Homeರಾಷ್ಟ್ರೀಯರಾಹುಲ್‌ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಟಿವಿಕೆ ಬೆಂಬಲಿಸದಿದ್ದರೆ ರಾಜೀನಾಮೆ : ಕಾಂಗ್ರೆಸ್ ಸಚಿವರು

ರಾಹುಲ್‌ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಟಿವಿಕೆ ಬೆಂಬಲಿಸದಿದ್ದರೆ ರಾಜೀನಾಮೆ : ಕಾಂಗ್ರೆಸ್ ಸಚಿವರು

ನಾಗರಕೋಯಿಲ್‌, ಆ.31 (ಪಿಟಿಐ)- 2029ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬೆಂಬಲಿಸಲು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಒಪ್ಪದಿದ್ದರೆ, ತಾವು ಹಾಗೂ ಸಹೋದ್ಯೋಗಿ ಪಿ. ವಿಶ್ವನಾಥನ್‌ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಮಿಳುನಾಡು ಸಚಿವ ಎಸ್‌. ರಾಜೇಶ್‌ ಕುಮಾರ್‌ ಹೇಳಿದ್ದಾರೆ.

ರಾಹುಲ್‌ ಗಾಂಧಿ ಅವರನ್ನು ಭಾರತದ ಮುಂದಿನ ಪ್ರಧಾನಿಯಾಗಿ ಕಾಂಗ್ರೆಸ್‌ ಬೆಂಬಲಿಸುತ್ತಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿ. ಜೋಸೆಫ್‌ ವಿಜಯ್‌ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಬೇಕು ಎಂಬ ಟಿವಿಕೆ ನಾಯಕರು ಹಾಗೂ ಕಾರ್ಯಕರ್ತರ ಒತ್ತಾಯದ ನಡುವೆಯೇ ರಾಜೇಶ್‌ ಕುಮಾರ್‌ ಈ ಹೇಳಿಕೆ ನೀಡಿದ್ದಾರೆ.

ಟಿವಿಕೆ ಈ ವಿಚಾರದಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡದಿದ್ದರೆ, ತಾವು ಮತ್ತು ಉನ್ನತ ಶಿಕ್ಷಣ ಸಚಿವ ಪಿ. ವಿಶ್ವನಾಥನ್‌ ತಮ್ಮ ಸಚಿವ ಸ್ಥಾನಗಳಿಗೆ ರಾಜೀನಾಮೆ ನೀಡಲು ಸಿದ್ಧರಿರುವುದಾಗಿ ಕುಮಾರ್‌ ತಿಳಿಸಿದ್ದಾರೆ.

ಮೇ ತಿಂಗಳಲ್ಲಿ ಸರ್ಕಾರ ರಚನೆಗೆ ವಿಜಯ್‌ ನೇತೃತ್ವದ ಟಿವಿಕೆಗೆ ಕಾಂಗ್ರೆಸ್‌ ಬೆಂಬಲ ನೀಡಿದ ಬಳಿಕ ಕಾಂಗ್ರೆಸ್‌ಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಲಾಗಿತ್ತು. ಇದೀಗ ರಾಜೇಶ್‌ ಕುಮಾರ್‌ ಅವರ ಹೇಳಿಕೆ ಕಾಂಗ್ರೆಸ್‌ ಹಾಗೂ ಟಿವಿಕೆ ನಡುವಿನ ಮೈತ್ರಿಯಲ್ಲಿ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆಯನ್ನು ಹೆಚ್ಚಿಸಿದೆ.

ಕನ್ಯಾಕುಮಾರಿಯಲ್ಲಿ ನಿನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜೇಶ್‌ ಕುಮಾರ್‌, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿಸುವ ಏಕೈಕ ಪ್ರಧಾನಿ ಅಭ್ಯರ್ಥಿ ರಾಹುಲ್‌ ಗಾಂಧಿ ಎಂಬ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಪಿ. ವಿಶ್ವನಾಥನ್‌ ಅವರ ಪ್ರತಿಕ್ರಿಯೆ ತಕ್ಷಣಕ್ಕೆ ಲಭ್ಯವಾಗಿಲ್ಲ. ಆದರೆ ರಾಜೇಶ್‌ ಕುಮಾರ್‌ ಅವರ ಹೇಳಿಕೆ ಕಾಂಗ್ರೆಸ್‌ ಮತ್ತು ಟಿವಿಕೆ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

RELATED ARTICLES
spot_img

Latest News