Homeರಾಜ್ಯಪಶುವೈದ್ಯರ ನೇಮಕಾತಿ ಹಗರಣ : ಬಿಜೆಪಿ ಕಾರ್ಯಕರ್ತ ಬಸವರಾಜ್‌ ಕನ್ನಾಳೆ ಸಿಐಡಿ ವಶಕ್ಕೆ

ಪಶುವೈದ್ಯರ ನೇಮಕಾತಿ ಹಗರಣ : ಬಿಜೆಪಿ ಕಾರ್ಯಕರ್ತ ಬಸವರಾಜ್‌ ಕನ್ನಾಳೆ ಸಿಐಡಿ ವಶಕ್ಕೆ

ಬೆಂಗಳೂರು, ಆ.31- ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಐಡಿ ಅಧಿಕಾರಿಗಳು, ಪ್ರಮುಖ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದ ಎನ್ನಲಾದ ಬಿಜೆಪಿ ಕಾರ್ಯಕರ್ತ ಬಸವರಾಜ್‌ ಕನ್ನಾಳೆಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ.

ಬೀದರ್‌ ಜಿಲ್ಲೆಯ ಭಾಲ್ಕಿ ಮೂಲದ ಬಸವರಾಜ್‌ ಕನ್ನಾಳೆ, ಹಗರಣದ ಪ್ರಮುಖ ಆರೋಪಿಯಾಗಿರುವ ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್‌ ಗಂಗ್ವಾರ್‌ ಹಾಗೂ ಉದ್ಯೋಗಾಕಾಂಕ್ಷಿಗಳ ನಡುವೆ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸಿದ್ದನು ಎನ್ನಲಾಗಿದೆ.

ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ಎಸಗಲು 12ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಗಂಗ್ವಾರ್‌ ಅವರೊಂದಿಗೆ ಸಂಪರ್ಕ ಕಲ್ಪಿಸುವಲ್ಲಿ ಬಸವರಾಜ್‌ ಪ್ರಮುಖ ಪಾತ್ರ ವಹಿಸಿದ್ದನು ಎಂಬ ಆರೋಪ ಕೇಳಿಬಂದಿದೆ. ದೆಹಲಿಯಲ್ಲಿ ವಶಕ್ಕೆ ಪಡೆದ ಬಳಿಕ ಆರೋಪಿಯನ್ನು ಬೆಂಗಳೂರಿಗೆ ಕರೆತರಲಾಗಿದೆ ಎಂದು ತಿಳಿದುಬಂದಿದೆ.

ಭಾಲ್ಕಿಯ ಎರಡು ಮನೆಗಳಲ್ಲಿ ಪರಿಶೀಲನೆ

ಬಸವರಾಜ್‌ ಕನ್ನಾಳೆ ವಶಕ್ಕೆ ಪಡೆದ ಬೆನ್ನಲ್ಲೇ ಭಾಲ್ಕಿ ಪಟ್ಟಣದ ಲೆಕ್ಚರ್‌ ಕಾಲೋನಿಯಲ್ಲಿರುವ ಅವರ ನಿವಾಸ ಹಾಗೂ ದೋಣಗಾಪುರ ಗ್ರಾಮದ ನಿವಾಸದಲ್ಲಿ ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೇಲಧಿಕಾರಿಗಳ ಸೂಚನೆಯ ಮೇರೆಗೆ ಈ ತಪಾಸಣೆ ನಡೆಸಲಾಗಿದೆ ಎಂದು ವರದಿಯಾಗಿದೆ. ಪರಿಶೀಲನೆ ವೇಳೆ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು, ಎಲೆಕ್ಟ್ರಾನಿಕ್‌ ಸಾಧನಗಳು ಅಥವಾ ಇತರೆ ಪ್ರಮುಖ ಮಾಹಿತಿಗಳು ಪತ್ತೆಯಾಗಿವೆಯೇ ಎಂಬುದು ತನಿಖೆ ಮುಂದುವರಿದಂತೆ ಸ್ಪಷ್ಟವಾಗಬೇಕಿದೆ.

ಹುದ್ದೆಗೆ ₹80 ಲಕ್ಷದಿಂದ ₹1 ಕೋಟಿ ಬೇಡಿಕೆ ಆರೋಪ

ಕೆಪಿಎಸ್‌ಸಿ 400 ಪಶುವೈದ್ಯಾಧಿಕಾರಿ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿಯನ್ನು ಜುಲೈ 17ರಂದು ಪ್ರಕಟಿಸಿತ್ತು. ಇದರಲ್ಲಿ 342 ಸಾಮಾನ್ಯ ಹುದ್ದೆಗಳು ಹಾಗೂ 58 ಬ್ಯಾಕ್‌ಲಾಗ್‌ ಹುದ್ದೆಗಳು ಸೇರಿದ್ದವು.ಆಯ್ಕೆ ಪಟ್ಟಿ ಪ್ರಕಟವಾದ ಬಳಿಕ ನೇಮಕಾತಿಯಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಕೆಲವು ಅಭ್ಯರ್ಥಿಗಳು ಪಶುವೈದ್ಯಾಧಿಕಾರಿ ಹುದ್ದೆ ಕೊಡಿಸಲು ₹80 ಲಕ್ಷದಿಂದ ₹1 ಕೋಟಿವರೆಗೆ ಹಣಕ್ಕೆ ಬೇಡಿಕೆ ಇಡಲಾಗಿತ್ತು ಎಂದು ಆರೋಪಿಸಿದ್ದರು.

