ನವದೆಹಲಿ, ಸೆ.17 (ಪಿಟಿಐ): 76ನೇ ವಸಂತಕ್ಕೆ ಕಾಲಿರಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನಾಡಿನ ಹಲವಾರು ಗಣ್ಯರು ಶುಭ ಕೋರಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅವರ 76ನೇ ಜನ್ಮದಿನದಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಶುಭಾಶಯ ಕೋರಿದ್ದಾರೆ. ಉತ್ತಮ ಆಡಳಿತದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದ್ದಲ್ಲದೆ, ಸರ್ವವ್ಯಾಪಿ ಅಭಿವೃದ್ಧಿಗೆ ಅಭೂತಪೂರ್ವ ವೇಗ ಮತ್ತು ಹೊಸ ದಿಕ್ಕನ್ನು ನೀಡಿದ್ದಕ್ಕಾಗಿ ಅವರು ಪ್ರಧಾನಿಯನ್ನು ಶ್ಲಾಘಿಸಿದ್ದಾರೆ.
‘ಪ್ರಧಾನಿ ಶ್ರೀ ಮೋದಿ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು. ಕಳೆದ 25 ವರ್ಷಗಳಲ್ಲಿ, ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಿ ನಿಮ್ಮ ಅಧಿಕಾರಾವಧಿಯಲ್ಲಿ, ನೀವು ಉತ್ತಮ ಆಡಳಿತದ ಅನೇಕ ಹೊಸ ಮಾನದಂಡಗಳನ್ನು ಸ್ಥಾಪಿಸಿದ್ದೀರಿ ಹಾಗೂ ಸರ್ವವ್ಯಾಪಿ ಅಭಿವೃದ್ಧಿಗೆ ಅಭೂತಪೂರ್ವ ವೇಗ ಮತ್ತು ಹೊಸ ದಿಕ್ಕನ್ನು ನೀಡಿದ್ದೀರಿ’ ಎಂದು ರಾಷ್ಟ್ರಪತಿಗಳು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ಜಾಗತಿಕ ವೇದಿಕೆಯಲ್ಲಿ ಹೊಸ ಗುರುತನ್ನು ಮೂಡಿಸುತ್ತಿದೆ ಎಂದು ಹೇಳುವ ಮೂಲಕ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಮತ್ತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಜನ್ಮದಿನದ ಶುಭಾಶಯಗಳನ್ನು ಕೋರಿದರು. ‘ಮಾತೃಭೂಮಿಯನ್ನು ವಿಕಸಿತ ಭಾರತ 2047 (ಅಭಿವೃದ್ಧಿ ಹೊಂದಿದ ಭಾರತ) ಗುರಿಯತ್ತ ಮುನ್ನಡೆಸುತ್ತಿರುವ ನಿಮಗೆ ಉತ್ತಮ ಆರೋಗ್ಯ, ಸಂತೋಷ ಮತ್ತು ನಿರಂತರ ಶಕ್ತಿ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ’ ಎಂದು ರಾಧಾಕೃಷ್ಣನ್ ಹೇಳಿದರು.
ಮೋದಿಯವರ ನಾಯಕತ್ವದಲ್ಲಿ ಭಾರತವು ಇಂದು ಆತ್ಮವಿಶ್ವಾಸದಿಂದ ಜಾಗತಿಕ ವೇದಿಕೆಯಲ್ಲಿ ಹೊಸ ಗುರುತನ್ನು ಮೂಡಿಸುತ್ತಿದೆ ಎಂದು ಲೋಕಸಭೆ ಸ್ಪೀಕರ್ ಬಿರ್ಲಾ ಹೇಳಿದರು.ಮೋದಿ ಅವರ ಮಾರ್ಗದರ್ಶನದಲ್ಲಿ ಭಾರತವು ಅಭಿವೃದ್ಧಿ ಮತ್ತು ಸ್ವಾವಲಂಬನೆಯ ಹೊಸ ಎತ್ತರವನ್ನು ಏರುತ್ತಿದೆ ಎಂದು ಹೇಳಿರುವ ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್, ಗುರುವಾರ ಅವರ ಜನ್ಮದಿನದಂದು ಶುಭಾಶಯ ಕೋರಿ, ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಹಾರೈಸಿದ್ದಾರೆ.
