ಮಂಗಳೂರು, ಸೆ.2- ಜನರಿಗೆ ಶುದ್ಧ ಆಹಾರ ಪೂರೈಸುವ ನಿಟ್ಟಿನಲ್ಲಿ ತಜ್ಞರ ತಂಡದ ತಪಾಸಣೆ ನಿರಂತರವಾಗಿ ನಡೆಯಲಿದ್ದು, 2ನೇ ಬಾರಿ ಲೋಪ ಗಳು ಕಂಡು ಬಂದರೆ ಮುಲಾಜಿಲ್ಲದೆ ಕಠಿಣಕ್ರಮ ಜರುಗಿಸಲಾಗುವುದು ಎಂದು ಅರೋಗ್ಯ ಸಚಿವ ಯು.ಟಿ.ಖಾದರ್ ಎಚ್ಚರಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಆಹಾರ ಸುರಕ್ಷತಾ ಇಲಾಖೆ ಬೆಂಗಳೂರು ಕೇಂದ್ರಿತವಾಗಿ ನಡೆಸುತ್ತಿದ್ದ ತಪಾಸಣೆಗಳನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಹೇಳಿದರು.
ಈಗಾಗಲೇ ಸಿಹಿ ತಯಾರಿಕಾ ಸಂಸ್ಥೆಗಳ ಮೇಲೆ ದಾಳಿ ನಡೆಸಿ, ಎರಡು ಘಟಕಗಳನ್ನು ಬಂದ್ ಮಾಡಿಸಲಾಗಿದೆ. ಉಳಿದ ಸಂಸ್ಥೆಗಳಿಗೆ ನೋಟೀಸ್ ನೀಡಲಾಗಿದೆ. ದಂಡ ವಿಧಿಸುವುದು ಸೇರಿದಂತೆ ಕಠಿಣಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು. ಮಂಗಳೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮೈಸೂರು ಸೇರಿದಂತೆ ವಿವಿಧ ನಗರಗಳಲ್ಲೂ ತಪಾಸಣೆ ನಡೆಸಲಾಗುವುದು.ಗುಣಮಟ್ಟ ರಕ್ಷಣೆ, ಕಲಬೆರಕೆ ರಹಿತ ಶುದ್ಧ ಆಹಾರ ಪೂರೈಕೆ ನಮ್ಮಮ ಆಧ್ಯತೆಯಾಗಿದೆ. ಈ ನಿಟ್ಟಿನಲ್ಲಿ ತಪಾಸಣೆಗಳು ನಿರಂತರವಾಗಿರುತ್ತವೆ. ವ್ಯಾಪಾರ ವಹಿವಾಟುಗಳು ನಡೆಯಬೇಕೆಂಬ ಕಾರಣಕ್ಕಾಗಿ ಮೊದಲ ಹಂತದ ತಪಾಸಣೆಯಲ್ಲಿ ಲೋಪಗಳು ಕಂಡು ಬಂದರೂ ಎಚ್ಚರಿಕೆ ನೀಡಿಲಾಗುವುದು. ಎರಡನೇ ಬಾರಿಯ ತಪಾಸಣೆಯಲ್ಲಿ ಈ ರೀತಿ ಲೋಪಗಳು ಕಂಡು ಬಂದರೆ ಮುಲಾಜಿಲ್ಲದೇ ಕಠಿಣಕ್ರಮ ಜರುಗಿಸಲಾಗುವುದು ಎಂದರು.
ಹೋಟೆಲ್ ಮಾಲೀಕರು ಸೇರಿದಂತೆ ಎಲ್ಲರೂ ತಮಗೆ ಪರಿಚಿತರೇ ಆಗಿದ್ದಾರೆ. ಲೋಪಗಳು ಕಂಡು ಬಂದಾಗ ತಮ ಬಳಿ ಬಂದು ನೆರವು ನೀಡುವಂತೆ ಒತ್ತಡ ಹಾಕಬೇಡಿ. ತಪ್ಪು ಮಾಡಿದವರಿಗೆ ನನ್ನಿಂದ ಯಾವುದೇ ರೀತಿಯ ರಕ್ಷಣೆ ಸಿಗುವುದಿಲ್ಲ. ಹೋಟೆಲ್ ಮಾಲೀಕರಂತೆ, ಊಟ ಮಾಡುವವರು ಕೂಡ ತಮಗೆ ಪರಿಚಯದವರಾಗಿದ್ದಾರೆ. ಅವರ ಸುರಕ್ಷತೆಗೂ ನಾನು ಆಧ್ಯತೆ ನೀಡಬೇಕಿದೆ ಎಂದರು. ಪಿಜಿಗಳು ಆಹಾರದ ಗುಣಮಟ್ಟ ಕಾಪಾಡಿಕೊಳ್ಳದೇ ಇದ್ದರೆ ಕಠಿಣಕ್ರಮ ಜರುಗಿಸಲಾಗುತ್ತದೆ. ಹೋಟೆಲ್, ರೆಸ್ಟೋರೆಂಟ್, ಔಷಧಿ ಅಂಗಡಿ ಸೇರಿದಂತೆ ಎಲ್ಲಾ ಕಡೆ ಕ್ಯೂಆರ್ ಕೋಡ್ ಅಳವಡಿಕೆಯನ್ನು ಖಡ್ಡಾಯಗೊಳಿಸಲಾಗುತ್ತದೆ. ಕ್ಯೂಆರ್ ಕೋಡ್ನಿಂದ ದೂರು ದಾಖಲಾದರೆ ಅದರ ತಪಾಸಣೆ ನಡೆಸುವುದು ಖಡ್ಡಾಯ ಎಂದರು.
