Homeಇದೀಗ ಬಂದ ಸುದ್ದಿಕೆಪಿಎಸ್‌ಸಿ ಹಗರಣದಲ್ಲಿ ನನ್ನ ಪಾತ್ರ ಸಾಬೀತಾದರೆ ರಾಜಕೀಯ ನಿವೃತ್ತಿ: ಪ್ರಿಯಾಂಕ್‌ ಖರ್ಗೆ

ಕೆಪಿಎಸ್‌ಸಿ ಹಗರಣದಲ್ಲಿ ನನ್ನ ಪಾತ್ರ ಸಾಬೀತಾದರೆ ರಾಜಕೀಯ ನಿವೃತ್ತಿ: ಪ್ರಿಯಾಂಕ್‌ ಖರ್ಗೆ

ಬೆಂಗಳೂರು, ಆ.31- ಕೆಪಿಎಸ್‌ಸಿ ನೇಮಕಾತಿ ಹಗರಣದಲ್ಲಿ ತಮ್ಮ ನೇರ ಅಥವಾ ಪರೋಕ್ಷ ಪಾತ್ರ ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಸವಾಲು ಹಾಕಿದ್ದಾರೆ. ಇದೇ ವೇಳೆ, ಹಗರಣದಲ್ಲಿ ಜೆಡಿಎಸ್‌ ಅಥವಾ ಬಿಜೆಪಿಯವರ ಪಾತ್ರ ಸಾಬೀತಾದರೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ರಾಜಕೀಯ ನಿವೃತ್ತಿ ಪಡೆಯುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ 24 ಸಹಾಯಕ ಎಂಜಿನಿಯರ್‌ಗಳ ನೇಮಕಾತಿ ವಿಚಾರದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಕುಮಾರಸ್ವಾಮಿ ಅವರು ಯಾವುದೇ ದಾಖಲೆ ಅಥವಾ ಆಧಾರಗಳಿಲ್ಲದೆ ‘ಹಿಟ್‌ ಅಂಡ್‌ ರನ್‌’ ಆರೋಪ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಓಎಂಆರ್‌ ಶೀಟ್‌ ತಿದ್ದುಪಡಿ ವಿಚಾರದಲ್ಲಿ ತಮ್ಮ ವಿರುದ್ಧ ಆರೋಪ ಮಾಡಲಾಗುತ್ತಿದೆ. ಓಎಂಆರ್‌ ಶೀಟ್‌ಗಳು ಸಚಿವರು ಅಥವಾ ಸರ್ಕಾರದ ಇಲಾಖಾ ಕಾರ್ಯದರ್ಶಿಗಳ ಅಧೀನದಲ್ಲಿರುತ್ತವೆಯೇ ಎಂಬುದು ಮಾಜಿ ಮುಖ್ಯಮಂತ್ರಿಗೆ ಗೊತ್ತಿಲ್ಲವೇ? ಕೆಪಿಎಸ್‌ಸಿಯ ಅಧೀನದಲ್ಲಿರುವ ಓಎಂಆರ್‌ ಶೀಟ್‌ಗಳಲ್ಲಿ ಅಕ್ರಮ ನಡೆದಿದ್ದರೆ ಅದಕ್ಕೆ ಸಚಿವರು ಹೇಗೆ ಹೊಣೆಯಾಗುತ್ತಾರೆ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಅವರು ಎಂಜಿನಿಯರ್‌ಗಳ ನೇಮಕಾತಿಯಲ್ಲಿ ನಡೆದಿರುವ ಲೋಪಗಳೇನು ಎಂಬುದನ್ನು ದಾಖಲೆಗಳ ಸಹಿತ ಹೇಳದೆ ಮನಸೋಇಚ್ಛೆ ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಕೇಂದ್ರ ಸಚಿವರ ಘನತೆಗೆ ಇದು ತಕ್ಕದ್ದಲ್ಲ. ನಮಗೂ ಮಾತನಾಡಲು ಬರುತ್ತದೆ. ರಾಜಕೀಯವಾಗಿ ದೊಡ್ಡ ಇತಿಹಾಸವಿರುವ ಕುಟುಂಬದ ಹಿನ್ನೆಲೆಯಿದ್ದಾರೆ ಎಂಬ ಕಾರಣಕ್ಕೆ ನಾವು ಸುಮ್ಮನಿದ್ದೇವೆ ಎಂದು ತಿರುಗೇಟು ನೀಡಿದರು.

