ಬೆಂಗಳೂರು: ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿರುವ ಎಸ್‌ಸಿಪಿ/ಎಸ್‌ಟಿಪಿ ಅನುದಾನವನ್ನು ಹಿಂಪಡೆಯಬೇಕು, ರಾಜಕೀಯದಲ್ಲೂ ಒಳಮೀಸಲಾತಿ ಜಾರಿಗೊಳಿಸಬೇಕು ಮತ್ತು ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕೆಂದು ಒತ್ತಾಯಿಸಿ ಹೆಣ್ಣೂರ್ ಶ್ರೀನಿವಾಸ್ ದಲಿತ ಸಂಘರ್ಷ ಸಮಿತಿ ನಿಯೋಗವು ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ಮನವಿ ಸಲ್ಲಿಸಿತು. ಡಿಎಸ್‌ಎಸ್ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ನೇತೃತ್ವದ ನಿಯೋಗವು ಸಚಿವರನ್ನು ಭೇಟಿಯಾಗಿ ಸಮುದಾಯದ ಜ್ವಲಂತ ಸಮಸ್ಯೆಗಳು ಮತ್ತು ವಿವಿಧ ಜಿಲ್ಲೆಗಳ ಕುಂದುಕೊರತೆಗಳ ಬಗ್ಗೆ ಗಮನ ಸೆಳೆಯಿತು.
ನಿಯೋಗದ ಪ್ರಮುಖ ಬೇಡಿಕೆಗಳಾ ಗ್ಯಾರಂಟಿ ಸೇರಿದಂತೆ ವಿವಿಧ ಯೋಜನೆಗಳಿಗೆ ವರ್ಗಾಯಿಸಿರುವ ಎಸ್‌ಸಿಪಿ/ಎಸ್‌ಟಿಪಿ ಹಣವನ್ನು ಹಿಂಪಡೆದು ಎಸ್‌ಸಿ/ಎಸ್‌ಟಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮೀಸಲಿಡಬೇಕು.
ಎಬಿಸಿಡಿ ವರ್ಗೀಕರಣದಂತೆ ರಾಜಕೀಯ ಕ್ಷೇತ್ರದಲ್ಲೂ ಒಳಮೀಸಲಾತಿ ಜಾರಿಗೊಳಿಸಬೇಕು ಮತ್ತು ಪಿಟಿಸಿಎಲ್ ಕಾಯ್ದೆಗೆ ಸಂಬಂಧಿಸಿದ ಜಮೀನುಗಳ ಬಿಡುಗಡೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಹಾಗೂ
ಗುತ್ತಿಗೆ ಆಧಾರದ ಪೌರಕಾರ್ಮಿಕರನ್ನು ತಕ್ಷಣ ಖಾಯಂಗೊಳಿಸಬೇಕು. ಮನವಿ ಸ್ವೀಕರಿಸಿದ ಸಚಿವ ಮುನಿಯಪ್ಪ ಅವರು, ಬೇಡಿಕೆಗಳನ್ನು ಪರಿಶೀಲಿಸಿ ಸೂಕ್ತ ಕಾನೂನು ಮತ್ತು ಆಡಳಿತಾತ್ಮಕ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ವೇಳೆ ಡಿಎಸ್‌ಎಸ್ ರಾಜ್ಯ ಮುಖಂಡರಾದ ಭೀಮ್ ಜ್ಯೋತಿ ,ಮರೀಶ್ ನಾಗನ್ನವರ, ಸೂಲಿಕುಂಟೆ ರಮೇಶ, ಅಶೋಕ ಛಲವಾದಿ ಪಕೀರಪ್ಪ ಹಿರೇಸಲ್ಲಿಕೆರಿ ಸೇರಿದಂತೆ ವಿವಿದ ಜಿಲ್ಲೆಯ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