ಇದಲ್ಲದೆ, ಕೆಲವು ಅಭ್ಯರ್ಥಿಗಳು ಮಧ್ಯವರ್ತಿಗಳೊಂದಿಗೆ ನಡೆದಿದೆ ಎನ್ನಲಾದ ಸಂಭಾಷಣೆಗಳ ಆಡಿಯೋ, ಛಾಯಾಚಿತ್ರ ಹಾಗೂ ವಿಡಿಯೋಗಳನ್ನು ಕೂಡ ಬಹಿರಂಗಪಡಿಸಿದ್ದರು. ಆರೋಪಗಳ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪಶುವೈದ್ಯ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿ, ನೇಮಕಾತಿ ಪ್ರಕ್ರಿಯೆಯ ಬಗ್ಗೆ ಸಮಗ್ರ ಹಾಗೂ ಪಾರದರ್ಶಕ ತನಿಖೆಗೆ ಒತ್ತಾಯಿಸಿದ್ದರು.ಆದರೆ, ಈ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದಲೇ ಅಂತಿಮವಾಗಿ ದೃಢಪಡಿಸಬೇಕಿದೆ.

ಕೆಪಿಎಸ್‌ಸಿ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ

ಆರೋಪಗಳು ತೀವ್ರಗೊಂಡ ಹಿನ್ನೆಲೆಯಲ್ಲಿ ಕೆಪಿಎಸ್‌ಸಿ ತುರ್ತು ಸಭೆ ನಡೆಸಿ 400 ಪಶುವೈದ್ಯಾಧಿಕಾರಿಗಳ ಆಯ್ಕೆ ಪಟ್ಟಿಯನ್ನು ತಾತ್ಕಾಲಿಕವಾಗಿ ತಡೆಹಿಡಿದಿತ್ತು. ಅಕ್ರಮಗಳ ಕುರಿತು ಆಂತರಿಕ ತನಿಖೆ ನಡೆಸಲು ಸಮಿತಿಯನ್ನೂ ರಚಿಸಲಾಗಿತ್ತು.

ಇದೇ ವೇಳೆ ಜುಲೈ 24ರಂದು ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾಜಿ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್‌. ಸಾಹುಕಾರ್‌ ಸೇರಿದಂತೆ ಕೆಲ ಅಧಿಕಾರಿಗಳು ಹಾಗೂ ಅಭ್ಯರ್ಥಿಗಳ ಹೆಸರುಗಳು ಎಫ್‌ಐಆರ್‌ನಲ್ಲಿ ಕಾಣಿಸಿಕೊಂಡಿದ್ದವು.ನಂತರ ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಜುಲೈ 28ರಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಎಂ.ಎ. ಸಲೀಂ ಅವರು ಸಿಐಡಿ ತನಿಖೆಗೆ ಸಂಬಂಧಿಸಿದ ಆದೇಶ ಹೊರಡಿಸಿದ್ದರು.

ಗಂಗ್ವಾರ್‌ ಬಳಿಕ ಕನ್ನಾಳೆ ಸಿಐಡಿ ಬಲೆಗೆ

ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆಯಲು ಪ್ರಮುಖ ಕಾರಣವಾಗಿದ್ದು, ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್‌ ಗಂಗ್ವಾರ್‌ ಅವರನ್ನು ಸಿಐಡಿ ವಶಕ್ಕೆ ಪಡೆದಿರುವುದು.2016ನೇ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಎಎಸ್‌ ಅಧಿಕಾರಿಯಾಗಿರುವ ಗಂಗ್ವಾರ್‌, ಪಶುವೈದ್ಯಾಧಿಕಾರಿ ನೇಮಕಾತಿ ಪ್ರಕ್ರಿಯೆ ನಡೆದ ಅವಧಿಯಲ್ಲಿ ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ ಎಂಎಸ್‌ಎಂಇ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.

ಆಗಸ್ಟ್‌ 28 ಮತ್ತು 29ರಂದು ಸಿಐಡಿ ಅಧಿಕಾರಿಗಳು ಗಂಗ್ವಾರ್‌ ಅವರನ್ನು ಸುದೀರ್ಘವಾಗಿ ವಿಚಾರಣೆ ನಡೆಸಿದ ಬಳಿಕ ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಅವರು ನೀಡಿದ ಉತ್ತರಗಳ ಬಗ್ಗೆ ತನಿಖಾಧಿಕಾರಿಗಳಿಗೆ ಅಸಮಾಧಾನ ಉಂಟಾಗಿತ್ತು ಎನ್ನಲಾಗಿದೆ. ಬಳಿಕ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದೀಗ ಗಂಗ್ವಾರ್‌ ಅವರೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾದ ಬಸವರಾಜ್‌ ಕನ್ನಾಳೆ ಸಿಐಡಿ ವಶಕ್ಕೆ ಸಿಕ್ಕಿರುವುದು ಪ್ರಕರಣದ ತನಿಖೆಗೆ ಮತ್ತಷ್ಟು ವೇಗ ನೀಡಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮದ ಹಿಂದೆ ಇನ್ನಷ್ಟು ಮಧ್ಯವರ್ತಿಗಳು ಹಾಗೂ ಪ್ರಭಾವಿಗಳ ಪಾತ್ರವಿದೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಯುವ ಸಾಧ್ಯತೆಯಿದೆ.

ಪಶುವೈದ್ಯಾಧಿಕಾರಿ ನೇಮಕಾತಿ ಸೇರಿದಂತೆ ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ಹಾಗೂ ಪ್ರಭಾವಿಗಳ ಹಸ್ತಕ್ಷೇಪದ ಆರೋಪಗಳು ಉದ್ಯೋಗಾಕಾಂಕ್ಷಿಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸಿಐಡಿ ತನಿಖೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ವ್ಯಕ್ತಿಗಳತ್ತ ತಿರುಗುವ ಸಾಧ್ಯತೆಯಿದೆ.

RELATED ARTICLES
spot_img

Latest News