ಕೊಚ್ಚಿ, ಸೆ.17- ಅನುಮತಿಸಲಾದ ಪ್ರಮಾಣಕ್ಕಿಂತ ಹೆಚ್ಚಿನ ಮದ್ಯ ಪತ್ತೆಯಾದ ಹಿನ್ನೆಲೆಯಲ್ಲಿ ಮಲಯಾಳಂ ಖಾಸಗಿ ಸುದ್ದಿವಾಹಿನಿಯೊಂದರ ವ್ಯವಸ್ಥಾಪಕ ನಿರ್ದೇಶಕ ಅಂಟೋ ಆಗಸ್ಟಿನ್ ಅವರನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಇಂದು ಮುಂಜಾನೆ ಬಂಧಿಸಿದ್ದಾರೆ.
ವಯನಾಡಿನಲ್ಲಿರುವ ಅವರ ಪಾರಂಪರಿಕ ಮನೆಯಲ್ಲಿ ಪೊಲೀಸರು ನಡೆಸಿದ ಶೋಧದ ವೇಳೆ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದ ಮದ್ಯ ಪತ್ತೆಯಾದ ಹಿನ್ನೆಲೆಯಲ್ಲಿ, ಪೊಲೀಸ್ ವರದಿ ಆಧರಿಸಿ ಅಬಕಾರಿ ಇಲಾಖೆ ಪ್ರಕರಣ ದಾಖಲಿಸಿದೆ. ಅಬಕಾರಿ ಕಾಯ್ದೆಯಡಿ ಜಾಮೀನು ರಹಿತ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧನ ಬಳಿಕ ಆಗಸ್ಟಿನ್ ಅವರನ್ನು ವಯನಾಡಿಗೆ ಕರೆದೊಯ್ಯಲಾಯಿತು.
ಇದಕ್ಕೂ ಮುನ್ನ, ಅರ್ಜೆಂಟೀನಾದ ಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಭಾಗವಹಿಸಬೇಕಿದ್ದ ಫುಟ್ಬಾಲ್ ಕಾರ್ಯಕ್ರಮದಲ್ಲಿ ನಡೆದಿರುವ ಅಕ್ರಮಗಳ ಆರೋಪದ ತನಿಖೆಯ ಭಾಗವಾಗಿ ವಿಶೇಷ ತನಿಖಾ ತಂಡ (ಎಸ್ಐಟಿ) ಆಗಸ್ಟಿನ್ ಹಾಗೂ ಅವರ ಇಬ್ಬರು ಸಹೋದರರ ಕೊಚ್ಚಿ ಮತ್ತು ವಯನಾಡಿನ ಕಚೇರಿ, ನಿವಾಸಗಳಲ್ಲಿ ಶೋಧ ನಡೆಸಿತ್ತು. ಈ ಕಾರ್ಯಕ್ರಮವನ್ನು ರಿಪೋರ್ಟರ್ ಬ್ರಾಡ್ಕಾಸ್ಟಿಂಗ್ ಕಂಪನಿ ಪ್ರಾಯೋಜಿಸಿತ್ತು.
ತಮ್ಮ ಬಂಧನದ ಕುರಿತು ಪ್ರತಿಕ್ರಿಯಿಸಿದ ಆಗಸ್ಟಿನ್, ಮೆಸ್ಸಿ ಸಂಬಂಧಿತ ತನಿಖೆಗೆ ಅಗತ್ಯವಿದ್ದ ಎಲ್ಲ ದಾಖಲೆಗಳನ್ನು ನೀಡಲಾಗಿದೆ ಎಂದರು. ಅಬಕಾರಿ ಅಧಿಕಾರಿಗಳು ಬೆಳಗಿನ ಜಾವ 2 ಗಂಟೆ ಸುಮಾರಿಗೆ ತಮ್ಮನ್ನು ವಶಕ್ಕೆ ಪಡೆದಿದ್ದು, ಪ್ರಕರಣದ ಬಗ್ಗೆ 4.30ರ ಸುಮಾರಿಗೆ ಮಾಹಿತಿ ನೀಡಿದರು ಎಂದು ಹೇಳಿದರು.
ತಮ್ಮ ಮನೆಯಲ್ಲಿ 67 ಲೀಟರ್ ಮದ್ಯ ವಶಪಡಿಸಿಕೊಂಡಿರುವ ಬಗ್ಗೆ ತನಗೆ ತಿಳಿದಿಲ್ಲ. ತಾನು ಕೊಚ್ಚಿಯಲ್ಲಿದ್ದುದಾಗಿ ಹೇಳಿದ ಅವರು, ಜೀವನದಲ್ಲಿ ನಾನೆಂದೂ ಮದ್ಯ ಸೇವಿಸಿಲ್ಲ ಎಂದರು. ಗೃಹ ಸಚಿವ ರಮೇಶ್ ಚೆನ್ನಿತ್ತಲ ಅವರು, ಎಸ್ಐಟಿ ನ್ಯಾಯಾಲಯದ ವಾರಂಟ್ ಪಡೆದೇ ಶೋಧ ನಡೆಸಿದೆ. ಪೊಲೀಸ್ ತನಿಖೆಯಲ್ಲಿ ಗೃಹ ಸಚಿವರು ಹಸ್ತಕ್ಷೇಪ ಮಾಡುವುದಿಲ್ಲ ಮತ್ತು ಕಾನೂನು ತನ್ನ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
