ಬೆಂಗಳೂರು, ಆ.31- ಆರ್.ಆರ್.ನಗರದ ಉದ್ಯಮಿ ರವಿಪ್ರಕಾಶ್ ಅವರನ್ನು ಅಪಹರಣ ಮಾಡಿಲ್ಲ. ಆಂಧ್ರಪ್ರದೇಶ ಪೊಲೀಸರು ಕೊಲೆಯತ್ನ ಪ್ರಕರಣದ ವಿಚಾರಣೆಗಾಗಿ ಕರೆದೊಯ್ದಿದ್ದಾರೆ ಎಂದು ನಗರ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಆಂಧ್ರಪ್ರದೇಶದ ಮೈದುಕೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕೊಲೆಯತ್ನ ಪ್ರಕರಣದಲ್ಲಿ ರವಿಪ್ರಕಾಶ್ ಅವರು 5ನೇ ಆರೋಪಿಯಾಗಿದ್ದಾರೆ. ಹೀಗಾಗಿ ಆಂಧ್ರ ಪೊಲೀಸರು ಅವರ ಮನೆ ಬಳಿ ಬಂದು ಕಾರಿನಲ್ಲಿ ಕರೆದೊಯ್ದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ‘ಈ ಸಂಜೆಗೆ’ ತಿಳಿಸಿದ್ದಾರೆ.
ಆದರೆ, ರವಿಪ್ರಕಾಶ್ ಅವರ ಕುಟುಂಬದವರು ಇದಕ್ಕೆ ವ್ಯತಿರಿಕ್ತವಾಗಿ ಆರೋಪ ಮಾಡಿದ್ದಾರೆ. ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಬಂದ ಕೆಲವರು ಅವರನ್ನು ಬಲವಂತವಾಗಿ ಕರೆದೊಯ್ದು ಅಪಹರಿಸಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಾರೆ.
ಜಮೀನು ವಿವಾದದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಗಣ್ಯ ವ್ಯಕ್ತಿಯೊಬ್ಬರ ಕೈವಾಡದಿಂದ ರವಿಪ್ರಕಾಶ್ ಅವರನ್ನು ಅಪಹರಿಸಿ ಆಂಧ್ರಪ್ರದೇಶಕ್ಕೆ ಕರೆದೊಯ್ಯಲಾಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಈ ಸಂಬಂಧ ಕುಟುಂಬಸ್ಥರು ನೀಡಿರುವ ದೂರನ್ನೂ ಆರ್.ಆರ್.ನಗರ ಠಾಣೆ ಪೊಲೀಸರು ಸ್ವೀಕರಿಸಿದ್ದು, ಆರೋಪಗಳ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆಂಧ್ರ ಪೊಲೀಸರ ಕ್ರಮ ಹಾಗೂ ಕುಟುಂಬದವರ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದ ಸ್ಪಷ್ಟವಾಗಬೇಕಿದೆ.
