Homeಅಂತಾರಾಷ್ಟ್ರೀಯರಷ್ಯಾ ನಿರ್ಬಂಧ ಮಸೂದೆಗೆ ಅಮೆರಿಕ ಸಂಸತ್ತು ಅಂಗೀಕಾರ

ರಷ್ಯಾ ನಿರ್ಬಂಧ ಮಸೂದೆಗೆ ಅಮೆರಿಕ ಸಂಸತ್ತು ಅಂಗೀಕಾರ

ವಾಷಿಂಗ್ಟನ್‌/ನವದೆಹಲಿ, ಸೆ.17- ಉಕ್ರೇನ್‌ ಮೇಲಿನ ಆಕ್ರಮಣವನ್ನು ಮುಂದುವರಿಸಿರುವ ರಷ್ಯಾದ ಮೇಲೆ ಆರ್ಥಿಕ ಒತ್ತಡ ಹೆಚ್ಚಿಸುವ ಉದ್ದೇಶದಿಂದ ಅಮೆರಿಕದ ಪ್ರತಿನಿಧಿ ಸಭೆಯು ರಷ್ಯಾ ನಿರ್ಬಂಧ ಮಸೂದೆ-2026 ಅನ್ನು 262-159 ಮತಗಳ ಅಂತರದಿಂದ ಅಂಗೀಕರಿಸಿದೆ.

ಪ್ರತಿನಿಧಿ ಸಭೆಯಲ್ಲಿ ಅಂಗೀಕಾರಕ್ಕೂ ಮುನ್ನ ಮಸೂದೆ ಅಮೆರಿಕದ ಸೆನೆಟ್‌ನಲ್ಲಿ 86-11 ಮತಗಳಿಂದ ಅಂಗೀಕಾರಗೊಂಡಿತ್ತು. ಪ್ರತಿನಿಧಿ ಸಭೆಯ ಮತದಾನದಲ್ಲೂ ಎರಡೂ ಪಕ್ಷಗಳ ಸದಸ್ಯರ ಬೆಂಬಲ ದೊರೆತಿದೆ. 203 ರಿಪಬ್ಲಿಕನ್‌, 58 ಡೆಮಾಕ್ರಾಟ್‌ ಮತ್ತು ಒಬ್ಬ ಸ್ವತಂತ್ರ ಸದಸ್ಯರು ಮಸೂದೆ ಪರ ಮತ ಚಲಾಯಿಸಿದ್ದು, ಏಳು ರಿಪಬ್ಲಿಕನ್ನರು ಮತ್ತು 152 ಡೆಮಾಕ್ರಾಟ್‌ಗಳು ವಿರೋಧಿಸಿದ್ದಾರೆ.

ಮಸೂದೆಯ ಬೆಂಬಲಿಗರ ಪ್ರಕಾರ, ರಷ್ಯಾದ ತೈಲ ಆದಾಯವನ್ನು ಕಡಿಮೆ ಮಾಡುವ ಮೂಲಕ ಉಕ್ರೇನ್‌ ಯುದ್ಧಕ್ಕೆ ಮಾಸ್ಕೋ ಪಡೆಯುತ್ತಿರುವ ಆರ್ಥಿಕ ಸಂಪನ್ಮೂಲಗಳ ಮೇಲೆ ಒತ್ತಡ ಹೇರುವುದು ಇದರ ಉದ್ದೇಶ. ಮತ್ತೊಂದೆಡೆ, ಕೆಲವು ಡೆಮಾಕ್ರಾಟ್‌ಗಳು ಅಧ್ಯಕ್ಷರಿಗೆ ವ್ಯಾಪಕ ಸುಂಕಾಧಿಕಾರ ನೀಡುವುದರಿಂದ ಅಮೆರಿಕದ ಆರ್ಥಿಕತೆಯ ಮೇಲೂ ಪರಿಣಾಮ ಬೀರಬಹುದು ಎಂದು ಆಕ್ಷೇಪಿಸಿದ್ದಾರೆ.

ಈ ಶಾಸನವು ರಷ್ಯಾದಿಂದ ಕಚ್ಚಾ ತೈಲ ಮತ್ತು ಅನಿಲ ಖರೀದಿಸುವ ಭಾರತ ಹಾಗೂ ಚೀನಾ ಸೇರಿದಂತೆ ಪ್ರಮುಖ ದೇಶಗಳ ಸರಕುಗಳ ಮೇಲೆ ಶೇಕಡಾ 100ರಷ್ಟು ದಂಡನಾತ್ಮಕ ಸುಂಕ ವಿಧಿಸುವ ನಿಯಂತ್ರಣ ಅಧಿಕಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರಿಗೆ ನೀಡುತ್ತದೆ.

ಜುಲೈನಲ್ಲಿ ನಿಧನರಾದ ರಿಪಬ್ಲಿಕನ್‌ ಸೆನೆಟರ್‌ ಲಿಂಡ್ಸೆ ಗ್ರಹಾಂ ಸ್ಮರಣಾರ್ಥ ನಾಮಕರಣಗೊಂಡಿರುವ ಈ ಮಸೂದೆಗೆ ಸೆನೆಟ್‌ ಈಗಾಗಲೇ (86-11 ಮತಗಳಿಂದ) ಒಪ್ಪಿಗೆ ನೀಡಿದ್ದು, ಈಗ ಅಧ್ಯಕ್ಷರ ಅಂಕಿತಕ್ಕಾಗಿ ಶ್ವೇತಭವನಕ್ಕೆ ರವಾನೆಯಾಗಿದೆ.

ರಷ್ಯಾದ ಇಂಧನ, ರಕ್ಷಣಾ ವಲಯ ಹಾಗೂ ನಿರ್ಬಂಧಗಳಿಂದ ತಪ್ಪಿಸಿಕೊಳ್ಳಲು ಮಾಸ್ಕೋ ಬಳಸುತ್ತಿರುವ ನೆರಳು ನೌಕಾಪಡೆ ಟ್ಯಾಂಕರ್‌ಗಳನ್ನು ನಿಯಂತ್ರಿಸುವುದು ಈ ಕಾಯ್ದೆಯ ಮೂಲ ಉದ್ದೇಶ. ಜೊತೆಗೆ ಇರಾನ್‌ ಮೇಲೆಯೂ ಹೆಚ್ಚುವರಿ ನಿರ್ಬಂಧಗಳನ್ನು ಇದು ಒಳಗೊಂಡಿದೆ.

ಫೆಬ್ರವರಿ 2022ರಲ್ಲಿ ರಷ್ಯಾ-ಉಕ್ರೇನ್‌ ಯುದ್ಧ ಆರಂಭವಾದಾಗಿನಿಂದ ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಪ್ರಮುಖ ದೇಶವಾಗಿದೆ. ಅಮೆರಿಕದ ಹೊಸ ಶಾಸನವು ಭಾರತೀಯ ರಫ್ತುಗಳ ಮೇಲೆ ಹೊಸ ರೀತಿಯ ವ್ಯಾಪಾರ ಅನಿಶ್ಚಿತತೆಯನ್ನು ತಂದೊಡ್ಡಿದೆ.

ಮಸೂದೆ ಅಂಗೀಕಾರಗೊಂಡ ತಕ್ಷಣವೇ ಭಾರತದ ಸರಕುಗಳ ಮೇಲೆ ಶೇ.100ರಷ್ಟು ಸುಂಕ ಸ್ವಯಂಚಾಲಿತವಾಗಿ ಜಾರಿಯಾಗುವುದಿಲ್ಲ. ಬದಲಾಗಿ, ಅಧ್ಯಕ್ಷ ಟ್ರಂಪ್‌ ಈ ಅಧಿಕಾರವನ್ನು ಭಾರತ ಅಥವಾ ಚೀನಾ ವಿರುದ್ಧ ಯಾವಾಗ ಮತ್ತು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದರ ಮೇಲೆ ಮುಂದಿನ ಬೆಳವಣಿಗೆಗಳು ಆಧಾರಿತವಾಗಿವೆ.

ಡೆಮಾಕ್ರಟಿಕ್‌ ಕಾಂಗ್ರೆಸ್‌ ಸದಸ್ಯ ಗ್ರೆಗೊರಿ ಮೀಕ್ಸ್‌ ಸೇರಿದಂತೆ ಹಲವು ನಾಯಕರು ಅಧ್ಯಕ್ಷರಿಗೆ ಇಷ್ಟೊಂದು ವ್ಯಾಪಕವಾದ ಸುಂಕ ವಿಧಿಸುವ ಅಧಿಕಾರ ನೀಡುವುದನ್ನು ವಿರೋಧಿಸಿದ್ದು, ಈ ದ್ವಿತೀಯ ನಿರ್ಬಂಧಗಳ ನಿಬಂಧನೆಯನ್ನು ತೆರವುಗೊಳಿಸಲು ಮಂಡಿಸಿದ್ದ ತಿದ್ದುಪಡಿ ಪ್ರಸ್ತಾವನೆಗಳು ಬಿದ್ದೋಗಿವೆ.

ರಷ್ಯಾವನ್ನು ಮಾತುಕತೆಯ ಮೇಜಿಗೆ ತರಲು ಮಾಸ್ಕೋದ ಆದಾಯದ ಮೂಲಗಳನ್ನು ಬಂದ್‌ ಮಾಡುವುದು ಅಮೆರಿಕದ ತಂತ್ರವಾಗಿದೆ. ಆದರೆ, ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಮತ್ತು ದೇಶೀಯ ತೈಲ ಅಗತ್ಯತೆ ಪೂರೈಸಲು ರಷ್ಯಾ ತೈಲ ಖರೀದಿ ಅನಿವಾರ್ಯ ಎಂದು ಭಾರತ ತನ್ನ ವಿದೇಶಾಂಗ ನೀತಿಯಲ್ಲಿ ಪ್ರತಿಪಾದಿಸುತ್ತಾ ಬಂದಿದೆ.

ಶ್ವೇತಭವನದಲ್ಲಿ ಟ್ರಂಪ್‌ ಅವರು ಈ ಕಾನೂನಿಗೆ ಸಹಿ ಹಾಕಿದ ನಂತರ, ಭಾರತದ ರಾಜತಾಂತ್ರಿಕ ಸವಾಲು ಮತ್ತಷ್ಟು ಸಂಕೀರ್ಣಗೊಳ್ಳಲಿದೆ. ಅಮೆರಿಕದೊಂದಿಗಿನ ದ್ವಿಪಕ್ಷೀಯ ವ್ಯಾಪಾರ ಸಂಬಂಧವನ್ನು ರಕ್ಷಿಸಿಕೊಳ್ಳುವ ಜೊತೆಗೆ, ತನ್ನ ಇಂಧನ ಭದ್ರತೆಯನ್ನು ಹೇಗೆ ಸಮತೋಲನದಲ್ಲಿಡುತ್ತದೆ ಎಂಬುದು ಮುಂಬರುವ ದಿನಗಳಲ್ಲಿ ಕುತೂಹಲ ಮೂಡಿಸಿದೆ.

RELATED ARTICLES
spot_img

Latest News