Homeರಾಷ್ಟ್ರೀಯ4 ವರ್ಷ ಪೂರೈಸಿದ 'ಪ್ರಾಜೆಕ್ಟ್‌ ಚೀತಾ' : ಭಾರತದಲ್ಲಿ ಚೀತಾಗಳ ಸಂಖ್ಯೆ 52ಕ್ಕೆ ಏರಿಕೆ

4 ವರ್ಷ ಪೂರೈಸಿದ ‘ಪ್ರಾಜೆಕ್ಟ್‌ ಚೀತಾ’ : ಭಾರತದಲ್ಲಿ ಚೀತಾಗಳ ಸಂಖ್ಯೆ 52ಕ್ಕೆ ಏರಿಕೆ

ಶಿಯೋಪುರ, ಸೆ.17- ಭಾರತದಲ್ಲಿ ಚೀತಾಗಳ ಪುನರ್‌ಪರಿಚಯಕ್ಕಾಗಿ ಆರಂಭಿಸಲಾದ ಪ್ರಾಜೆಕ್ಟ್‌ ಚೀತಾ ನಾಲ್ಕು ವರ್ಷ ಪೂರೈಸಿದ್ದು, ದೇಶದಲ್ಲಿನ ಚೀತಾಗಳ ಸಂಖ್ಯೆ 52ಕ್ಕೆ ಏರಿಕೆಯಾಗಿದೆ. ಈ ಪೈಕಿ 32 ಚೀತಾಗಳು ಭಾರತದಲ್ಲೇ ಜನಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2022ರ ಸೆ.17ರಂದು ಪ್ರಧಾನಿ ನರೇಂದ್ರ ಮೋದಿ ಅವರು ನಮೀಬಿಯಾದಿಂದ ತರಲಾಗಿದ್ದ ಎಂಟು ಚೀತಾಗಳನ್ನು ಮಧ್ಯಪ್ರದೇಶದ ಕೂನೋ ರಾಷ್ಟ್ರೀಯ ಉದ್ಯಾನದ ವಿಶೇಷ ಆವರಣಕ್ಕೆ ಬಿಡುಗಡೆ ಮಾಡುವ ಮೂಲಕ ಯೋಜನೆಗೆ ಚಾಲನೆ ನೀಡಿದ್ದರು.

ಕಳೆದ ನಾಲ್ಕು ವರ್ಷಗಳಲ್ಲಿ ಚೀತಾಗಳ ಪುನರ್‌ಪರಿಚಯ, ಸಂತಾನೋತ್ಪತ್ತಿ, ಮರಿಗಳ ಬದುಕುಳಿಯುವಿಕೆ ಹಾಗೂ ಅವುಗಳನ್ನು ಮುಕ್ತ ಅರಣ್ಯ ಪ್ರದೇಶಗಳಿಗೆ ಬಿಡುವಲ್ಲಿ ಮಹತ್ವದ ಪ್ರಗತಿ ಸಾಧಿಸಲಾಗಿದೆ. ಪ್ರಸ್ತುತ 49 ಚೀತಾಗಳು ಕೂನೋ ರಾಷ್ಟ್ರೀಯ ಉದ್ಯಾನದಲ್ಲಿದ್ದು, ಮೂರು ಚೀತಾಗಳು ಗಾಂಧಿ ಸಾಗರ ಅಭಯಾರಣ್ಯದಲ್ಲಿವೆ.

ಮೊದಲ ವರ್ಷ ಚೀತಾಗಳ ವರ್ತನೆ, ಆರೋಗ್ಯ ಮತ್ತು ಭಾರತೀಯ ಪರಿಸ್ಥಿತಿಗೆ ಹೊಂದಿಕೊಳ್ಳುವಿಕೆ ಕುರಿತು ತಂಡಕ್ಕೆ ಅನುಭವ ದೊರೆಯಿತು. ಎರಡನೇ ವರ್ಷ ಭಾರತದಲ್ಲಿ ಜನಿಸಿದ ಮರಿಗಳ ಬದುಕುಳಿಯುವಿಕೆಗೆ ಹೆಚ್ಚಿನ ಒತ್ತು ನೀಡಲಾಯಿತು. ಒಟ್ಟು 13 ಮರಿಗಳು ಜನಿಸಿದ ಬಳಿಕ ಒಂದು ವರ್ಷಕ್ಕೂ ಹೆಚ್ಚು ಕಾಲ ಬದುಕುಳಿದಿವೆ.

2025ರಲ್ಲಿ ಮೂರನೇ ಹಂತದಲ್ಲಿ ಚೀತಾಗಳನ್ನು ಮುಕ್ತ ಅರಣ್ಯಕ್ಕೆ ಬಿಡಲಾಗಿದ್ದು, 12 ಜಿಲ್ಲೆಗಳನ್ನು ಒಳಗೊಂಡ ಅಂತರರಾಜ್ಯ ಪ್ರದೇಶದಲ್ಲಿ 24 ಗಂಟೆಗಳ ಕಾಲ ನಿಗಾ ವಹಿಸಲಾಯಿತು. ಚೀತಾಗಳು ಕ್ರಮೇಣ ಹೊಸ ಪ್ರದೇಶಗಳಿಗೆ ಹೊಂದಿಕೊಂಡಿವೆ.

ನಮೀಬಿಯಾದಿಂದ ತರಲಾದ ಎಂಟು ಚೀತಾಗಳಲ್ಲಿ ಮೂರು ಜೀವಂತವಾಗಿದ್ದು, ಭಾರತದಲ್ಲಿ ಜನಿಸಿದ 22 ಮರಿಗಳೊಂದಿಗೆ ಈ ಗುಂಪಿನ ಸಂಖ್ಯೆ 25ಕ್ಕೆ ತಲುಪಿದೆ. 2023ರಲ್ಲಿ ದಕ್ಷಿಣ ಆಫ್ರಿಕಾದಿಂದ ತರಲಾದ 12 ಚೀತಾಗಳಲ್ಲಿ ಎಂಟು ಜೀವಂತವಾಗಿದ್ದು, ಅವುಗಳಿಂದ ಭಾರತದಲ್ಲಿ ಜನಿಸಿದ 10 ಮರಿಗಳೊಂದಿಗೆ ಒಟ್ಟು 18 ಚೀತಾಗಳಿವೆ. ಈ ವರ್ಷದ ಫೆಬ್ರವರಿಯಲ್ಲಿ ಬೋಟ್ಸ್‌ವಾನಾದಿಂದ ಇನ್ನೂ ಒಂಬತ್ತು ಚೀತಾಗಳನ್ನು ಭಾರತಕ್ಕೆ ತರಲಾಗಿದೆ.

ಮುಂದಿನ ಹಂತದಲ್ಲಿ ಕೂನೋದಿಂದ ಗಾಂಧಿ ಸಾಗರ ಹಾಗೂ ಇತರ ಸೂಕ್ತ ಪ್ರದೇಶಗಳಿಗೆ ವಿಸ್ತರಣೆ ಮಾಡುವ ಮೂಲಕ ದೇಶಾದ್ಯಂತ ದೀರ್ಘಕಾಲೀನ ಚೀತಾ ಮೆಟಾಪಾಪ್ಯುಲೇಷನ್‌ ಸ್ಥಾಪಿಸುವುದು ಯೋಜನೆಯ ಗುರಿಯಾಗಿದೆ ಎಂದು ತಿಳಿಸಲಾಗಿದೆ.

RELATED ARTICLES
spot_img

Latest News