Homeರಾಷ್ಟ್ರೀಯಅಮಾನತುಗೊಂಡಿದ್ಧ ಪಂಜಾಬ್ ಎಎಪಿ ಶಾಸಕ ಕುನ್ವರ್ ವಿಜಯ್ ಪ್ರತಾಪ್ ಸಿಂಗ್‌ ರಾಜೀನಾಮೆ

ಅಮಾನತುಗೊಂಡಿದ್ಧ ಪಂಜಾಬ್ ಎಎಪಿ ಶಾಸಕ ಕುನ್ವರ್ ವಿಜಯ್ ಪ್ರತಾಪ್ ಸಿಂಗ್‌ ರಾಜೀನಾಮೆ

ಚಂಡೀಗಢ, ನ. 2 (ಪಿಟಿಐ): ಆಮ್‌ ಆದ್ಮಿ ಪಕ್ಷದಿಂದ (ಎಎಪಿ) ಅಮಾನತುಗೊಂಡಿರುವ ಶಾಸಕ ಹಾಗೂ ಮಾಜಿ ಐಪಿಎಸ್‌ ಅಧಿಕಾರಿ ಕುನ್ವರ್‌ ವಿಜಯ್‌ ಪ್ರತಾಪ್‌ ಸಿಂಗ್‌ ಅವರು, ಪಂಜಾಬ್‌ ವಿಧಾನಸಭೆಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.

ಅಮೃತಸರ ಉತ್ತರ ಕ್ಷೇತ್ರದ ಶಾಸಕರಾಗಿರುವ ಸಿಂಗ್‌ ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್‌ ಕುಲ್ತಾರ್‌ ಸಿಂಗ್‌ ಸಂಧ್ವಾನ್‌ ಅವರಿಗೆ ಕಳುಹಿಸಿದ್ದಾರೆ. ನಾನು ಪಂಜಾಬ್‌ ವಿಧಾನಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಸಿಂಗ್‌ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದು, ತಮ್ಮ ರಾಜೀನಾಮೆ ಪತ್ರವನ್ನೂ ಹಂಚಿಕೊಂಡಿದ್ದಾರೆ.

ಪಂಜಾಬ್‌ ವಿಧಾನಸಭೆಯ ಸ್ಪೀಕರ್‌ಗೆ ಬರೆದ ಪತ್ರದಲ್ಲಿ, 2026ರ ನವೆಂಬರ್‌ 1ರಿಂದ ಜಾರಿಗೆ ಬರುವಂತೆ ಸದನದಲ್ಲಿನ ನನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಸಿಂಗ್‌ ಉಲ್ಲೇಖಿಸಿದ್ದಾರೆ.

ಪಂಜಾಬ್‌ನ ಪಟಿಯಾಲ ಜಿಲ್ಲೆಯ ಸಮಾನಾ ಕ್ಷೇತ್ರದ ಚೇತನ್‌ ಸಿಂಗ್‌ ಜೌರಾಮಾಜ್ರಾ ಮತ್ತು ಸನೌರ್‌ ಕ್ಷೇತ್ರದ ಹರ್ಮೀತ್‌ ಸಿಂಗ್‌ ಪಠಾನ್‌ಮಾಜ್ರಾ ಎಂಬ ಇಬ್ಬರು ಎಎಪಿ ಶಾಸಕರು ಭಾನುವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಸಿಂಗ್‌ ಕೂಡ ರಾಜೀನಾಮೆ ನೀಡಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಆರೋಪದ ಮೇಲೆ, ಕಳೆದ ವರ್ಷದ ಜೂನ್‌ನಲ್ಲಿ ಸಿಂಗ್‌ ಅವರನ್ನು ಪಕ್ಷದಿಂದ ಐದು ವರ್ಷಗಳ ಕಾಲ ಅಮಾನತುಗೊಳಿಸಲಾಗಿತ್ತು. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬಂಧಿತರಾಗಿದ್ದ ಶಿರೋಮಣಿ ಅಕಾಲಿ ದಳದ (ಎಸ್‌ಎಡಿ) ನಾಯಕ ವಿಕ್ರಮ್‌ ಸಿಂಗ್‌ ಮಜಿಥಿಯಾ ಅವರ ವಿರುದ್ಧ ಪಂಜಾಬ್‌ ವಿಜಿಲೆನ್ಸ್‌ ಬ್ಯೂರೋ ಕೈಗೊಂಡ ಕ್ರಮವನ್ನು ಸಿಂಗ್‌ ಪ್ರಶ್ನಿಸಿದ ನಂತರ, ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು.

ಸಿಂಗ್‌ ಅವರು ಹಲವು ವಿಷಯಗಳಲ್ಲಿ ಎಎಪಿ ಸರ್ಕಾರದ ಕಟು ಟೀಕಾಕಾರರಾಗಿದ್ದರು. ಫರೀದ್‌ಕೋಟ್‌ನಲ್ಲಿ 2015ರಲ್ಲಿ ನಡೆದ ಧಾರ್ಮಿಕ ಗ್ರಂಥಗಳ ಅಪವಿತ್ರೀಕರಣ ಪ್ರಕರಣ ಮತ್ತು ಪೊಲೀಸ್‌ ಗುಂಡಿನ ದಾಳಿ ಪ್ರಕರಣಗಳನ್ನು ನಿರ್ವಹಿಸಿದ ರೀತಿಯ ಬಗ್ಗೆ ಅವರು ಈ ಹಿಂದೆ ಅಸಮಾಧಾನ ವ್ಯಕ್ತಪಡಿಸಿದ್ದರು ಹಾಗೂ ಈ ವಿಷಯದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿದ್ದರು.

2015ರಲ್ಲಿ ಕೋಟ್‌ಕಪುರ ಮತ್ತು ಬೆಹ್ಬಾಲ್‌ ಕಲನ್‌ನಲ್ಲಿ ನಡೆದ ಪೊಲೀಸ್‌ ಗುಂಡಿನ ದಾಳಿ ಪ್ರಕರಣಗಳ ತನಿಖೆ ನಡೆಸಿದ ಪಂಜಾಬ್‌ ಪೊಲೀಸರ ವಿಶೇಷ ತನಿಖಾ ತಂಡದ (ಎಸ್‌ಐಟಿ) ಸದಸ್ಯರಲ್ಲಿ ಸಿಂಗ್‌ ಕೂಡ ಒಬ್ಬರಾಗಿದ್ದರು. ವಿಧಾನಸಭೆಯಲ್ಲಿ ಅವರು 2015ರ ಧಾರ್ಮಿಕ ಗ್ರಂಥಗಳ ಅಪವಿತ್ರೀಕರಣದ ವಿಷಯವನ್ನು ಹಲವು ಬಾರಿ ಪ್ರಸ್ತಾಪಿಸಿದ್ದರು.

RELATED ARTICLES

Latest News