Homeಅಂತಾರಾಷ್ಟ್ರೀಯಅಮೆರಿಕದ ಕ್ಷಿಪಣಿ ದಾಳಿಗೆ ಇರಾನ್‌ ಆಕ್ರೋಶ : ಮಾರಕ ಪ್ರತೀಕಾರದ ಎಚ್ಚರಿಕೆ

ಅಮೆರಿಕದ ಕ್ಷಿಪಣಿ ದಾಳಿಗೆ ಇರಾನ್‌ ಆಕ್ರೋಶ : ಮಾರಕ ಪ್ರತೀಕಾರದ ಎಚ್ಚರಿಕೆ

ತೆಹ್ರಾನ್‌,ಸೆ.2-ದಕ್ಷಿಣ ಇರಾನ್‌ನ ಹಾರ್ಮೋಜ್ಗನ್‌ ಪ್ರಾಂತ್ಯದಲ್ಲಿ ನಡೆದ ವಿನಾಶಕಾರಿ ಕ್ಷಿಪಣಿ ದಾಳಿಯಲ್ಲಿ ಮಗು ಸೇರಿದಂತೆ ನಾಲ್ವರು ಸಾವನ್ನಪ್ಪಿ, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆಯು ಮಧ್ಯಪ್ರಾಚ್ಯದಲ್ಲಿ ಭಾರೀ ಉದ್ವಿಗ್ನತೆಗೆ ಕಾರಣವಾಗಿದೆ. ಮದುವೆ ಸಮಾರಂಭವೊಂದರ ಮೇಲೆ ನಡೆದ ಈ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಇರಾನ್‌, ಅಮೆರಿಕಕ್ಕೆ ಮರೆಯಲಾಗದ ಪಾಠ ಕಲಿಸುವುದಾಗಿ ಕಠಿಣ ಎಚ್ಚರಿಕೆ ನೀಡಿದೆ.

ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ, ಟೆಹ್ರಾನ್‌ ಮತ್ತು ಅದರ ಮಿತ್ರರಾಷ್ಟ್ರಗಳು ಈ ದಾಳಿಗೆ ತಕ್ಕ ಹಾಗೂ ಮಾರಕ ಉತ್ತರ ನೀಡಲಿವೆ ಎಂದು ಘೋಷಿಸಿದ್ದಾರೆ. ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ ಕಾರ್ಪ್‌್ಸ ವಕ್ತಾರ ಹೊಸೇನ್‌ ಮೊಹೆಬಿ, ಅಮೆರಿಕವು ತನ್ನ ಈ ಹೊಸ ಆಕ್ರಮಣಕಾರಿ ಧೋರಣೆಗೆ ತೀವ್ರವಾಗಿ ವಿಷಾದಿಸಬೇಕಾಗುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಎಚ್ಚರಿಸಿದ್ದಾರೆ.
ಹಾರ್ಮೋಜ್ಗನ್‌ ಪ್ರಾಂತ್ಯದ ಸಿರಿಕ್‌ ಕೌಂಟಿಯ ಕುಹೆಸ್ತಾಕ್‌ ಪ್ರದೇಶದಲ್ಲಿರುವ ವಸತಿ ಮನೆಯೊಂದರಲ್ಲಿ ಮದುವೆ ಸಂಭ್ರಮ ನಡೆಯುತ್ತಿದ್ದ ವೇಳೆ ಈ ದಾಳಿ ಸಂಭವಿಸಿದೆ. ಅಮೆರಿಕದ ಕ್ಷಿಪಣಿಯ ಚೂರುಗಳು ನೇರವಾಗಿ ಮನೆಗೆ ಅಪ್ಪಳಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಇರಾನಿನ ರೆಡ್‌ ಕ್ರೆಸೆಂಟ್‌ ಸ್ಪಷ್ಟಪಡಿಸಿದೆ. ಇರಾನ್‌ ವಿದೇಶಾಂಗ ಸಚಿವಾಲಯದ ವಕ್ತಾರ ಎಸಾಯಿಲ್‌ ಬಕೈ ಪ್ರತಿಕ್ರಿಯಿಸಿ, ಮಿನಾಬ್‌, ಲ್ಯಾಮರ್ಡ್‌ ಮತ್ತು ಕೆಶ್‌ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಅಮೆರಿಕ ನಡೆಸುತ್ತಿರುವ ಸರಣಿ ದಾಳಿಗಳು ಇರಾನ್‌ ಜನರ ಮೇಲಿನ ದೌರ್ಜನ್ಯದ ಮಿತಿಯನ್ನು ಮೀರುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ದಿಢೀರ್‌ ಬೆಳವಣಿಗೆಯು ವಾಷಿಂಗ್ಟನ್‌ ಮತ್ತು ಟೆಹ್ರಾನ್‌ ನಡುವಿನ ಈಗಾಗಲೇ ಹದಗೆಟ್ಟಿರುವ ರಾಜತಾಂತ್ರಿಕ ಹಾಗೂ ಸೈನಿಕ ಸಂಬಂಧಗಳನ್ನು ಮತ್ತಷ್ಟು ಹದೆಗೆಡಿಸಿದೆ. ಅಮೆರಿಕದ ಈ ಸೈನಿಕ ಕಾರ್ಯಾಚರಣೆಯ ಹಿಂದಿನ ನಿಖರ ಗುರಿಯೇನು ಎಂಬುದು ಇನ್ನೂ ಅಧಿಕೃತವಾಗಿ ಸ್ಪಷ್ಟಗೊಂಡಿಲ್ಲವಾದರೂ, ಇರಾನ್‌ನ ಪ್ರತೀಕಾರದ ಬೆದರಿಕೆಯು ಈ ಪ್ರದೇಶದಲ್ಲಿ ಮತ್ತೊಂದು ದೊಡ್ಡ ಯುದ್ಧದ ಭೀತಿಯನ್ನು ಹುಟ್ಟುಹಾಕಿದೆ.
ಅಮೆರಿಕದ ಸೆಂಟ್ರಲ್‌ ಕಮಾಂಡ್‌ ಪ್ರಕಾರ, ಇತ್ತೀಚಿನ ಕಾರ್ಯಾಚರಣೆಯಲ್ಲಿ ಇರಾನ್‌ನಗೆ ಸಂಬಂಧಿಸಿದ ವಾಯು ರಕ್ಷಣಾ ವ್ಯವಸ್ಥೆಗಳು, ರಾಡಾರ್‌ಗಳು, ಸಮುದ್ರ ಸಂಬಂಧಿತ ಸೌಲಭ್ಯಗಳು, ಮೈನ್‌ಗಳನ್ನು ಅಳವಡಿಸುವ ಸಾಮರ್ಥ್ಯ ಮತ್ತು ಸಂವಹನ ವ್ಯವಸ್ಥೆಗಳು ಗುರಿಯಾಗಿದ್ದವು.

