ಮಾಸ್ಕೊ,ಮಾ.17- ರಷ್ಯಾ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯ ಕೊನೆಯ ದಿನದಂದು ಉಕ್ರೇನ್ ಭಾರಿ ಪ್ರಮಾಣದ ಡ್ರೋನ್ ದಾಳಿಯನ್ನು ನಡೆಸಿದೆ.ಉಕ್ರೇನ್ ಭಾಗದಿಂದ 35 ಕ್ಕೂ ಹೆಚ್ಚು ಡ್ರೋನ್‍ಗಳು ರಾಜಧಾನಿ ಮಾಸ್ಕೊ ಸೇರಿದಂತೆ ಹಲವು ವಲಯಗಳ ಮೇಲೆ ದಾಳಿ ನಡೆಸಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.
ಮುಂದಿನ 6 ವರ್ಷಗಳವರೆಗೆ ವ್ಲಾಡಿಮಿರ್ ಪುಟಿನ್ ಅವರನ್ನು ಅಧ್ಯಕ್ಷರನ್ನಾಗಿ ಮುಂದುವರೆಸುವ ಕುರಿತಂತೆ ಚುನಾವಣೆ ಪ್ರಕ್ರಿಯೆಗಳು ನಡೆಯುತ್ತಿವೆ. ಅಂತಿಮ ದಿನದ ಮತದಾನದ ಸಂದರ್ಭದಲ್ಲೇ ಉಕ್ರೇನ್ ದಾಳಿ ನಡೆಸಿದೆ.ಮಾಸ್ಕೊದ ಮೇಯರ್ ಶೆರ್ಗೆಯಿ ಸೊಬಾನಿಯನ್ ಅವರ ಪ್ರಕಾರ, ಡ್ರೋನ್ ದಾಳಿಯಿಂದ ಯಾವುದೇ ಜೀವಹಾನಿಯಾಗಿಲ್ಲ. ಆಸ್ತಿಪಾಸ್ತಿಗಳಿಗೂ ನಷ್ಟವಾಗಿಲ್ಲ.
ರಷ್ಯಾ ಸೇನಾಪಡೆಗಳು ತಕ್ಷಣಕ್ಕೆ ಡ್ರೋನ್‍ಗಳನ್ನು ಹೊಡೆದುರುಳಿಸಿವೆ. ಕಲುಗ ವಲಯದಲ್ಲಿ 2 ಡ್ರೋನ್‍ಗಳನ್ನು ಶೂಟ್ ಮಾಡಲಾಗಿದೆ. ಮಾಸ್ಕೊದಿಂದ ಉತ್ತರ ಭಾಗಕ್ಕಿರುವ ಯಾರೊಸ್ಲಾವಲ್‍ನಲ್ಲೂ ಡ್ರೋನ್‍ಗಳನ್ನು ನಾಶಪಡಿಸಲಾಗಿದೆ. ಉಕ್ರೇನ್ ಗಡಿಯಿಂದ 800 ಕಿ.ಮೀ. ದೂರದವರೆಗೂ ದಾಳಿಗಳು ನಡೆದಿವೆ.ಉಳಿದಂತೆ ಬೆಲೊಗ್ರೋಡ್, ಕುರಸ್ಕ್, ರೊಸ್ಟಾವ್, ಕಾರ್ಸೊಂಡಾರ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಈ ದಾಳಿಗಳಾಗಿವೆ.
ಶತ್ರು ರಾಷ್ಟ್ರ ರಷ್ಯಾದ ಶಾಂತಿಭಂಗ ಹಾಗೂ ಚುನಾವಣಾ ಪ್ರಕ್ರಿಯೆಯನ್ನು ವಿಚಲಿತಗೊಳಿಸಲು ಪ್ರಯತ್ನ ನಡೆಸುತ್ತಿದೆ ಎಂದು ವ್ಲಾಡಿಮಿರ್ ಪುಟಿನ್ ಆರೋಪಿಸಿದರು.ಆದರೆ ನಮ್ಮ ಜನ ಅದಕ್ಕೆ ಒಟ್ಟಾಗಿ ಪ್ರತಿಕ್ರಿಯಿಸುತ್ತಾರೆ ಎಂಬ ದೃಢ ವಿಶ್ವಾಸ ಇರುವುದಾಗಿಯೂ ಹೇಳಿದರು. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ 3 ವರ್ಷಗಳಿಂದಲೂ ನಡೆಯುತ್ತಿದೆ. ಬಹಳಷ್ಟು ಗಂಭೀರ ಪ್ರಮಾಣದ ಹಾನಿಗಳಾಗಿವೆ. ಜೀವಹಾನಿಯೂ ತೀವ್ರಗೊಂಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಆರ್ಥಿಕವಾಗಿ ಕೆಟ್ಟ ಪರಿಣಾಮ ಬೀರಿದೆ. ಪರಸ್ಪರ ದಾಳಿ ನಡೆಸುವ ಮೂಲಕ ಉಭಯ ರಾಷ್ಟ್ರಗಳು ಯುದ್ಧವನ್ನು ಮುಂದುವರೆಸುತ್ತಲೇ ಇವೆ.