1950ರ ಸೆಪ್ಟೆಂಬರ್ 17ರಂದು ಗುಜರಾತ್‌ನ ವಡನಗರದಲ್ಲಿ ಜನಿಸಿದ ಮೋದಿ ಅವರಿಗೆ ಗುರುವಾರ 76 ವರ್ಷ ತುಂಬಿದೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ನಬಿನ್, ‘ದೇಶದ 140 ಕೋಟಿ ಜನರ ನಾಯಕ ಹಾಗೂ ರಾಷ್ಟ್ರ ಸೇವೆ ಮತ್ತು ಸಮರ್ಪಣಾ ಭಾವದ ಸಾಕಾರಮೂರ್ತಿಯಾಗಿರುವ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು’ ಎಂದು ಹೇಳಿದ್ದಾರೆ.
‘ರಾಷ್ಟ್ರವೇ ಮೊದಲು’ ಎಂಬ ಸಂಕಲ್ಪದೊಂದಿಗೆ ಸಾಗಿದ ಮೋದಿಯವರ ಪಯಣವು ಸೇವೆ, ಉತ್ತಮ ಆಡಳಿತ ಮತ್ತು ಜನಕಲ್ಯಾಣದ ಒಂದು ಸ್ಫೂರ್ತಿದಾಯಕ ಕಥನವಾಗಿದೆ ಎಂದು ನಬಿನ್ ಬಣ್ಣಿಸಿದ್ದಾರೆ. ಇದು ಕೇವಲ ಒಬ್ಬ ವ್ಯಕ್ತಿಯ ಪಯಣವಲ್ಲ, ಬದಲಾಗಿ ದೇಶದ ಜನರ ಸಾಮೂಹಿಕ ಕನಸಿನ ಪಯಣವೂ ಹೌದು; ಪ್ರಧಾನಿ ಮೋದಿ ತಮ್ಮ ಕಾರ್ಯಗಳು ಮತ್ತು ದೃಢವಾದ ಬದ್ಧತೆಯ ಮೂಲಕ ಇದಕ್ಕೆ ದಿಕ್ಕು ನೀಡಿದ್ದಾರೆ ಎಂದು ಬಿಜೆಪಿ ಮುಖ್ಯಸ್ಥರು ಹೇಳಿದ್ದಾರೆ.
ಪ್ರಧಾನಿ ಮೋದಿಯವರ ಮಾರ್ಗದರ್ಶನದಲ್ಲಿ ಭಾರತವು ಅಭಿವೃದ್ಧಿ ಮತ್ತು ಸ್ವಾವಲಂಬನೆಯ ಹೊಸ ಎತ್ತರವನ್ನು ಏರುತ್ತಿದೆ ಹಾಗೂ ಹೊಸ ಗುರುತು ಮತ್ತು ಶಕ್ತಿಯೊಂದಿಗೆ ಜಾಗತಿಕ ವೇದಿಕೆಯಲ್ಲಿ ಸ್ಥಿರವಾಗಿ ಮುನ್ನಡೆಯುತ್ತಿದೆ ಎಂದು ನಬಿನ್ ತಿಳಿಸಿದ್ದಾರೆ. ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ರಾಷ್ಟ್ರ ಸೇವೆಯನ್ನು ಮುಂದುವರಿಸುವ ಶಕ್ತಿಯನ್ನು ನೀಡುವಂತೆ ನಾನು ಸರ್ವಶಕ್ತನಾದ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹಲವಾರು ಮಂದಿ ಇದೇ ಸಂದರ್ಭದಲ್ಲಿ ಮೋದಿ ಅವರಿಗೆ ಶುಭ ಹಾರೈಸಿದ್ದಾರೆ.