ಜೊತೆಗೆ ಆಹಾರ ಸುರಕ್ಷತೆಗಾಗಿ ಪ್ರತಿಯೊಂದು ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ನಿರ್ಧಿಷ್ಟ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುವುದು ಎಂದು ಹೇಳಿದರು. ಕೆಎಫ್ಸಿ ಸೇರಿದಂತೆ ಇತರ ಸಂಸ್ಥೆಗಳಲ್ಲಿ ಲೋಪಗಳು ಕಂಡು ಬಂದಾಗ ದಾಸ್ತಾನು ಮಳಿಗೆಗಳನ್ನು ಮುಚ್ಚಿಸಲಾಗಿತ್ತು, ನೋಟೀಸ್ ಕೂಡ ಕೊಡಲಾಗಿತ್ತು. ಅವರಿಂದ ಉತ್ತರ ಬಂದಿದ್ದು ಗೋದಾಮಿನಲ್ಲಿ ಇತರ ವಸ್ತುಗಳು ಇದ್ದುದ್ದಕ್ಕಾಗಿ ವ್ಯಾಪಾರ ದೃಷ್ಟಿಯಿಂದ ಮರು ತೆರೆಯಲು ಅವಕಾಶ ಮಾಡಿಕೊಡಲಾಗಿದೆ ಎಂದರು.
ಅಧಿಕಾರಿಗಳು ದೊಡ್ಡ ದೊಡ್ಡ ಸಂಸ್ಥೆಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಸಂಸ್ಥೆಯವರು ನ್ಯಾಯಾಲಯಕ್ಕೆ ಹೋಗಿ ಪ್ರಯೋಗಾಲಯದ ವರದಿಯೇ ಸರಿಯಿಲ್ಲ ಎಂದು ಸಬೂಬು ಹೇಳಿ ರಕ್ಷಣೆ ಪಡೆಯುತ್ತಿದ್ದಾರೆ. ಈ ಲೋಪವನ್ನು ಸರಿಪಡಿಸಲು ರಾಜ್ಯದಲ್ಲಿ ಅತ್ಯಾಧುನಿಕವಾದ ಪ್ರಯೋಗಾಲಯ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು. ಪಡಿತರ ವ್ಯವಸ್ಥೆಯಲ್ಲಿ ವಿತರಿಸುವ ಅಕ್ಕಿ ಗುಣಮಟ್ಟವನ್ನು ಪರಿಶೀಲಿಸುವುದಾಗಿ ಹೇಳಿದರು.
ರಾಜ್ಯದಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ವಿಚಾರವಾಗಿ ಎರಡನೇ ಹಂತ ತಪಾಸಣೆ ಮತ್ತು ಸೇರ್ಪಡೆಗೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ಸಾರ್ವಜನಿಕರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ದುಡಿಯಲಿಕ್ಕಾಗಿ ವಿದೇಶಕ್ಕೆ ಹೋಗಿರುವವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತದೆ. ಸ್ಥಳದಲ್ಲಿ ಇಲ್ಲ ಎಂಬ ಕಾರಣಕ್ಕಾಗಿ ಈ ಕ್ರಮ ತೆಗೆದುಕೊಳ್ಳುವುದು ಸರಿಯಲ್ಲ. ವಿದೇಶದಲ್ಲಿರುವವರನ್ನು ಪರಿಶೀಲಿಸಲು ಸೂಕ್ತ ವ್ಯವಸ್ಥೆಯನ್ನು ಕೈಗೊಳ್ಳಬೇಕು. ಮತದಾರರ ಪಟ್ಟಿ ಪರಿಷ್ಕರಣೆಗೆ ರಾಜ್ಯಾದ್ಯಂತ ಏಕರೂಪ ವ್ಯವಸ್ಥೆ ರೂಪಿಸಬೇಕು. ಗೊಂದಲಗಳು ಇಲ್ಲದಂತೆ ಎಸ್ಐಆರ್ ನಡೆಯಬೇಕು. ಮತದಾರರನ್ನು ಪಟ್ಟಿಯಿಂದ ಕೈಬಿಡುವ ಬದಲು ಸೇರ್ಪಡೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಒತ್ತಾಯಿಸಿದರು.
ಕೆಆರ್ಡಿಎಲ್ನ ಅಧಿಕಾರಿಗಳು ತಮ ಹೆಸರನ್ನು ದುರುಪಯೋಗಪಡಿಸಿಕೊಂಡು ಕಾಮಗಾರಿ ನಿರ್ವಹಿಸುತ್ತಿದ್ದರೆ ಅಂತಹ ಅಧಿಕಾರಿಗಳನ್ನು ಸೇವೆಯಿಂದಲೇ ವಜಾಗೊಳಿಸಬೇಕೆಂದು ಒತ್ತಾಯಿಸಿದರು.
