Homeರಾಜ್ಯಗಜಪಡೆಗೆ ಸಿಸಿಟಿವಿ ಕಣ್ಗಾವಲು: ದಸರಾ ಆನೆಗಳ ರಕ್ಷಣೆಗೆ ಬಿಗಿ ಭದ್ರತೆ

ಗಜಪಡೆಗೆ ಸಿಸಿಟಿವಿ ಕಣ್ಗಾವಲು: ದಸರಾ ಆನೆಗಳ ರಕ್ಷಣೆಗೆ ಬಿಗಿ ಭದ್ರತೆ

ಮೈಸೂರು,ಸೆ.2- ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಆಗಮಿಸಿರುವ ಗಜಪಡೆಯ ವಾಸ್ತವ್ಯಕ್ಕೆ ಅರಮನೆ ಆವರಣದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಆನೆಗಳು ಇರುವ ಶೆಡ್‌ಗಳಿಗೆ ಸಿಸಿಟಿವಿ ಅಳವಡಿಸಲಾಗಿದೆ. ಆ.28 ರಂದು ಜಯಮಾರ್ತಾಂಡ ದ್ವಾರದ ಮೂಲಕ ಅರಮನೆ ಪ್ರವೇಶ ಮಾಡಿರುವ ಒಂಬತ್ತು ಆನೆಗಳ ವಾಸ್ತವ್ಯಕ್ಕೆ ಅರಮನೆ ಮುಂಭಾಗದ ಕೋಡಿ ಸೋಮೇಶ್ವರ ದೇವಾಲಯ ಹಾಗೂ ಭುವನೇಶ್ವರಿ ದೇವಾಲಯದ ಆವರಣದ ಶೆಡ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ.

ಗಜಪಡೆಯಲ್ಲಿ ಶ್ರೀಕಂಠ, ಮಹೇಂದ್ರ, ಧನಂಜಯ, ಪ್ರಶಾಂತ, ಏಕಲವ್ಯ, ಗೋಪಿ, ಶ್ರೀರಾಮ, ಕಾವೇರಿ ಮತ್ತು ಲಕ್ಷಿ ಸೇರಿದಂತೆ ಒಂಬತ್ತು ಆನೆಗಳಿದ್ದು, ಆನೆಗಳಿರುವ ಶೆಡ್‌ ಹಾಗೂ ಆನೆಗಳಿಗೆ ಆಹಾರ ತಯಾರು ಮಾಡುವ ಸ್ಥಳ ಸೇರಿದಂತೆ ಒಟ್ಟು 10 ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಈ ಸಿಸಿಟಿವಿ ಮೂಲಕ 24 ಗಂಟೆಗಳ ಕಾಲ ಆನೆಗಳ ಚಲನವಲನ ಹಾಗೂ ಆನೆಗಳ ಬಳಿ ಯಾರು ಬರುತ್ತಾರೆ, ಹೋಗುತ್ತಾರೆ ಎಂಬುದರ ಮೇಲೆ ನಿಗಾ ವಹಿಸಲಾಗುತ್ತಿದೆ. ಅಲ್ಲದೆ ಆನೆಗಳ ಫೋಟೋ, ವಿಡಿಯೋ ತೆಗೆಯದಂತೆ ನಿರ್ಬಂಧ ವಿಧಿಸಲಾಗಿದೆ.

ಪೌಷ್ಟಿಕ ಆಹಾರಕ್ಕೆ ವ್ಯವಸ್ಥೆ :
ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಗಜಪಡೆಯನ್ನು ಜಂಬೂಸವಾರಿ ತಾಲೀಮಿಗೆ ಕರೆದೊಯ್ಯುವ ವೇಳೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಈ ಸ್ಥಳದಲ್ಲೂ ಸಿಸಿಟಿವಿ ಅಳವಡಿಸಲಾಗಿದ್ದು, ಸಾರ್ವಜನಿಕರು ಆನೆಗಳಿಗೆ ಆಹಾರ ನೀಡದಂತೆ ನಿರ್ಬಂಧಿಸಲಾಗಿದೆ. ಗಜಪಡೆ ವಾಸ್ತವ್ಯದ ಸ್ಥಳದಲ್ಲಿ ಪೊಲೀಸ್‌‍, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗಜಪಡೆಯ ರಕ್ಷಣೆಗೆ ನಿಯೋಜಿಸಲಾದ ವಿಶೇಷ ತಂಡವು 24 ಗಂಟೆಗಳ ಕಾಲ ಸಿಸಿಟಿವಿ ಕಣ್ಗಾವಲಿನೊಂದಿಗೆ ಕಾರ್ಯ ನಿರ್ವಹಿಸಲಿದೆ.

RELATED ARTICLES
spot_img

Latest News