ಬೆಂಗಳೂರು, ಸೆ.1-ಇಳಿಮುಖದ ಹಾದಿಯಲ್ಲಿದ್ದ ಚಿನ್ನದ ದರಲ್ಲಿ ಇಂದು ಅಲ್ಪ ಚೇತರಿಕೆಯಾಗಿದ್ದರೆ, ಬೆಳ್ಳಿ ದರದಲ್ಲಿ ಮತ್ತೆ ಕುಸಿತವಾಗಿದೆ. ಕಳೆದೊಂದು ವಾರದಲ್ಲಿ ಮೂರು ಬಾರಿ ಏರಿಕೆ ಹಾಗೂ ನಾಲ್ಕು ಬಾರಿ ಚಿನ್ನದ ದರದಲ್ಲಿ ಕುಸಿತವಾಗಿದೆ. ಮೂರು ದಿನಗಳಿಂದ ಇಳಿಮುಖವಾಗಿದ್ದ ಚಿನ್ನದ ದರಲ್ಲಿ ಇಂದು ಏರಿಕೆಯಾಗಿದೆ. ಒಂದು ವಾರದಲ್ಲಿ ಚಿನ್ನದ ದರದಲ್ಲಿ ಒಂದು ಗ್ರಾಂಗೆ ಸುಮಾರು 769 ರೂ. ಕಡಿಮೆಯಾಗಿದ್ದರೆ, 153 ರೂ. ನಷ್ಟು ಹೆಚ್ಚಾಗಿದೆ. ಮತ್ತೆ ಏರಿಳಿತದ ಹಾದಿಯಲ್ಲಿ ಚಿನ್ನದ ದರ ಸಾಗುತ್ತಿದೆ.
ಆಗಸ್ಟ್ ತಿಂಗಳ ಆರಂಭದಿಂದಲ್ಲೂ ನಿರಂತರ ಏರುಗತಿಯಲ್ಲಿ ಸಾಗಿದ್ದ ಚಿನ್ನವು, ಆಗಸ್ಟ್ ಅಂತ್ಯದಲ್ಲಿ ಇಳಿಮುಖದತ್ತ ಸಾಗಿತ್ತು. ಲಭ್ಯವಿರುವ ಮಾರುಕಟ್ಟೆ ಮಾಹಿತಿ ಪ್ರಕಾರ ಇಂದು ಬೆಳಿಗ್ಗೆ 24 ಕ್ಯಾರೆಟ್ ಚಿನ್ನವು ಒಂದು ಗ್ರಾಂಗೆ 16 ರೂ. ಹೆಚ್ಚಳವಾಗಿದ್ದು, 15,693 ರೂ.ನಷ್ಟಿದೆ. 22 ಕ್ಯಾರೆಟ್ನ ಚಿನ್ನವು ಒಂದು ಗ್ರಾಂಗೆ 15 ರೂ.ಹೆಚ್ಚಾಗಿದ್ದು, 14,385 ರೂ. ನಷ್ಟಿದೆ. 18 ಕ್ಯಾರೆಟ್ನ ಚಿನ್ನವು ಒಂದು ಗ್ರಾಂಗ್ರೆ 15 ರೂ.ನಷ್ಟು ಏರಿಕೆಯಾಗಿದ್ದು,11,773 ರೂ. ನಷ್ಟಿದೆ. ಸದ್ಯಕ್ಕೆ ಚಿನಿವಾರಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಚೇತರಿಕೆಯಾಗುವ ಸಾಧ್ಯತೆ ವಿರಳ. ಇನ್ನಷ್ಟು ಇಳಿಮುಖವಾಗುವ ಸಾಧ್ಯತೆಗಳಿವೆ ಎಂಬುದು ವರ್ತಕರ ಅಭಿಪ್ರಾಯವಾಗಿದೆ.
ಪ್ಲಾಟಿನಮ್ ಆಭರಣಗಳ ಬೆಲೆಯಲ್ಲೂ ಕುಸಿತವಾಗಿದೆ. ಹತ್ತು ಗ್ರಾಂಗೆ 240 ರೂ. ಇಳಿಕೆಯಾಗಿದ್ದು, 54,890 ರೂ. ನಷ್ಟಿದೆ. ಇನ್ನು ಎರಡು ವಾರದಿಂದ ಸ್ಥಿರವಾಗಿದ್ದ ಬೆಳ್ಳಿಯ ದರದಲ್ಲೂ ಕುಸಿತವಾಗಿದೆ. ಆ.23ರಿಂದಲೂ ಸ್ಥಿರವಾಗಿದ್ದ ಬೆಳ್ಳಿದರ ಒಂದು ಕೆ.ಜಿ.ಗೆ ಆ. 28ರಂದು ಐದು ಸಾವಿರ ರೂ. ಹಾಗೂ ಇಂದು ಸಹ ಐದು ಸಾವಿರ ರೂ. ಕುಸಿತವಾಗಿದೆ. ಒಂದು ಕೆ.ಜಿ.ಬೆಳ್ಳಿ ದರ ಪ್ರಸ್ತುತ 2.50 ಲಕ್ಷ ರೂ.ನಷ್ಟಿದೆ.
