಗಳಿಗೂ ಇದೆ.

ಇರುವುದರಲ್ಲಿ ಬಿಜೆಪಿ 21 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿ ಮೊದಲ ಸ್ಥಾನದಲ್ಲಿದೆ. ಕಾಂಗ್ರೆಸ್ 7 ಕ್ಷೇತ್ರಗಳಿಗಷ್ಟೇ ಸ್ಪರ್ಧಿಗಳನ್ನು ಇತ್ಯರ್ಥಪಡಿಸಿದೆ.ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಕೋಲಾರ, ಮಂಡ್ಯ, ಹಾಸನ ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆಯಿದ್ದು, ಹಾಸನಕ್ಕೆ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ.

ಮಂಡ್ಯ, ಕೋಲಾರ ಕ್ಷೇತ್ರಗಳ ಅಭ್ಯರ್ಥಿಗಳ ಕುರಿತು ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷ ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಉತ್ತರ ಕನ್ನಡ, ಚಾಮರಾಜನಗರ, ಉಡುಪಿ-ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಬೀದರ್, ಬಳ್ಳಾರಿ, ಬಾಗಲಕೋಟೆ, ದಕ್ಷಿಣ ಕನ್ನಡ, ರಾಯಚೂರು, ಕಲಬುರಗಿ, ಕೊಪ್ಪಳ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿದೆ.

ಇಂದಿನಿಂದ 3 ದಿನಗಳ ಕಾಲ ಕಾಂಗ್ರೆಸ್ ನಾಯಕರು ನಿರಂತರವಾದ ಚರ್ಚೆ ನಡೆಸಲಿದ್ದು, ಅಭ್ಯರ್ಥಿಗಳ ಆಯ್ಕೆಗೆ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಬಹುತೇಕ ಮಂಗಳವಾರ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಲಾಗುತ್ತದೆ ಎಂದು ಹೇಳಲಾಗಿದೆ.

ಬಾಕಿ ಉಳಿದ ಕ್ಷೇತ್ರದ ಪೈಕಿ ಮೈಸೂರು ಕಾಂಗ್ರೆಸ್‍ಗೆ ಪ್ರತಿಷ್ಠೆಯ ಕಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರವಾಗಿರುವುದರಿಂದ ಈ ಬಾರಿ ಗೆಲ್ಲಲೇಬೇಕೆಂಬ ಅನಿವಾರ್ಯತೆ ಇತ್ತು. ಆದರೆ ಬಿಜೆಪಿ ಮೈಸೂರಿನ ರಾಜಮನೆತನದ ಯದುವೀರ್ ಅವರನ್ನು ಕಣಕ್ಕಿಳಿಸುವ ಮೂಲಕ ಮಾಸ್ಟರ್ ಸ್ಟ್ರೋಕ್ ನೀಡಿದೆ.

ಹೀಗಾಗಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪುತ್ರ ಯತೀಂದ್ರ ಅವರನ್ನೇ ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.ಈ ಮೊದಲು ಕಾಂಗ್ರೆಸ್ ಸರ್ಕಾರ ಎಂ.ಲಕ್ಷ್ಮಣ್ ಅವರ ಹೆಸರು ಬಹುತೇಕ ನಿಶ್ಚಿತವಾಗಿತ್ತು. ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಿಜೆಪಿ ಅಭ್ಯರ್ಥಿಯಾಗಿರುವುದರಿಂದ ಕಾಂಗ್ರೆಸ್ ಸೆಲೆಬ್ರಿಟಿಗಳನ್ನು ಹುಡುಕಲಾರಂಭಿಸಿದೆ. ಮಂಡ್ಯದಿಂದ ಸಂಸದೆಯಾಗಿ ಸದ್ಯಕ್ಕೆ ರಾಜಕೀಯವಾಗಿ ತಟಸ್ಥರಾಗಿರುವ ರಮ್ಯ ಸೇರಿದಂತೆ ಹಲವರ ಹೆಸರುಗಳು ಚಾಲ್ತಿಯಲ್ಲಿವೆ.

