ಬೆಂಗಳೂರು, ಸೆ.2- ಮಹಿಳಾ ಸಬಲೀಕರಣಕ್ಕೆ ತಮ್ಮ ಸರ್ಕಾರ ಬದ್ಧತೆ ಹೊಂದಿದ್ದು, ಯಾವುದೇ ಸಮಸ್ಯೆಗಳಿದ್ದರೂ ಚರ್ಚೆಗೆ ಮುಕ್ತ ಅವಕಾಶ ಕಲ್ಪಿಸುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ. ನಗರದ ಎಫ್‌ಕೆಸಿಸಿಐ ಸಭಾಂಗಣದಲ್ಲಿ ಮಹಿಳಾ ಉದ್ಯಮಿಗಳ ಸಂಸ್ಥೆ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ಉದ್ದಿಮೆದಾರರ ದಿನಾಚರಣೆಯಲ್ಲಿ ಜೊತೆಯಾಗಿ ಬೆಳೆಯೋಣ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು.
ಮಹಿಳೆಯರು ಅಡುಗೆ ಮನೆ ಮತ್ತು ಕುಟುಂಬ ನಿರ್ವಹಣೆಗಷ್ಟೆ ಸೀಮಿತವಾಗಬಾರದು. ಈ ದೇಶದ ಸಮಗ್ರ ಅಭಿವೃದ್ಧಿಗೆ ಮಹಿಳೆಯರು ಮತ್ತು ಯುವಕರ ಪಾತ್ರ ಮಹತ್ವದ್ದಾಗಿದೆ ಎಂದರು. 100 ಚಪ್ಪಲಿ ಏಟುಗಳನ್ನು ಪಟ…ಪಟ… ಎಂದು ತಿನ್ನಬಹುದು. ಆದರೆ ದುಡ್ಡಿನ ಏಟನ್ನು ತಿನ್ನಲಾಗುವುದಿಲ್ಲ ಎಂದು ತಮ್ಮ ತಾಯಿಯ ಸಹೋದರ ಹೇಳುತ್ತಿದ್ದರು. ಉದ್ಯಮಿಗಳಿಗೆ ಬ್ಯಾಂಕ್ ಸಾಲದ ಒತ್ತಡ, ವಿವಿಧ ಸರಕುಗಳನ್ನು ಪೂರೈಸಿದವರ ಬಾಕಿ ಮನ್ನಾ ಸೇರಿದಂತೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಆ ಒತ್ತಡವನ್ನು ನಿಭಾಯಿಸುವುದು ತ್ರಾಸದಾಯಕ ಎಂದರು.
ಇಂದಿನ ಸಮಾವೇಶದಲ್ಲಿ 70ಕ್ಕೂ ಹೆಚ್ಚಿನ ವಿವಿಧ ಸಂಸ್ಥೆಗಳಿಂದ ಸುಮಾರು 3 ಸಾವಿರಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದಾರೆ. ಇದು ಕೇವಲ ಸಮಾವೇಶವಲ್ಲ, ಸಾವಿರಾರು ಕನಸುಗಳ ವೇದಿಕೆ ಎಂದು ಬಣ್ಣಿಸಿದರು. ಮಹಿಳೆಯರಿಗೆ ಅಗಾಧವಾದ ಸಾಮರ್ಥ್ಯವಿದೆ ಎಂದು ಹೇಳಿದ ಡಿ.ಕೆ.ಶಿವಕುಮಾರ್, ತಮ ಪತ್ನಿ ಹಾಗೂ ಪುತ್ರಿಯ ಕಾರ್ಯ ವೈಖರಿಯನ್ನು ಕೊಂಡಾಡಿದರು. ಹೆಣ್ಣು ತಾಯಿಯಾಗಿ, ಮಡದಿಯಾಗಿ, ಪುತ್ರಿಯಾಗಿ, ಶಿಕ್ಷಕಿಯಾಗಿ ನಾನಾ ಪಾತ್ರಗಳನ್ನು ನಿಭಾಯಿಸುತ್ತಾರೆ. ನಮ ಸಂಸ್ಕೃತಿಯಲ್ಲಿ ಹೆಣ್ಣಿಗೆ ಮಹತ್ವದ ಪಾತ್ರ ಇದೆ ಎಂದು ಹೇಳಿದರು.
