Homeರಾಜ್ಯಬಂಡೀಪುರ, ನಾಗರಹೊಳೆ ಸಫಾರಿ ಮತ್ತಷ್ಟು ದುಬಾರಿ

ಬಂಡೀಪುರ, ನಾಗರಹೊಳೆ ಸಫಾರಿ ಮತ್ತಷ್ಟು ದುಬಾರಿ

ಬೆಂಗಳೂರು,ಸೆ.2- ಹುಲಿ, ಚಿರತೆ, ಆನೆ ಸೇರಿದಂತೆ ಅಪರೂಪದ ವನ್ಯಜೀವಿಗಳನ್ನು ಅವುಗಳ ನೈಸರ್ಗಿಕ ಆವಾಸದಲ್ಲೇ ಕಣ್ತುಂಬಿ ಕೊಳ್ಳಲು ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಿಗೆ ತೆರಳುವ ಪ್ರವಾಸಿಗರಿಗೆ ಇನ್ನು ಮುಂದೆ ಹೆಚ್ಚಿನ ಹಣ ತೆರಬೇಕಾಗಿದೆ. ಕರ್ನಾಟಕ ಅರಣ್ಯ ಇಲಾಖೆ ಪರಿಷ್ಕರಿಸಿರುವ ಸಫಾರಿ ದರಗಳು ಸೆಪ್ಟೆಂಬರ್‌ 1, 2026ರಿಂದ ಜಾರಿಗೆ ಬಂದಿದ್ದು, ಬಸ್‌‍ ಹಾಗೂ ಜೀಪ್‌ ಸಫಾರಿ ಸೇರಿದಂತೆ ಹಲವು ಸೇವೆಗಳ ಶುಲ್ಕದಲ್ಲಿ ಗಣನೀಯ ಏರಿಕೆಯಾಗಿದೆ.

ಜುಲೈ 2026ರಲ್ಲಿ ಪರಿಶೀಲಿಸಿ ಅನುಮೋದಿಸಲಾಗಿದ್ದ ಪರಿಷ್ಕೃತ ದರಗಳನ್ನು ಆಗಸ್ಟ್‌ನಿಂದಲೇ ಜಾರಿಗೆ ತರಲು ಉದ್ದೇಶಿಸಲಾಗಿತ್ತು. ಆದರೆ ಜಾರಿಯನ್ನು ಸೆಪ್ಟೆಂಬರ್‌ಗೆ ಮುಂದೂಡಲಾಗಿತ್ತು. ಇದೀಗ ಹೊಸ ದರಗಳು ಬಂಡೀಪುರದ ಮೇಲುಕಮನಹಳ್ಳಿ ಹಾಗೂ ನಾಗರಹೊಳೆಯ ಕಾಕನಕೋಟೆ, ವೀರನಹೊಸಹಳ್ಳಿ ಮತ್ತು ನಾನಚಿ ಗೇಟ್‌ಗಳಿಂದ ನಡೆಯುವ ಸಫಾರಿ ಕಾರ್ಯಾಚರಣೆಗಳಿಗೆ ಅನ್ವಯವಾ ಗುತ್ತಿವೆ.
ಪರಿಷ್ಕೃತ ದರಪಟ್ಟಿಯ ಪ್ರಕಾರ, ಬಸ್‌‍ ಸಫಾರಿಯಲ್ಲಿ ವಯಸ್ಕರಿಗೆ 1,000 ಮತ್ತು ಮಕ್ಕಳಿಗೆ 500 ಶುಲ್ಕ ನಿಗದಿಯಾಗಿದೆ. ಜೀಪ್‌ ಸಫಾರಿಗೆ ವಯಸ್ಕರಿಗೆ 1,500 ಹಾಗೂ ಮಕ್ಕಳಿಗೆ 750 ಪಾವತಿಸಬೇಕು. ಲಭ್ಯವಿರುವ ವರದಿಗಳ ಪ್ರಕಾರ, ಕೆಲವು ಹಳೆಯ ದರಗಳಿಗೆ ಹೋಲಿಸಿದರೆ ಜೀಪ್‌ ಸಫಾರಿ ದರದಲ್ಲಿ ಏರಿಕೆ ಅತ್ಯಂತ ಗಮನಾರ್ಹವಾಗಿದೆ.

