ಬೆಂಗಳೂರು, ಆ.31- ಫ್ಲೈಓವರ್ ಮೇಲೆ ಯಾವುದೇ ಸೂಚನಾ ಲೈಟ್ ಹಾಕದೆ ನಿಲ್ಲಿಸಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ನಿಂಬೆಹಣ್ಣು ವ್ಯಾಪಾರಿಯೊಬ್ಬರು ಮೃತಪಟ್ಟಿರುವ ಘಟನೆ ಪೀಣ್ಯ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ. ಗೊರಗುಂಟೆಪಾಳ್ಯದ ನಿವಾಸಿ ಮಹೇಶ್ (38) ಮೃತ ಬೈಕ್ ಸವಾರ. ಇವರು ದಾಸನಪುರ ಮಾರ್ಕೆಟ್ನಲ್ಲಿ ನಿಂಬೆಹಣ್ಣು ವ್ಯಾಪಾರಿಯಾಗಿದ್ದರು.
ಮಹೇಶ್ ಅವರು ಇಂದು ಬೆಳಗಿನ ಜಾವ ಸುಮಾರು 3.30ರ ವೇಳೆಗೆ ಬೈಕ್ನಲ್ಲಿ ದಾಸನಪುರ ಮಾರ್ಕೆಟ್ಗೆ ತೆರಳುತ್ತಿದ್ದರು. ಪೀಣ್ಯ ಫ್ಲೈಓವರ್ ಮೇಲೆ ಯಾವುದೇ ಸೂಚನಾ ಅಥವಾ ಬ್ಲಿಂಕಿಂಗ್ ಲೈಟ್ ಹಾಕದೆ ಲಾರಿಯನ್ನು ನಿಲ್ಲಿಸಲಾಗಿತ್ತು ಎನ್ನಲಾಗಿದೆ.
ಕತ್ತಲಿನಲ್ಲಿ ಲಾರಿ ನಿಂತಿರುವುದು ಗಮನಕ್ಕೆ ಬಾರದ ಹಿನ್ನೆಲೆಯಲ್ಲಿ ಬೈಕ್ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮಹೇಶ್ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಪೀಣ್ಯ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
