ವೆಸ್ಟ್ ಪಾಮ್ ಬೀಚ್, ನ.2-ಅಮೆರಿಕದ ಫ್ಲೋರಿಡಾದಲ್ಲಿ ಜನವಸತಿ ಪ್ರದೇಶದ ಬಳಿ ಖಾಸಗಿ ಜೆಟ್ ವಿಮಾನವೊಂದು ಪತನಗೊಂಡಿದ್ದು, ಅದರಲ್ಲಿದ್ದ ಎಲ್ಲಾ ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಎಂದು ಅಮೆರಿಕದ ಸಾರಿಗೆ ಸಚಿವ ಸೀನ್ ಡಫಿ ತಿಳಿಸಿದ್ದಾರೆ.
ಟೆಕ್ಸಾಸ್‌ನ ಆಸ್ಟಿನ್‌ನಿಂದ ಬಹಾಮಾಸ್‌ಗೆ ತೆರಳುತ್ತಿದ್ದ ವಿಮಾನ ದುರಂತಕ್ಕೀಡಾಗಿದೆ. ಅಪಘಾತದ ಕಾರಣ ಪತ್ತೆಹಚ್ಚಲು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (ಎನ್‌ಟಿಎಸ್‌ಬಿ) ನಡೆಸುತ್ತಿರುವ ತನಿಖೆಗೆ ನೆರವಾಗಲು ಫೆಡರಲ್ ಏವಿಯೇಷನ್ ಅಡಿನಿಸ್ಟ್ರೇಷನ್ (ಎಫ್‌ಎಎ) ತಂಡವನ್ನು ಕಳುಹಿಸುತ್ತಿದೆ ಎಂದು ಡಫಿ ಹೇಳಿದ್ದಾರೆ.
ಒಂಬತ್ತು ಪ್ರಯಾಣಿಕರನ್ನು ಹೊತ್ತಿದ್ದ ಲಿಯರ್‌ಜೆಟ್-60 ವಿಮಾನ ಭಾನುವಾರ ದಕ್ಷಿಣ ಫ್ಲೋರಿಡಾದ ಜನವಸತಿ ಪ್ರದೇಶದ ಮೇಲೆ ನಿಯಂತ್ರಣ ಕಳೆದುಕೊಂಡು ಕೆಳಮುಖವಾಗಿ ಧಾವಿಸಿ ಭೀಕರವಾಗಿ ಪತನಗೊಂಡಿದೆ.ವಿಮಾನವು ನೆಲಕ್ಕೆ ಅಪ್ಪಳಿಸಿದ ತಕ್ಷಣ ಬೆಂಕಿಯ ಬೃಹತ್ ಗೋಳವಾಗಿ ಸ್ಫೋಟಗೊಂಡಿದೆ. ಮನೆಗಳ ಸಮೀಪದಲ್ಲೇ ಪತನಗೊಂಡ ವಿಮಾನವು ಜನನಿಬಿಡ ರಸ್ತೆಯ ಬಳಿ ರಸ್ತೆಯಲ್ಲಿ ದೊಡ್ಡ ಕುಳಿಯನ್ನು ಸೃಷ್ಟಿಸಿದೆ.
ವಿಮಾನವು ಟೆಕ್ಸಾಸ್‌ನ ಆಸ್ಟಿನ್-ಬರ್ಗ್‌ಸ್ಟ್ರಾಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಬಹಾಮಾಸ್‌ಗೆ ತೆರಳುತ್ತಿತ್ತು ಎಂದು ಎಫ್‌ಎಎ ತಿಳಿಸಿದೆ. ವಿಮಾನ ಪತನಕ್ಕೆ ಕಾರಣವೇನು ಮತ್ತು ಅದರಲ್ಲಿದ್ದವರು ಯಾರು ಎಂಬ ಬಗ್ಗೆ ಅಧಿಕಾರಿಗಳು ತಕ್ಷಣಕ್ಕೆ ಮಾಹಿತಿ ನೀಡಿಲ್ಲ.
ವಿಮಾನ ನಿಲ್ದಾಣದ ವಕ್ತಾರ ಜಿಮ್ ರೆನಾಲ್ಡ್ಸ್, ಇದು ಖಾಸಗಿ ವಿಮಾನವಾಗಿತ್ತು ಎಂದು ತಿಳಿಸಿದ್ದಾರೆ. ವಿಮಾನದಲ್ಲಿದ್ದವರ ವಿವರಗಳನ್ನು ತಕ್ಷಣ ನೀಡಲು ಸಾಧ್ಯವಾಗಿಲ್ಲ. ಇದು ನಿಜಕ್ಕೂ ದುರಂತ ಘಟನೆ ಎಂದು ಅವರು ಹೇಳಿದ್ದಾರೆ. ವಿಮಾನದ ನೋಂದಣಿ ಸಂಖ್ಯೆ 722 ಎಂದು ತಿಳಿಸಿದ್ದಾರೆ. ಕಾರುಗಳಲ್ಲಿ ಪ್ರಯಾಣಿಸುತ್ತಿದ್ದವರು ಚಿತ್ರೀಕರಿಸಿದ ವಿಡಿಯೊಗಳಲ್ಲಿ ವಿಮಾನ ಆಕಾಶದಿಂದ ವೇಗವಾಗಿ ಕೆಳಕ್ಕೆ ಧಾವಿಸಿ ರಸ್ತೆಯ ಸಮೀಪ ಅಪ್ಪಳಿಸಿ ಸ್ಫೋಟಗೊಳ್ಳುವ ಭಯಾನಕ ದೃಶ್ಯ ಸೆರೆಯಾಗಿದೆ.
ವಿಮಾನ ಮನೆಗಳಿಗೆ ಹಾನಿ ಉಂಟುಮಾಡಿದೆಯೇ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಮನೆಗಳಿಂದ ಕೆಲವೇ ಅಡಿಗಳ ಅಂತರದಲ್ಲಿ ಹಾಗೂ ಸಂಚರಿಸುತ್ತಿದ್ದ ವಾಹನಗಳ ಸಮೀಪದಲ್ಲೇ ವಿಮಾನ ಪತನಗೊಂಡಿರುವುದನ್ನು ಕಂಡ ಸ್ಥಳೀಯರು ಆಘಾತ ವ್ಯಕ್ತಪಡಿಸಿದ್ದಾರೆ. ಎರಡೂ ದಿಕ್ಕಿನ ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಿದ್ದು, ವಾಹನ ಸವಾರರು ಆ ಪ್ರದೇಶದಿಂದ ದೂರವಿರುವಂತೆ ಸೂಚಿಸಿದೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ತುರ್ತು ಸೇವಾ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ.
ಅಪಘಾತದ ಬಳಿಕ ಸುಮಾರು ಎರಡು ಗಂಟೆಗಳ ಕಾಲ ಆ ಪ್ರದೇಶದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು ಎಂದು ಸಮೀಪದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ತಿಳಿಸಿದ್ದಾರೆ. ವಿಮಾನ ಪತನದ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ತನಿಖೆ ಮುಂದುವರಿದಿದೆ.
