Homeರಾಜ್ಯ50 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ತಹಶೀಲ್ದಾರ್‌ ಲೋಕಾಯುಕ್ತ ಬಲೆಗೆ

50 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ತಹಶೀಲ್ದಾರ್‌ ಲೋಕಾಯುಕ್ತ ಬಲೆಗೆ

ಧಾರವಾಡ, ಸೆ.16- ಭೂ ದಾಖಲೆಗಳ ತಿದ್ದುಪಡಿ ಹಾಗೂ ಜಮೀನು ಪೋಡಿ ಮಾಡಿಕೊಡಲು 50 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಧಾರವಾಡ ತಹಶೀಲ್ದಾರ್‌ ಸಚಿದಾನಂದ ಕುಚನೂರ್‌ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಕಳೆದ ರಾತ್ರಿ ರೆಡ್‌ಹ್ಯಾಂಡ್‌ ಆಗಿ ಬಂಧಿಸಿದ್ದಾರೆ.

ಧಾರವಾಡ ತಾಲ್ಲೂಕಿನ ಯಾರಿಕೊಪ್ಪದಲ್ಲಿ ಸುಮಾರು 33 ಎಕರೆ ಜಮೀನು ಖರೀದಿಸಿದ್ದ ಡೆವಲಪರ್‌ರೊಬ್ಬರು, ಭೂಮಿಯ ಸಾಗುವಳಿ ಮತ್ತು ಖರಾಬ್‌ ಭಾಗಗಳ ದಾಖಲೆಗಳನ್ನು ತಿದ್ದುಪಡಿ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದರು. ಈ ಕಾರ್ಯಕ್ಕಾಗಿ ತಹಶೀಲ್ದಾರ್‌ ಒಂದು ಎಕರೆ ಜಮೀನು ಹಾಗೂ 50 ಲಕ್ಷ ರೂ. ನಗದು ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಲೋಕಾಯುಕ್ತ ಎಸ್‌ಪಿ ಸಿದ್ದಲಿಂಗಪ್ಪ ತಿಳಿಸಿದ್ದಾರೆ.

ದೂರುದಾರರು ನಿನ್ನೆ ಮಧ್ಯಾಹ್ನ ಲೋಕಾಯುಕ್ತಕ್ಕೆ ದೂರು ನೀಡಿದ ಬಳಿಕ ಪ್ರಕರಣ ದಾಖಲಿಸಿ ಬಲೆ ಬೀಸಲಾಗಿತ್ತು. ಕೆಸಿಡಿ ಮೈದಾನದ ಬಳಿ ಹಣ ಪಡೆಯುವುದಾಗಿ ತಹಶೀಲ್ದಾರ್‌ ದೂರುದಾರರಿಗೆ ತಿಳಿಸಿದ್ದರು. ಕೆಂಪು ಬಣ್ಣದ ಚೀಲದಲ್ಲಿದ್ದ 50 ಲಕ್ಷ ರೂ.ಗಳನ್ನು ದೂರುದಾರರು ನೀಡಿದ ಬಳಿಕ, ಕುಚನೂರ್‌ ಅದನ್ನು ತಮ್ಮ ಚೀಲಕ್ಕೆ ಹಾಕಿಕೊಂಡಿದ್ದಾರೆ. ಈ ವೇಳೆ ಕಾರ್ಯಾಚರಣೆಯ ಭಾಗವಾಗಿ ಲೋಕಾಯುಕ್ತ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದಾರೆ.

ಹಿಂದಿನ ಪೋಡಿ ರದ್ದುಪಡಿಸಿ ಹೊಸದಾಗಿ ಪೋಡಿ ನಡೆಸುವಂತೆ ಜಂಟಿ ಭೂದಾಖಲೆ ನಿರ್ದೇಶಕರು ಆದೇಶಿಸಿದ್ದರು. ಬಳಿಕ ಸಹಾಯಕ ಭೂದಾಖಲೆ ನಿರ್ದೇಶಕರು ಜಮೀನಿನ ದಾಖಲೆ ತಿದ್ದುಪಡಿ ಹಾಗೂ ಉಪವಿಭಜನೆಗೆ ತಹಶೀಲ್ದಾರ್‌ಗೆ ಪ್ರಸ್ತಾವನೆ ಸಲ್ಲಿಸಿದ್ದರು ಎಂದು ತಿಳಿದುಬಂದಿದೆ.

ಆರೋಪಿಯ ನಿವಾಸ ಸೇರಿದಂತೆ ಇತರ ಸ್ಥಳಗಳ ಪರಿಶೀಲನೆ ನಡೆಸಲಾಗಿದೆ. ಮುಂದಿನ ಕ್ರಮದ ಬಗ್ಗೆ ಬಳಿಕ ನಿರ್ಧರಿಸಲಾಗುವುದು ಮತ್ತು ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES
spot_img

Latest News