ಕೋಲ್ಕತ್ತಾ, ನ. 2 (ಪಿಟಿಐ): ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಚರ್ಚ್‌ವೊಂದರ ಉದ್ಘಾಟನಾ ಸಮಾರಂಭದ ವೇಳೆ ಗುಂಪೊಂದು ಚರ್ಚ್‌ಗೆ ಹಾನಿ ಎಸಗಿದೆ ಹಾಗೂ ಅಲ್ಲಿನ ಧರ್ಮಗುರುಗಳು ಮತ್ತು ಭಕ್ತರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸಂತಿ ಪೊಲೀಸ್ ಠಾಣಾ ವ್ಯಾಪ್ತಿಯ ನಾರಾಯಣತಲಾದಲ್ಲಿ ಈ ಘಟನೆ ನಡೆದಿದೆ. ಬಿಷಪ್ ಸುಬ್ರತಾ ಚಕ್ರವರ್ತಿ ಮತ್ತು ಹಲವಾರು ಧರ್ಮಗುರುಗಳು ಹಾಗೂ ಭಕ್ತರು ಉದ್ಘಾಟನಾ ಸಮಾರಂಭಕ್ಕಾಗಿ ಅಲ್ಲಿ ಸೇರಿದ್ದಾಗ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 30-35 ಜನರ ಗುಂಪು ಚರ್ಚ್ ಆವರಣದೊಳಗೆ ನುಗ್ಗಿ ಅಲ್ಲಿದ್ದವರ ಮೇಲೆ ಹಲ್ಲೆ ನಡೆಸಿದೆ ಎಂದು ನಮಗೆ ದೂರು ಬಂದಿದೆ. ಮಹಿಳೆಯರ ಮೇಲೂ ಹಲ್ಲೆ ನಡೆಸಲಾಗಿದ್ದು, ಅವರ ಸಾಂಪ್ರದಾಯಿಕ ಶಾಖಾ (ಬಿಳಿ ಬಳೆಗಳು)ಗಳನ್ನು ತೆಗೆದುಹಾಕುವಂತೆ ಒತ್ತಾಯಿಸಿ, ಅವರನ್ನು ಆವರಣದಿಂದ ಹೊರಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಾಳಿಕೋರರು ಚರ್ಚ್‌ನಲ್ಲಿದ್ದ ಶಿಲುಬೆಯನ್ನು ಧ್ವಂಸಗೊಳಿಸಿದ್ದಾರೆ, ಧರ್ಮಗುರುಗಳು ಮತ್ತು ಭಕ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಹಾಗೂ ಘಟನೆಯನ್ನು ಚಿತ್ರೀಕರಿಸಲು ಪ್ರಯತ್ನಿಸಿದವರ ಮೊಬೈಲ್ ಫೋನ್‌ಗಳನ್ನು ಒಡೆದು ಹಾಕಿದ್ದಾರೆ ಎಂದು ಅವರು ಹೇಳಿದರು. ಅಲ್ಲದೆ, ಚರ್ಚ್ ಆವರಣದಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆಗಳು ನಡೆಯದಂತೆ ತಡೆಯುವುದಾಗಿ ಅವರು ಬೆದರಿಕೆ ಹಾಕಿದ್ದಾರೆ ಎಂದು ಅಲ್ಲಿನ ಭಕ್ತರು ತಿಳಿಸಿದ್ದಾರೆ.
ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕ್ರೈಸ್ತ ಸಂಘಟನೆಯಾದ ಬಂಗೀಯ ಕ್ರಿಸ್ತಿಯ ಪರಿಷೇಬಾ ಈ ದಾಳಿಯನ್ನು ಖಂಡಿಸಿದ್ದು, ಇದು ಅಲ್ಪಸಂಖ್ಯಾತ ಸಮುದಾಯವನ್ನು ಬೆದರಿಸುವ ಪ್ರಯತ್ನವಾಗಿದೆ ಎಂದು ಹೇಳಿದೆ. ಸಂಘಟನೆಯ ಸ್ಥಾಪಕ ರಾಜ್ಯ ಕಾರ್ಯದರ್ಶಿ ಮತ್ತು ಕಾರ್ಯಾಧ್ಯಕ್ಷ ಹೆರೋಡ್ ಮಲ್ಲಿಕ್ ಮಾತನಾಡಿ, ಬಿಷಪ್ ಅವರ ಉಪಸ್ಥಿತಿಯಲ್ಲಿ, ಉದ್ಘಾಟನಾ ಸಮಾರಂಭದ ವೇಳೆ ದುಷ್ಕರ್ಮಿಗಳು ಹಲವಾರು ಧರ್ಮಗುರುಗಳ ಮೇಲೆ ಹಲ್ಲೆ ನಡೆಸಿರುವುದು ಅಭೂತಪೂರ್ವ ಘಟನೆಯಾಗಿದೆ ಎಂದು ಹೇಳಿದರು.
ಸಂಘಟಿತ ಗುಂಪುಗಳು ಶಾಂತಿಯುತ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತಿವೆ. ಆಡಳಿತ ಅಥವಾ ಸರ್ಕಾರದಿಂದ ಯಾವುದೇ ಕಠಿಣ ಕ್ರಮ ಜರುಗದಿರುವುದರಿಂದ, ಈ ದಾಳಿಕೋರರು ಎಷ್ಟರ ಮಟ್ಟಿಗೆ ಧೈರ್ಯಶಾಲಿಗಳಾಗಿದ್ದಾರೆಂದರೆ, ಅವರು ಯಾವುದೇ ಹಿಂಜರಿಕೆಯಿಲ್ಲದೆ ಚರ್ಚ್‌ನ ಧರ್ಮಗುರುಗಳನ್ನೇ ಹಿಂಸಿಸುತ್ತಿದ್ದಾರೆ ಎಂದು ಮಲ್ಲಿಕ್ ಹೇಳಿದರು.
ಸುಮಾರು ಎರಡು ವಾರಗಳ ಹಿಂದೆ, ಪಶ್ಚಿಮ ಮೇದಿನಿಪುರ ಜಿಲ್ಲೆಯಲ್ಲಿ ಮೂರು ಕ್ರೈಸ್ತ ಕುಟುಂಬಗಳು ಪೊಲೀಸರಿಗೆ ದೂರು ನೀಡಿದ್ದವು. ತಮ್ಮ ಧರ್ಮವನ್ನು ತ್ಯಜಿಸುವಂತೆ ಒತ್ತಾಯಿಸಿ ಗುಂಪೊಂದು ತಮಗೆ ಬೆದರಿಕೆ ಹಾಕಿ ಹಲ್ಲೆ ನಡೆಸಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದರು.
ುಮಾರು 18 ತಿಂಗಳುಗಳ ಹಿಂದೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ಈ ಕುಟುಂಬಗಳು, ತಮ್ಮ ಇಚ್ಛೆಗೆ ವಿರುದ್ಧವಾಗಿ ಕೆಲವು ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸುವಂತೆ ತಮ್ಮನ್ನು ಒತ್ತಾಯಿಸಲಾಗಿತ್ತು ಎಂದೂ ಪೊಲೀಸರಿಗೆ ದೂರು ನೀಡಿದ್ದವು.
