ಬೆಂಗಳೂರು, ಸೆ.19- ಕಸ್ತೂರಿ ರಂಗನ್ ವರದಿ ಹಿನ್ನೆಲೆಯಲ್ಲಿ ಜನರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಅದೇ ಸಮಯಕ್ಕೆ ಪರಿಸರ ರಕ್ಷಣೆಗೂ ಒತ್ತು ನೀಡುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಸರ್ಕಾರಿ ಪದವಿಪೂರ್ವ ಕಾಲೇಜುಮೈದಾನದಲ್ಲಿ ನಡೆದ ನೇರ ಸಂವಾದ ಸಭೆಯಲ್ಲಿ ಮಾತನಾಡಿದ ಅವರು, ಜನರ ಅಭಿಪ್ರಾಯ ಸಂಗ್ರಹಿಸಲು ತಾವು ಪಶ್ಚಿಮ ಘಟ್ಟದ ಜಿಲ್ಲೆಗಳಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸುತ್ತಿರುವುದಾಗಿ ತಿಳಿಸಿದರು.
ಈಗಾಗಲೇ ನಿನ್ನೆ ಹೆಬ್ರಿಯಲ್ಲಿ ಸಭೆ ನಡೆಸಲಾಗಿದೆ. ಇಂದು ಮತ್ತು ನಾಳೆ ಮತ್ತಷ್ಟು ಸಭೆಗಳನ್ನು ನಡೆಸುತ್ತೇನೆ. ಅಧಿಕಾರಿಗಳು, ಜನ ಪ್ರತಿನಿಧಿಗಳ ಅಭಿಪ್ರಾಯವನ್ನು ಸಂಗ್ರಹಿಸುವುದಾಗಿ ಹೇಳಿದರು.ಮಲೆನಾಡು ಭಾಗದ ಜನ ಆತಂಕಕ್ಕೊಳಾಗುವ ಅಗತ್ಯ ಇಲ್ಲ. ಸರ್ಕಾರ ನಿಮ ಬೆಂಬಲಕ್ಕಿದೆ. ಸೋಮವಾರದಿಂದ ನಡೆಯುವ ಅಧಿವೇಶನದಲ್ಲಿ ಈ ಕುರಿತು ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.ಶರಾವತಿ ಹಿನ್ನೀರಿನ ಯೋಜನೆಯಲ್ಲಿ ಮುಳುಗಡೆಯಾಗಿರುವ ಭೂಮಿಯ ಸಂತ್ರಸ್ತರ ಪುನರ್ ವಸತಿಗೂ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಕಸ್ತೂರಿ ರಂಗನ್ ವರದಿ ವಿಚಾರವಾಗಿ ಪಕ್ಷಾತೀತವಾಗಿ ವಿರೋಧ ವ್ಯಕ್ತವಾಯಿತು. ಸಂಸದ ಬಿ.ವೈ.ರಾಘವೇಂದ್ರ, ರಾಜ್ಯ ಸರ್ಕಾರ ಕೇಂದ್ರದತ್ತ ಬೆರಳು ಮಾಡಿ ಹೊಣೆಗಾರಿಕೆಯಿಂದ ನುಣಚಿಕೊಳ್ಳುವ ಪ್ರಯತ್ನ ಮಾಡಬಾರದು. ಈ ಹಿಂದೆ 1999ರಲ್ಲಿ ಆಗಿನ ಸರ್ಕಾರಗಳು ಗಾಡ್ಗಿಲ್ ಮತ್ತು ಕಸ್ತೂರಿ ರಂಗನ್ ಸಮಿತಿಗಳನ್ನು ರಚಿಸದೇ ಇದ್ದಿದ್ದರೆ ಈಗಿನ ಆತಂಕ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎಂದರು.
ಶಾಸಕ ಅರಗ ಜ್ಞಾನೇಂದ್ರ ಮಾತನಾಡಿ, ವರದಿ ಅನುಷ್ಠಾನಕ್ಕೆ ಆಕ್ಷೇಪಣೆ ಸಲ್ಲಿಸಲು ಕೇಂದ್ರ ಸರ್ಕಾರ ನಿಗದಿ ಪಡಿಸುವ ಗಡುವನ್ನು ಒಂದು ವರ್ಷದ ಅವಧಿಗೆ ವಿಸ್ತರಣೆ ಮಾಡಲು ಮನವಿ ಮಾಡಬೇಕು. ಅಷ್ಟರೊಳಗೆ ಸಮೀಕ್ಷೆ ನಡೆಸಿ ವಾಸ್ತವ ಅಂಶವನ್ನು ಸಿದ್ಧಗೊಳಿಸಬೇಕು ಎಂದರು.ಗುಟ್ಕಾ ನಿಷೇಧವನ್ನು ಹಿಂಪಡೆಯಬೇಕು. ಇದರಿಂದ ಅಡಿಕೆ ಬೆಳೆಗಾರರಿಗೆ ಸಮಸ್ಯೆ ಎದುರಾಗುತ್ತದೆ ಎಂದರು.
ಶಾಸಕ ಚೆನ್ನಬಸಪ್ಪ ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿಯಾಗಬಾರದು. ಮೊದಲ ಕರಡು ಅಧಿಸೂಚನೆ 2014ರ ಮಾರ್ಚ್ನಲ್ಲಿ ಹೊರಡಿಸಲಾಗಿದೆ. ಅನಂತರ 7 ಅಧಿಸೂಚನೆಗಳು ಪ್ರಕಟವಾಗಿವೆ. ಆದರೆ ವರದಿ ಅನುಷ್ಠಾನಕ್ಕೆ ಬಂದಿಲ್ಲ ಎಂದರು.ಜಿಲ್ಲೆಯ ವಿವಿಧ ಹೋರಾಟಗಾರರು, ರೈತ ಮುಖಂಡರು, ಸ್ಥಳೀಯ ಜನ ಪ್ರತಿನಿಧಿಗಳು ಮಾತನಾಡಿ, ವರದಿಯಿಂದ ಜನ ಸಾಮಾನ್ಯರಿಗಾಗುತ್ತಿರುವ ತೊಂದರೆಗಳನ್ನು ವಿವರಿಸಿ ಆಕ್ರೋಶ ವ್ಯಕ್ತಪಡಿಸಿದರು.
ಅರಣ್ಯ ಉಳಿಯಬೇಕು. ಹಾಗೆಂದು ಜನರ ಮಾರಣಹೋಮ ಮಾಡಿ ವರದಿ ಅನುಷ್ಠಾನ ಮಾಡುವುದು ಸರಿಯಲ್ಲ ಎಂದರು. ವರದಿಯ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲು ಮುಖ್ಯಮಂತ್ರಿಯವರೇ ಆಗಮಿಸಿರುವುದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಯಿತು. ಅದೇ ವೇಳೆ ವರದಿ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ ಕರೆದಿರುವುದಕ್ಕೂ ಶ್ಲಾಘನೆಗಳು ಕೇಳಿ ಬಂದವು.ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವ ಕಿಮನೆ ರತ್ನಾಕರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
