ಬೆಂಗಳೂರು,ಸೆ.3- ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ಪ್ರಮುಖ ಆರೋಪಿ ಎನ್ನಲಾದ ಬಸವರಾಜ್ ಕನ್ನಾಳೆಗೆ ಸಚಿವರು, ಸಂಸದರು, ಶಾಸಕರು ಸೇರಿದಂತೆ 50ಕ್ಕೂ ಹೆಚ್ಚು ರಾಜಕಾರಣಿಗಳ ಸಂಪರ್ಕವಿದೆ ಎಂದು ತಿಳಿದುಬಂದಿದೆ. ಸಿಐಡಿ ಪೊಲೀಸರು ಈತನನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಮೊಬೈಲ್ ಫೋನ್ ಹಾಗೂ ಕರೆಗಳ ವಿವರ(ಸಿಡಿಆರ್)ಗಳನ್ನು ಪರಿಶೀಲಿಸಿದಾಗ ರಾಜಕೀಯ ವ್ಯಕ್ತಿಗಳ ಸಂಪರ್ಕ ಜಾಲ ಗೊತ್ತಾಗಿದೆ.
ಈತ ಮೊಬೈಲ್‌ನಲ್ಲಿ ಸಚಿವರು, ಸಂಸದರು, ಶಾಸಕರು ಸೇರಿದಂತೆ 50ಕ್ಕೂ ಹೆಚ್ಚು ರಾಜಕಾರಣಿಗಳ ದೂರವಾಣಿ ಸಂಖ್ಯೆಗಳು ಪತ್ತೆಯಾಗಿವೆ. ತುಮಕೂರಿನ ಪ್ರಭಾವಿ ರಾಜಕೀಯ ನಾಯಕರೊಬ್ಬರ ನಿಕಟ ಸಂಪರ್ಕವೂ ಸಹ ಕನ್ನಾಳೆಗಿದೆ. ಆ ಸಂಪರ್ಕವನ್ನೇ ಬಳಸಿಕೊಂಡು ಈತ ಸಿಂಡಿಕೇಟ್ ಸದಸ್ಯ ಸ್ಥಾನವನ್ನು ಪಡೆದುಕೊಂಡಿದ್ದ ಎಂಬುದು ತಿಳಿದುಬಂದಿದೆ. ನಾನೊಬ್ಬ ಉದ್ಯಮಿ ಹಾಗೂ ರಾಜಕಾರಣಿ. ನನಗೆ ಟ್ರಾವೆಲ್‌್ಸ ಸೇರಿದಂತೆ ಹಲವು ಉದ್ಯಮಗಳಿವೆ. ಬಾಲ್ಕಿಯಿಂದ ದೆಹಲಿವರೆಗೂ ನನಗೆ ಪರಿಚಿತರಿದ್ದಾರೆ ಎಂದು ಸಿಐಡಿ ಅಧಿಕಾರಿಗಳ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಬಸವರಾಜ್ ಕನ್ನಾಳೆ ಬಂಧನದ ಹಿನ್ನೆಲೆಯಲ್ಲಿ ಆತನ ಸಂಪರ್ಕದಲ್ಲಿರುವ ಪ್ರಭಾವಿ ರಾಜಕಾರಣಿಗಳು ಹಾಗೂ ಅಕ್ರಮದ ಫಲಾನುಭವಿಗಳು ಎದೆಯಲ್ಲಿ ಈ ನಡುಕ ಉಂಟಾಗಿದೆ. ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಯಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ ಎಂದು ಶಂಕೆ ವ್ಯಕ್ತವಾಗಿದ್ದು, ಈತನ ಕೈವಾಡವಿರಬಹುದೆಂದು ಸಿಐಡಿ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಸುಳಿವು : ಪಶುವೈದ್ಯಾಧಿಕಾರಿಗಳ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಮಧ್ಯವರ್ತಿ ಎಂದು ಶಂಕಿಸಲಾಗಿರುವ ಬಸವರಾಜ್ ಕನ್ನಾಳೆ ಅವರ ಬಂಧನ, ತನಿಖೆಗೆ ಮತ್ತೊಂದು ಪ್ರಮುಖ ತಿರುವು ನೀಡಿದೆ. ಸಿಐಡಿ ಆತನನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಉಜ್ಬೇಕಿಸ್ತಾನಕ್ಕೆ ತೆರಳಲು ಪ್ರಯತ್ನಿಸುತ್ತಿದ್ದಾಗ ಬಂಧಿಸಿದೆ. ಕನ್ನಾಳೆ ಮತ್ತು ಜ್ಞಾನೇಂದ್ರಕುಮಾರ್ ನಡುವೆ ನಿರಂತರ ಸಂಪರ್ಕವಿತ್ತು ಎಂಬುದು ತನಿಖಾಧಿಕಾರಿಗಳ ಅನುಮಾನವಾಗಿದೆ. ಕನ್ನಾಳೆ ಅವರ ನಿವಾಸದಲ್ಲಿ ಸಿಸಿಟಿವಿ, ಡಿವಿಆರ್, ದಾಖಲೆಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದೇ ಪ್ರಕರಣದಲ್ಲಿ ಹಣ ಪಾವತಿಸಿರುವುದಾಗಿ ಒಪ್ಪಿಕೊಂಡಿರುವ ಕೆಲವು ಅಭ್ಯರ್ಥಿಗಳು ಸಿಐಡಿ ಮುಂದೆ ಹೇಳಿಕೆ ನೀಡಿ ಸಾಕ್ಷಿಗಳಾಗಲು ಮುಂದಾಗಿದ್ದಾರೆ ಎನ್ನಲಾಗಿದೆ. ನಾಲ್ವರು ಅಭ್ಯರ್ಥಿಗಳ ಹೇಳಿಕೆ ದಾಖಲಾಗಿದ್ದು, ಪ್ರಶ್ನೆಪತ್ರಿಕೆ ಪರೀಕ್ಷೆಗೂ ಮುನ್ನ ದೊರೆತಿತ್ತು ಹಾಗೂ ಕೆಲವರಿಗೆ ಬೆಂಗಳೂರಿನ ಹೊರವಲಯದ ವಿಲ್ಲಾ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ.
ಮಾಜಿ ಅಧ್ಯಕ್ಷರ ಮೇಲೂ ತನಿಖೆ
ಈ ಪ್ರಕರಣದ ತನಿಖೆಯ ವಿಸ್ತರಣೆ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಎಸ್.ಶಿವಶಂಕರಪ್ಪ ಸಾಹುಕಾರ್ ಅವರವರೆಗೂ ತಲುಪಿದೆ. 400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಪ್ರಕರಣದಲ್ಲಿ ಸಿಐಡಿ ಅವರನ್ನು ವಿಚಾರಣೆಗೆ ಕರೆದಿತ್ತು. ಅವರ ವಿರುದ್ಧದ ಮುಂಗಡ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು. ನಂತರ ಕರ್ನಾಟಕ ಸರ್ಕಾರದ ಶಿಫಾರಸಿನ ಹಿನ್ನೆಲೆಯಲ್ಲಿ ರಾಜ್ಯಪಾಲರು ಅವರನ್ನು ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಿದ್ದರು.
ಅವರ ಕುಟುಂಬ ಸದಸ್ಯರು ಹಾಗೂ ಕೆಪಿಎಸ್‌ಸಿಯ ಇತರ ಅಧಿಕಾರಿಗಳೊಂದಿಗೆ ಸಂಬಂಧ ಹೊಂದಿರುವ ಅಭ್ಯರ್ಥಿಗಳು ಉನ್ನತ ರ್ಯಾಂಕ್ ಪಡೆದಿದ್ದಾರೆ ಎಂಬ ಆರೋಪಗಳೂ ಪ್ರಕರಣದ ಆರಂಭಿಕ ಹಂತದಲ್ಲೇ ಕೇಳಿಬಂದಿದ್ದವು.
