ಕಠಂಡು, ಸೆ.1- (ಪಿಟಿಐ) ಸಾವಿರಾರು ಜನರನ್ನು ಬಲಿ ತೆಗೆದುಕೊಂಡ ಪ್ರವಾಹದ ನಂತರ ನೇಪಾಳದಲ್ಲಿ ಮತ್ತೊಂದು ಆಪಾಯದ ಮುನ್ಸೂಚನೆ ಎದುರಾಗಿದೆ. ದೇಶದ ಪೂರ್ವ, ಮಧ್ಯ ಮತ್ತು ಪಶ್ಚಿಮ ಭಾಗಗಳಾದ್ಯಂತ ಹಲವಾರು ಜಿಲ್ಲೆಗಳಲ್ಲಿ ಪ್ರವಾಹದ ಅಪಾಯದ ಬಗ್ಗೆ ನೇಪಾಳದ ಅಧಿಕಾರಿಗಳು ಮತ್ತೆ ಹೊಸ ಎಚ್ಚರಿಕೆಯನ್ನು ನೀಡಿದ್ದು, ನದಿಗಳ ಬಳಿ ವಾಸಿಸುವ ಜನರು ಜಾಗರೂಕರಾಗಿರಲು ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಆರ್‌ಆರ್‌ಎಂಎ) ಹೊರಡಿಸಿದ ಸೂಚನೆಯ ಪ್ರಕಾರ, ನುವಾಕೋಟ್ ಮತ್ತು ರಸುವಾ ಜಿಲ್ಲೆಗಳಲ್ಲಿ ಹಠಾತ್ ಪ್ರವಾಹದ ಸಾಧ್ಯತೆ ಹೆಚ್ಚಿದ್ದು, ಸಣ್ಣ ನದಿಗಳು ಮತ್ತು ಹೊಳೆಗಳಲ್ಲಿ ನೀರಿನ ಹರಿವು ಹೆಚ್ಚಾಗುವ ನಿರೀಕ್ಷೆಯಿದೆ. ಪೂರ್ವ ಮತ್ತು ಮಧ್ಯ ನೇಪಾಳದ ತಪ್ಲೆಜಂಗ್, ಸಂಖುವಸಭಾ, ಸೋಲುಖುಂಬು, ಖೋಟಾಂಗ್, ಓಖಲ್ಧುಂಗಾ, ರಾಮೆಚಾಪ್, ಡೋಲಾಖಾ, ಸಿಂಧುಪಾಲ್ಚೌಕ್, ಕವ್ರೆಪಾಲಂಚೋಕ್, ಲಲಿತಪುರ, ಭಕ್ತಪುರ, ಕಠ್ಮಂಡು ಮತ್ತು ಧಾಡಿಂಗ್ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗುವ ಮತ್ತು ಹಠಾತ್ ಪ್ರವಾಹದ ಮಧ್ಯಮ ಅಪಾಯವೂ ಇದೆ.
ಪಶ್ಚಿಮ ನೇಪಾಳದಲ್ಲಿ, ಗೂರ್ಖಾ, ಲ್ಯಾಮ್‌ಜಂಗ್, ಡೋಲ್ಪಾ, ರುಕುಮ್ ಪೂರ್ವ, ರುಕುಮ್ ಪಶ್ಚಿಮ, ಜಾಜರ್‌ಕೋಟ್, ಡಾರ್ಚುಲಾ, ಬೈತಾಡಿ, ದದೇಲ್ಧುರಾ, ದೋತಿ, ಕೈಲಾಲಿ ಮತ್ತು ಕಾಂಚನ್‌ಪುರ ಜಿಲ್ಲೆಗಳು ಎಚ್ಚರಿಕೆಯಲ್ಲಿವೆ ಎಂದು ಪ್ರಾಧಿಕಾರ ತಿಳಿಸಿದೆ.ನದಿ ದಂಡೆಗಳಲ್ಲಿ ಮತ್ತು ಇತರ ದುರ್ಬಲ ಪ್ರದೇಶಗಳಲ್ಲಿ ವಾಸಿಸುವ ಜನರು ಎಚ್ಚರಿಕೆ ವಹಿಸಬೇಕು ಮತ್ತು ಮುನ್ಸೂಚನೆಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದೆ.