ಇದರ ಜತೆಗೆ ಕ್ಯಾಮೆರಾ ಬಳಕೆ, ಪಾರ್ಕಿಂಗ್‌ ಮತ್ತು ಇತರ ಪ್ರವೇಶ ಶುಲ್ಕಗಳನ್ನೂ ಪರಿಷ್ಕರಿಸಲಾಗಿದೆ. 200 ಮಿ.ಮೀ.ಗಿಂತ ಹೆಚ್ಚಿನ ಸಾಮರ್ಥ್ಯದ ಲೆನ್‌್ಸ ಹೊಂದಿರುವ ಕ್ಯಾಮೆರಾಗಳಿಗೆ 1,500 ಶುಲ್ಕದ ಜೊತೆಗೆ 18% ಜಿಎಸ್‌‍ಟಿ ಸೇರಿ ಒಟ್ಟು 1,770 ಪಾವತಿಸಬೇಕಾಗುತ್ತದೆ ಎಂದು ಪ್ರಕಟಿತ ದರಪಟ್ಟಿಗಳು ತಿಳಿಸಿವೆ. 200 ಮಿ.ಮೀ.ಗಿಂತ ಕಡಿಮೆ ಲೆನ್‌್ಸಗಳಿಗೆ ಕ್ಯಾಮೆರಾ ಶುಲ್ಕದಿಂದ ವಿನಾಯಿತಿ ಮುಂದುವರಿಯುತ್ತದೆ.

ಮೂರು ವರ್ಷಗಳ ಬಳಿಕ ದರ ಪರಿಷ್ಕರಣೆ:
ಅರಣ್ಯ ಇಲಾಖೆಯ ಪ್ರಕಾರ, ಸಫಾರಿ ಕಾರ್ಯಾಚರಣೆಯ ವೆಚ್ಚದಲ್ಲಿ ಗಣನೀಯ ಏರಿಕೆ ಕಂಡುಬಂದಿರುವುದು ದರ ಪರಿಷ್ಕರಣೆಯು ಪ್ರಮುಖ ಕಾರಣವಾಗಿದೆ. ಇಂಧನದ ಬೆಲೆ, ವಾಹನಗಳ ನಿರ್ವಹಣೆ ಹಾಗೂ ಸಫಾರಿ ಕಾರ್ಯಾಚರಣೆಯಲ್ಲಿ ತೊಡಗಿರುವ ಹೊರಗುತ್ತಿಗೆ ಸಿಬ್ಬಂದಿಯ ವೇತನ ಸೇರಿದಂತೆ ನಿರ್ವಹಣಾ ವೆಚ್ಚಗಳು ಹೆಚ್ಚಾಗಿವೆ. ಮೂರು ವರ್ಷಗಳ ಬಳಿಕ ಸಫಾರಿ ದರವನ್ನು ಪರಿಷ್ಕರಿಸಲಾಗಿದೆ.
ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರ ಪ್ರಕಾರ, ಹಿಂದಿನ ಸಫಾರಿ ವ್ಯವಸ್ಥೆಗೆ ಹೋಲಿಸಿದರೆ ಪ್ರವಾಸದ ಅವಧಿ ಮತ್ತು ಕ್ರಮಿಸುವ ದೂರದಲ್ಲಿ ಬದಲಾವಣೆಗಳಾಗಿವೆ. ಹೀಗಾಗಿ ಕಾರ್ಯಾಚರಣೆಯ ವೆಚ್ಚವೂ ಹೆಚ್ಚಾಗಿದೆ.

ದರ ಏರಿಕೆಯೊಂದಿಗೆ ಸಫಾರಿ ಕಾರ್ಯಾಚರಣೆಯ ಸ್ವರೂಪದಲ್ಲೂ ಬದಲಾವಣೆ ತರಲಾಗಿದೆ. ಹಿಂದಿನ ಸುಮಾರು ಒಂದೂವರೆ ಗಂಟೆಯ ಸಫಾರಿಗೆ ಹೋಲಿಸಿದರೆ, ಹೊಸ ವ್ಯವಸ್ಥೆಯಲ್ಲಿ ಪ್ರತಿ ಪ್ರವಾಸದ ಅವಧಿಯನ್ನು ಸುಮಾರು ಎರಡೂವರೆ ಗಂಟೆಯಿಂದ ಮೂರು ಗಂಟೆಯವರೆಗೆ ವಿಸ್ತರಿಸಲಾಗಿದೆ. ಸಫಾರಿ ಮಾರ್ಗದ ಉದ್ದವೂ ಹಿಂದಿನ ಸುಮಾರು 15-20 ಕಿ.ಮೀ.ನಿಂದ 30-35 ಕಿ.ಮೀ.ವರೆಗೆ ವಿಸ್ತರಿಸುವ ಉದ್ದೇಶ ಹೊಂದಿದೆ.

RELATED ARTICLES
spot_img

Latest News