ನವದೆಹಲಿ/ಢಾಕಾ,ಆ.2-ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಪ್ರಸಕ್ತ ವರ್ಷದ ಡಿಸೆಂಬರ್ ವೇಳೆಗೆ ತಮ ಮಾತೃದೇಶಕ್ಕೆ ಮರಳುವ ದೃಢ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ವಿಶೇಷ ಸಂದರ್ಶನದಲ್ಲಿ ಈ ವಿಚಾರ ತಿಳಿಸಿರುವ ಅವರು, ತಮ ಹಸ್ತಾಂತರದ ಕುರಿತಾದ ಬಾಂಗ್ಲಾದೇಶ ಸರ್ಕಾರದ ಬೇಡಿಕೆಗಳನ್ನು ತಳ್ಳಿಹಾಕಿದ್ದಾರೆ.ಅನಿರ್ದಿಷ್ಟಾವಧಿ ಕಾಲ ವಿದೇಶದಲ್ಲೇ ಉಳಿಯುವ ಉದ್ದೇಶವಿಲ್ಲ, ಜನರೊಂದಿಗೆ ನಿಲ್ಲಲು ಡಿಸೆಂಬರ್ ವೇಳೆಗೆ ದೇಶಕ್ಕೆ ವಾಪಸಾಗುವುದಾಗಿ ಸ್ಪಷ್ಟಪಡಿಸಿದ್ದಾರೆ.
ರಾಜಕೀಯ ಉದ್ದೇಶಗಳಿಗಾಗಿ ತಮ ಹಸ್ತಾಂತರದ ವಿಷಯವನ್ನು ಬಳಸಿಕೊಳ್ಳಲಾಗುತ್ತಿದ್ದು, ಕಾನೂನು ಹಾಗೂ ರಾಜತಾಂತ್ರಿಕ ಪ್ರಕ್ರಿಯೆಗಳು ನಡೆಯಲಿ ಎಂದಿದ್ದಾರೆ. ತಮ ಆಡಳಿತಾವಧಿಯಲ್ಲಿ ಜಿಡಿಪಿ ಹಾಗೂ ತಲಾ ಆದಾಯ ಗಣನೀಯವಾಗಿ ಹೆಚ್ಚಿದೆ. ಆದರೆ ಪ್ರಸ್ತುತ ಬಿಎನ್‌ಪಿ ಸರ್ಕಾರದ ಆಡಳಿತದಲ್ಲಿ ಜಿಡಿಪಿ ಬೆಳವಣಿಗೆ ಕುಸಿದಿದ್ದು ಬಡತನ ಮತ್ತು ನಿರುದ್ಯೋಗ ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ. ದೇಶದಲ್ಲಿ ತೀವ್ರ ಆರ್ಥಿಕ ಮುಗ್ಗಟ್ಟು ಮತ್ತು ಅನಿಲ ಕೊರತೆ ಇರುವಾಗ 2.3 ಬಿಲಿಯನ್ ವೆಚ್ಚದಲ್ಲಿ ಚೀನಾದ ಎ-10ಸಿಇ ಯುದ್ಧ ಜೆಟ್‌ಗಳನ್ನು ಖರೀದಿಸುತ್ತಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರು, ದೇವಾಲಯಗಳು ಹಾಗೂ ಸಾಂಸ್ಕೃತಿಕ ಕೇಂದ್ರಗಳ ಮೇಲಿನ ದಾಳಿಗಳು ಹೆಚ್ಚುತ್ತಿದ್ದು, ದೇಶವು ಮತ್ತೊಂದು ಪಾಕಿಸ್ತಾನವಾಗುವ ಅಪಾಯವಿದೆ ಎಂಬ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಬಾಂಗ್ಲಾದೇಶದಲ್ಲಿ ಅಮೆರಿಕ ಹಾಗೂ ಇತರ ರಾಜತಾಂತ್ರಿಕ ಬೆಳವಣಿಗೆಗಳ ನಡುವೆ, ಶೇಖ್ ಹಸೀನಾ ಅವರ ಈ ವಾಪಸಾತಿ ಘೋಷಣೆಯು ದಕ್ಷಿಣ ಏಷ್ಯಾದ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
ಸರ್ಕಾರಿ ಉದ್ಯೋಗಗಳ ಮೀಸಲಾತಿ ವಿರುದ್ಧ ಆರಂಭವಾದ ವಿದ್ಯಾರ್ಥಿ ಚಳವಳಿಯು ಕ್ರಮೇಣ ಸರ್ಕಾರ ವಿರೋಧಿ ಆಂದೋಲನವಾಗಿ ಪರಿವರ್ತನೆಯಾಗಿತ್ತು. ಹಿಂಸಾಚಾರ ತೀವ್ರಗೊಂಡ ಹಿನ್ನೆಲೆಯಲ್ಲಿ 2024ರ ಆಗಸ್ಟ್ 5ರಂದು ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶ ತೊರೆದು ಭಾರತಕ್ಕೆ ಬಂದಿದ್ದರು. ಅವರ ಸುಮಾರು 15 ವರ್ಷಗಳ ಎರಡನೇ ಹಂತದ ಆಡಳಿತ ಅಲ್ಲಿಗೆ ಅಂತ್ಯಗೊಂಡಿತು. ನಂತರ ನೊಬೆಲ್ ಪ್ರಶಸ್ತಿ ಪುರಸ್ಕೃತ ಮುಹಮದ್ ಯೂನುಸ್ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆಯಾಯಿತು.
