ಬಾಗೇಪಲ್ಲಿ, ಮಾ.19- ಜಾನುವಾರು ಮೇವು ಸಾಗಿಸುತ್ತಿರುವ ಟ್ರ್ಯಾಕ್ಟರ್‌ಗೆ ವಿದ್ಯುತ್ ತಂತಿ ಸ್ಪರ್ಶಗೊಂಡು ಸಂಭವಿಸಿರುವ ಬೆಂಕಿ ಅವಘಡದಲ್ಲಿ ಟ್ರ್ಯಾಕ್ಟರ್ ಟ್ರಾಲಿ ಸಂಪೂರ್ಣವಾಗಿ ಸುಟ್ಟಿರುವ ಘಟನೆ ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ಪಾತಪಾಳ್ಯ ಹೋಬಳಿಯ ಕೋಗರೋಳ್ಳಪಲ್ಲಿ ಗ್ರಾಮದ ರೈತರ ಜಮೀನಿನಿಂದ ಗೂಳೂರು ಹೋಬಳಿಯ ಹೊನ್ನಂಪಲ್ಲಿ ಗ್ರಾಮಕ್ಕೆ ಜಾನುವಾರು ಮೇವು ಸಾಗಿಸುವ ವೇಳೆ ಟ್ರ್ಯಾಕ್ಟರ್ ಟ್ರಾಲಿಗೆ ತುಂಬಿರುವ ಒಣಮೇವಿಗೆ ರಸ್ತೆಯಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡಿದೆ.
ಮೇವು ತುಂಬಿರುವ ಟ್ರ್ಯಾಕ್ಟರ್ ಬಾಗೇಪಲ್ಲಿ ತಾಲೂಕಿನ ಗೂಳೂರು ಹೋಬಳಿಯ ಹೊನ್ನಂಪಲ್ಲಿ ಗ್ರಾಮದ ರೈತ ಲಕ್ಷ್ಮೀಪತಿ ಎಂಬುವವರಿಗೆ ಸೇರಿರುವುದಾಗಿ ಆಗ್ನಿಶಾಮ ಠಾಣಾ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಬಾಗೇಪಲ್ಲಿ ಆಗ್ನಿಶಾಮಕ ಠಾಣಾ ಸಿಬ್ಬಂದಿ ಸಕಾಲಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿ ಹೆಚ್ಚಿನ ಅನಾಹುತಗಳು ಸಂಭವಿಸದಂತೆ ಎಚ್ಚರ ವಹಿಸಿದರು. ಬೈಪಾಸ್ ರಸ್ತೆಯಲ್ಲಿ ಬೆಂಕಿ ಅವಘಡ ಸಂಭವಿಸಿದ ಕಾರಣ ವಾಹನ ಸಂಚಾರ ಸ್ಥಗಿತಗೊಂಡು ಸುಮಾರು ಎರಡು ಗಂಟೆಗೂ ಹೆಚ್ಚು ಸಮಯ ಟ್ರಾಫಿಕ್ ಸಮಸ್ಯೆ ಎದುರಾಗಿ ವಾಹನ ಸವಾರರು ಕಿರಿಕಿರಿ ಅನಭವಿಸಿದರು.
ಈ ಸಂದರ್ಭದಲ್ಲಿ ಬಾಗೇಪಲ್ಲಿ ಆಗ್ನಿಶಾಮಕ ಠಾಣಾಧಿಕಾರಿ ಎ.ನಮಾಜೀ, ಆಗ್ನಿಶಾಮಕ ಚಾಲಕ ಮಹಮ್ಮದ್ ಯೂಸುಬ್ ಗದಗ್, ಆಗ್ನಿಶಾಮಕ ಸಿಬ್ಬಂದಿ ಜಯನಾಯಕ, ಬಾಬುಸಾಬಿ ಪಾಟೀಲ ಮತ್ತಿತರರಿದ್ದರು.