ಭಾರತದ ಪ್ರಾಚೀನ ಗ್ರಂಥದಲ್ಲಿ ಸೀತೆ ರಾಮನಿಗಿಂತಲೂ ಹೆಚ್ಚಿನ ನೈತಿಕತೆ ಮತ್ತು ಸಾಮರ್ಥ್ಯ ಹೊಂದಿದ್ದರು. ಈ ಬಗ್ಗೆ ನಾನು ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ ಎಂದು ಮುಖ್ಯಮಂತ್ರಿ ಹೆಳಿದರು.
ಗಣೇಶ ಹಬ್ಬಕ್ಕಿಂತ ಮೊದಲು ಗೌರಿ ಹಬ್ಬ ಬರುತ್ತದೆ. ಪಾರ್ವತಿ ಪರಮೇಶ್ವರ ಸೇರಿದಂತೆ ಹಲವಾರು ಸಂದರ್ಭಗಳನ್ನು ಇದೇ ವೇಳೆ ಮುಖ್ಯಮಂತ್ರಿ ಸರಿಸಿಕೊಂಡರು. ಮಹಿಳಾ ಶಕ್ತಿಯನ್ನು ಅಂದಾಜಿಸಿಯೇ ತಾವು ಗೃಹಲಕ್ಷ್ಮಿ, ಶಕ್ತಿಯಂತಹ ಮಹತ್ವದ ಯೋಜನೆಗಳನ್ನು ಘೋಷಿಸಿರುವುದಾಗಿ ಮುಖ್ಯಮಂತ್ರಿ ಹೇಳಿದರು.
ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದಾಗ ಪ್ರಧಾನಮಂತ್ರಿ ಸೇರಿದಂತೆ ಬಿಜೆಪಿಯವರು ಟೀಕೆ ಮಾಡಿದ್ದರು. ಆದರೆ, ಅವುಗಳು ಇಂದು ರಾಜ್ಯದಲ್ಲಿ ಮಹಿಳೆಯರ ಸಬಲೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ವಿವರಿಸಿದರು. ಬೆಂಗಳೂರಿನಲ್ಲಿ ಸುರಂಗ ರಸ್ತೆ ಯೋಜನೆಗೆ ಕೆಲವು ಮೂರ್ಖ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಂತಹವರಿಗೆ ಮಹಿಳಾ ಉದ್ಯಮಿಗಳು ಬಾಯಿಬಿಟ್ಟು ಮಾತನಾಡುವ ಮೂಲಕ ತಕ್ಕ ಉತ್ತರ ನೀಡಬೇಕು ಎಂದರು.
ಬೆಂಗಳೂರು ಬೃಹದಾಕಾರವಾಗಿ ಬೆಳೆದಿದೆ. ಸಂಚಾರ ದಟ್ಟಣೆ ವ್ಯಾಪಕವಾಗಿದೆ. ರಸ್ತೆಗಳನ್ನು ಅಗಲೀಕರಣ ಮಾಡಲು ಆಸ್ತಿ-ಪಾಸ್ತಿಗಳನ್ನು ಹೊಡೆಯಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಸುರಂಗ ರಸ್ತೆ ಯೋಜನೆ ಬಹು ಮುಖ್ಯವಾಗಿದೆ. ಆದರೆ ಅದನ್ನು ಕೆಲವರು ವಿರೋಧಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಮಹಿಳಾ ಉದ್ಯಮಿದಾರರ ಅಧ್ಯಕ್ಷೆ ರತ್ನಪ್ರಭಾ ಸೇರಿದಂತೆ ಮಹಿಳಾ ಉದ್ಯಮಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