ಸಂಘರ್ಷದಲ್ಲಿ ಸಾವಿನ ಸಂಖ್ಯೆ ಕುರಿತು ವಿವಿಧ ಹಂತಗಳಲ್ಲಿ ಬೇರೆಬೇರೆ ಅಂಕಿಅಂಶಗಳು ಹೊರಬಂದವು. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ನಂತರದ ಪರಿಶೀಲನೆಯಲ್ಲಿ 2024ರ ಜುಲೈ-ಆಗಸ್ಟ್ ಹಿಂಸಾಚಾರದಲ್ಲಿ ಸುಮಾರು 1,400 ಮಂದಿ ಸಾವನ್ನಪ್ಪಿರಬಹುದೆಂದು ಅಂದಾಜಿಸಿತ್ತು. ಹೀಗಾಗಿ ಹಸೀನಾ ಅವರ ಪತನ ಕೇವಲ ರಾಜಕೀಯ ಅಧಿಕಾರ ಬದಲಾವಣೆ ಮಾತ್ರವಲ್ಲದೆ ಗಂಭೀರ ಮಾನವ ಹಕ್ಕುಗಳ ವಿವಾದಕ್ಕೂ ಕಾರಣವಾಯಿತು.
ಅವಾಮಿ ಲೀಗ್‌ಗೆ ನಿರ್ಬಂಧ
ಹಸೀನಾ ಭಾರತದಲ್ಲಿರುವ ಅವಧಿಯಲ್ಲಿ ಅವರ ಅವಾಮಿ ಲೀಗ್ ಪಕ್ಷವೂ ಬಾಂಗ್ಲಾದೇಶದಲ್ಲಿ ದೊಡ್ಡ ಹೊಡೆತ ಅನುಭವಿಸಿತು. 2025ರ ಮೇನಲ್ಲಿ ಮಧ್ಯಂತರ ಸರ್ಕಾರವು ರಾಷ್ಟ್ರೀಯ ಭದ್ರತೆಯ ಕಾರಣವನ್ನು ಉಲ್ಲೇಖಿಸಿ ಅವಾಮಿ ಲೀಗ್‌ನ ಚಟುವಟಿಕೆಗಳನ್ನು ಭಯೋತ್ಪಾದನೆ ವಿರೋಧಿ ಕಾನೂನಿನಡಿ ನಿಷೇಧಿಸಿತು. ನಂತರ ಚುನಾವಣಾ ಆಯೋಗವೂ ಪಕ್ಷದ ನೋಂದಣಿಯನ್ನು ಅಮಾನತುಗೊಳಿಸಿತು. ಪರಿಣಾಮ ಮುಂದಿನ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸುವ ಸಾಧ್ಯತೆ ಗಂಭೀರವಾಗಿ ಕುಂಠಿತವಾಯಿತು.
ಇದನ್ನೇ ಹಸೀನಾ ಈಗ ಪ್ರಶ್ನಿಸುತ್ತಿದ್ದಾರೆ. ಅವರ ವಾದದ ಪ್ರಕಾರ, ಅವಾಮಿ ಲೀಗ್‌ನ ಭವಿಷ್ಯವನ್ನು ನಿಷೇಧದ ಮೂಲಕ ನಿರ್ಧರಿಸುವ ಬದಲು ಚುನಾವಣೆಯಲ್ಲಿ ಜನರೇ ತೀರ್ಮಾನಿಸಬೇಕು. ಪಕ್ಷವು ತನ್ನ ಐತಿಹಾಸಿಕ ಪಾತ್ರವನ್ನು ಹೊಂದಿದೆ ಮತ್ತು ರಾಜಕೀಯವಾಗಿ ಅದನ್ನು ಸಂಪೂರ್ಣವಾಗಿ ಅಳಿಸಲು ಸಾಧ್ಯವಿಲ್ಲ ಎಂಬುದು ಅವರ ನಿಲುವು. ಆದರೆ ಬಾಂಗ್ಲಾದೇಶದ ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಅವಾಮಿ ಲೀಗ್‌ನ ವಿರುದ್ಧದ ಪ್ರಕರಣಗಳು, 2024ರ ಹಿಂಸಾಚಾರದ ಹೊಣೆಗಾರಿಕೆ ಮತ್ತು ಪಕ್ಷದ ನಾಯಕತ್ವದ ಮೇಲಿನ ಕಾನೂನು ಕ್ರಮಗಳು ಈ ಪ್ರಶ್ನೆಯನ್ನು ಅತ್ಯಂತ ಸಂಕೀರ್ಣಗೊಳಿಸಿವೆ.