ಸರ್ಕಾರಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸುವುದು, ಪರೀಕ್ಷೆ ನಡೆಸುವುದು, ತಾತ್ಕಾಲಿಕ ಹಾಗೂ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುವುದು ಸೇರಿದಂತೆ ಎಲ್ಲ ಪ್ರಕ್ರಿಯೆಗಳನ್ನು ಕೆಪಿಎಸ್‌ಸಿಯೇ ನಿರ್ವಹಿಸುತ್ತದೆ ಎಂದು ಸ್ಪಷ್ಟಪಡಿಸಿದರು.

ಈ ಹಿಂದೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದಾಗ ಆನಂದ ಸಿದ್ದರೆಡ್ಡಿ ಎಂಬುವರು ಆಕ್ಷೇಪಣೆ ಸಲ್ಲಿಸಿದ್ದರು. ಈ ಕುರಿತು ತನಿಖೆ ನಡೆಸಲು ಕೆಪಿಎಸ್‌ಸಿ ಡಾ. ಶಾಂತ ಹೊಸಮನಿ, ಗೀತಾ ಹಾಗೂ ಮುಸ್ತಾಫ ಹುಸೈನ್‌ ಅವರನ್ನೊಳಗೊಂಡ ಮೂರು ಸದಸ್ಯರ ಸಮಿತಿ ರಚಿಸಿತ್ತು. ಉಪ ಸಮಿತಿಯ ತನಿಖೆ ನಡೆಯುತ್ತಿರುವಾಗಲೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗೆ ಅಂತಿಮ ಆಯ್ಕೆ ಪಟ್ಟಿಯನ್ನು ಕಳುಹಿಸಲಾಗಿತ್ತು.

ನಂತರ ಮೂರು ಸದಸ್ಯರ ಸಮಿತಿಯನ್ನು ರದ್ದುಪಡಿಸಿ, ಡಾ. ವಿಜಯ್‌ಕುಮಾರ್‌ ಕೋಚನೂರು ನೇತೃತ್ವದಲ್ಲಿ ಐದು ಸದಸ್ಯರ ಸಮಿತಿಯನ್ನು ಕೆಪಿಎಸ್‌ಸಿ ರಚಿಸಿತು. ಈ ಸಮಿತಿ 40 ಸಭೆಗಳನ್ನು ನಡೆಸಿದೆ. ಆದರೆ ತನಿಖಾ ವರದಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗೆ ನೀಡಿಲ್ಲ. ಈ ಕುರಿತು ಹಲವು ಬಾರಿ ಪತ್ರ ಬರೆದರೂ ಕೆಪಿಎಸ್‌ಸಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದರು.

ಕೆಪಿಎಸ್‌ಸಿ ನೀಡಿದ ಅಂತಿಮ ಆಯ್ಕೆ ಪಟ್ಟಿಯ ಆಧಾರದ ಮೇಲೆ 2025ರ ಜನವರಿ 22ರಂದು ವಿಶ್ವನಾಥ್‌ ಎಂಬುವರಿಗೆ ಕೊನೆಯ ನೇಮಕಾತಿ ಆದೇಶ ನೀಡಲಾಯಿತು. ಇದರ ಮರುದಿನವೇ ಕೆಪಿಎಸ್‌ಸಿ ರಚಿಸಿದ್ದ ಐದು ಸದಸ್ಯರ ಸಮಿತಿ ಅಂದಿನ ಮುಖ್ಯಮಂತ್ರಿಗೆ ವರದಿ ಸಲ್ಲಿಸಿತ್ತು ಎಂದು ವಿವರಿಸಿದರು.