ಉತ್ತರ ಕನ್ನಡದಿಂದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್, ಬೀದರ್‍ನಿಂದ ಮಾಜಿ ಶಾಸಕ ರಾಜಶೇಖರ್ ಪಾಟೀಲ್, ದಕ್ಷಿಣ ಕನ್ನಡದಿಂದ ವಿನಯಕುಮಾರ್ ಸೊರಕೆ, ಕೊಪ್ಪಳದಿಂದ ರಾಜಶೇಖರ್ ಹಿಟ್ನಾಳ್ , ಬೆಂಗಳೂರು ದಕ್ಷಿಣದಿಂದ ಸೌಮ್ಯರೆಡ್ಡಿ, ಚಾಮರಾಜನಗರದಿಂದ ಸುನಿಲ್ ಬೋಸ್, ದಾವಣಗೆರೆಯಿಂದ ಪ್ರಭಾ ಮಲ್ಲಿಕಾರ್ಜುನ್ ಕಣಕ್ಕಿಳಿಯುವ ನಿರೀಕ್ಷೆಗಳಿವೆ.ಬಿಜೆಪಿ 21 ಕ್ಷೇತ್ರಗಳಿಗೆ ಮಾತ್ರ ಹುರಿಯಾಳುಗಳನ್ನು ಘೋಷಣೆ ಮಾಡಿದೆ. ಬಾಕಿ ಉಳಿದಂತೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಪ್ರತಿನಿಸಿದ್ದ ಚಿತ್ರದುರ್ಗ ಕ್ಷೇತ್ರಕ್ಕೆ ಅಭ್ಯರ್ಥಿ ಬಾಕಿ ಉಳಿದಿದೆ. ಸಂಸದ ಬಿ.ಎನ್.ಬಚ್ಚೇಗೌಡ ಪ್ರತಿನಿಸಿದ್ದ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿ ಹುಡುಕಾಟ ನಡೆದಿದೆ.

ಬೆಳಗಾವಿಯಲ್ಲಿ ಸಂಸದೆ ಮಂಗಳಾ ಬದಲಾಗಿ ಜಗದೀಶ್ ಶೆಟ್ಟರ್ ಅಭ್ಯರ್ಥಿಯಾಗುವ ನಿರೀಕ್ಷೆಗಳಿವೆ. ಉತ್ತರ ಕನ್ನಡ ಜಿಲ್ಲೆ ಕ್ಷೇತ್ರಗಳಿಗೆ ವಿವಾದಿತ ಸಂಸದ ಅನಂತ ಕುಮಾರ್ ಹೆಗಡೆ ಅವರಿಗೆ ಮತ್ತೆ ಮಣೆ ಹಾಕಲಾಗುವುದೋ ಇಲ್ಲವೋ ಎಂಬ ಕುತೂಹಲ ತೀವ್ರವಾಗಿದ್ದು, ಎಲ್ಲವೂ ಚರ್ಚೆಯ ಹಂತದಲ್ಲಿದೆ.

ರಾಯಚೂರು ಕ್ಷೇತ್ರದಿಂದ ರಾಜ ಅಮರೇಶ ನಾಯಕ ಅವರಿಗೆ ಮತ್ತೆ ಮಣೆ ಹಾಕುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಮೂರೂ ಪಕ್ಷಗಳಲ್ಲೂ ಟಿಕೆಟ್‍ಗಾಗಿ ಸಾಕಷ್ಟು ಲಾಬಿಗಳು ನಡೆಯುತ್ತಿವೆ. ಆದರೆ ವರಿಷ್ಠರು ಈ ಚುನಾವಣೆ ಅತ್ಯಂತ ಮಹತ್ವದ್ದಾಗಿರುವುದರಿಂದ ಗೆಲ್ಲುವ ಅಭ್ಯರ್ಥಿಗಳಿಗೆ ಮಣೆ ಹಾಕಲು ಮುಂದಾಗಿದ್ದಾರೆ.

RELATED ARTICLES

Latest News