ವಿಶೇಷವಾಗಿ ಹಾರ್ಮುಜ್‌ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳಿಗೆ ಇರಾನ್‌ ಒಡ್ಡುತ್ತಿರುವ ಅಪಾಯ ಮತ್ತು ಅಮೆರಿಕದ ಸೈನಿಕರ ಮೇಲಿನ ಇತ್ತೀಚಿನ ದಾಳಿಗಳನ್ನು ತಡೆಯುವುದು ಕಾರ್ಯಾಚರಣೆಯ ಉದ್ದೇಶ ಎಂದು ವಾಷಿಂಗ್ಟನ್‌ ಹೇಳಿದೆ. ಆದರೆ ಕುಹೆಸ್ತಾಕ್‌ನ ಮದುವೆ ಸಮಾರಂಭಕ್ಕೆ ಸಂಬಂಧಿಸಿದ ನಾಗರಿಕ ಸಾವುಗಳ ಬಗ್ಗೆ ಅಮೆರಿಕ ಇನ್ನೂ ದಾಳಿಯ ನಿಖರ ಗುರಿ ಅಥವಾ ಆ ಮನೆಯ ಮೇಲೆ ಚೂರುಗಳು ಹೇಗೆ ಬಿದ್ದವು ಎಂಬುದನ್ನು ಸಾರ್ವಜನಿಕವಾಗಿ ವಿವರಿಸಿಲ್ಲ. ಅಮೆರಿಕದ ಸೆಂಟ್ರಲ್‌ ಕಮಾಂಡ್‌ ನಾಗರಿಕ ಸಾವುಗಳ ವರದಿಗಳ ಅರಿವು ಇದೆ ಎಂದು ಹೇಳಿದ್ದು, ಅಮೆರಿಕದ ಸೇನೆ ಉದ್ದೇಶಪೂರ್ವಕವಾಗಿ ನಾಗರಿಕರನ್ನು ಗುರಿಯಾಗಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

RELATED ARTICLES
spot_img

Latest News