ನೇಮಕಾತಿಯಲ್ಲಿ ಲೋಪಗಳಾಗಿದ್ದರೆ ಆಯ್ಕೆ ಪಟ್ಟಿಯನ್ನು ತಡೆಹಿಡಿಯಲು ಅಥವಾ ರದ್ದುಗೊಳಿಸಲು ಕೆಪಿಎಸ್‌ಸಿಗೆ ಅಧಿಕಾರವಿದೆ. ಆದರೆ, ಅಂತಹ ಕ್ರಮ ಕೈಗೊಂಡಿರಲಿಲ್ಲ. ಅಂತಿಮವಾಗಿ ನೇಮಕಾತಿ ಆದೇಶಗಳನ್ನು ನೀಡಿದ ಬಳಿಕ ಆಯ್ಕೆ ಪಟ್ಟಿಯನ್ನು ತಡೆಹಿಡಿಯುವಂತೆ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.

ಆಯ್ಕೆಯಾದ ಅಭ್ಯರ್ಥಿಗಳು ಕೆಎಟಿ ಮೊರೆ ಹೋಗಿದ್ದರು. ಬಳಿಕ ಹೈಕೋರ್ಟ್‌ಗೂ ಮೇಲ್ಮನವಿ ಸಲ್ಲಿಸಲಾಗಿತ್ತು. ಯಾವುದೇ ಹಂತದಲ್ಲೂ ನ್ಯಾಯಾಲಯ ತಡೆಯಾಜ್ಞೆ ನೀಡಿಲ್ಲ. ಹೀಗಿರುವಾಗ ಕುಮಾರಸ್ವಾಮಿ ಅವರು ತಮ್ಮ ವಿರುದ್ಧ ಹೇಗೆ ಆರೋಪ ಮಾಡುತ್ತಿದ್ದಾರೆ ಎಂದು ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದರು.

‘ಕುಮಾರಸ್ವಾಮಿಗೆ ಆರೋಪ ಮಾಡುವ ಗುತ್ತಿಗೆ ಸಿಕ್ಕಂತಿದೆ’

ಕೆಪಿಎಸ್‌ಸಿ ನೇಮಕಾತಿ ವಿಚಾರವಾಗಿ ಬಿಜೆಪಿಯವರು ಯಾವುದೇ ಹೋರಾಟ ನಡೆಸುತ್ತಿಲ್ಲ. ಕುಮಾರಸ್ವಾಮಿ ಇತ್ತೀಚೆಗೆ ಆರ್‌ಎಸ್‌ಎಸ್‌ ಕಚೇರಿಗೆ ಭೇಟಿ ನೀಡಿದ್ದರು. ಅಲ್ಲಿಗೆ ಹೋಗಿ ತಮ್ಮ ವಿರುದ್ಧ ಆರೋಪ ಮಾಡಲು ಗುತ್ತಿಗೆ ಪಡೆದಂತಿದೆ ಎಂದು ಪ್ರಿಯಾಂಕ್‌ ಖರ್ಗೆ ವ್ಯಂಗ್ಯವಾಡಿದರು.

ಕೆಪಿಎಸ್‌ಸಿಗೆ ಸಾಹುಕಾರ್‌ ಶಿವಶಂಕರಪ್ಪ ಅವರ ನೇಮಕಾತಿ ಕುರಿತು ಕುಮಾರಸ್ವಾಮಿ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಈ ವಿಚಾರದಲ್ಲೂ ಅವರು ಸ್ಪಷ್ಟನೆ ನೀಡಬೇಕು ಎಂದರು.

ಯುವಕರ ಭವಿಷ್ಯದೊಂದಿಗೆ ಚೆಲ್ಲಾಟವಾಡುವ ಯಾರನ್ನೂ ನಮ್ಮ ಸರ್ಕಾರ ಸಹಿಸುವುದಿಲ್ಲ. ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆಯಲ್ಲಿ ಐಎಎಸ್‌ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ. ಅವರು ದೇಶದಿಂದ ಪರಾರಿಯಾಗುವ ಹಂತದಲ್ಲಿದ್ದಾಗಲೇ ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದು ಕರೆತಂದಿದ್ದಾರೆ ಎಂದು ಹೇಳಿದರು. ತನಿಖೆ ಆಳಕ್ಕೆ ಹೋದಷ್ಟು ಬಿಜೆಪಿಯವರ ಆತಂಕವೂ ಹೆಚ್ಚಾಗಲಿದೆ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದರು.

RELATED ARTICLES
spot_img

Latest News