Homeರಾಜ್ಯನೈಸ್‌ ಭೂಮಿ ಸಂತ್ರಸ್ತರಿಗೆ ಸೈಟ್‌ ಹಂಚಿಕೆ!

ನೈಸ್‌ ಭೂಮಿ ಸಂತ್ರಸ್ತರಿಗೆ ಸೈಟ್‌ ಹಂಚಿಕೆ!

ಬೆಂಗಳೂರು, ಸೆ.3- ನೈಸ್‌‍ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ನೈಸ್‌‍ ಯೋಜನೆ ಕುರಿತು ಅಧ್ಯಯನಕ್ಕಾಗಿ ರಚಿಸಲಾಗಿರುವ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ನೇತೃತ್ವದ ಸಚಿವ ಸಂಪುಟ ಉಪಸಮಿತಿ ಇಂದು ವಿಧಾನಸೌಧದಲ್ಲಿ ಸಭೆ ನಡೆಸಿದೆ.

ಸಮಿತಿ ಸದಸ್ಯ ಸಚಿವರಾದ ಚೆಲುವರಾಯಸ್ವಾಮಿ, ಯತೀಂದ್ರ ಸಿದ್ದರಾಮಯ್ಯ, ಯು.ಟಿ. ಖಾದರ್‌, ಸತೀಶ್‌ ಜಾರಕಿಹೊಳಿ ಸೇರಿದಂತೆ ಹಲವರು ಭಾಗಿಯಾಗಿದ್ದರು. ನೈಸ್‌‍ ಯೋಜನೆ ರದ್ದು ಪಡಿಸಿ, ಅದನ್ನು ರಾಜ್ಯ ಸರ್ಕಾರವೇ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಪತ್ರ ಬರೆದಿದ್ದರು. ಇದಕ್ಕೂ ಮೊದಲೇ ರಚಿಸಲಾಗಿದ್ದ ಸಚಿವ ಸಂಪುಟ ಉಪ ಸಮಿತಿ ಹಲವು ಸಭೆಗಳನ್ನು ನಡೆಸಿ ವಿವಾದಿತ ಅಂಶಗಳ ಕುರಿತು ಚರ್ಚೆ ನಡೆಸಿದೆ.ಇಂದು ಮುಂದುವರೆದ ಸಭೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಎಕರೆಗೆ ನಿರ್ದಿಷ್ಟ ಪ್ರಮಾಣದಲ್ಲಿ ನಿವೇಶನ ಹಂಚಿಕೆ ಮಾಡುವ ಕುರಿತು ಚರ್ಚೆ ನಡೆಸಲಾಗಿದೆ. ಈ ಸಂಬಂಧ ಸಕ್ಷಮ ಪ್ರಾಧಿಕಾರದಿಂದ ಅಗತ್ಯ ಅನುಮತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲು ಉಪ ಸಮಿತಿ ಚರ್ಚೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.

ರೈತರಿಗೆ ಪರಿಹಾರ ನೀಡದಿರುವ ಕ್ರಮದ ಬಗ್ಗೆ ನ್ಯಾಯಾಲಯವೂ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಇದನ್ನು ಅಮಾನವೀಯ ಕ್ರಮ ಎಂದು ಹೇಳಿತ್ತು. ಇದೀಗ ನಿವೇಶನ ನೀಡುವ ಮೂಲಕ ರೈತರ ಸಮಸ್ಯೆ ಬಗೆಹರಿಸಲು ಸರ್ಕಾರ ಮುಂದಾಗಿದೆ. ಉಪಸಮಿತಿಯ ಶಿಫಾರಸು ಆಧರಿಸಿ ನಿವೇಶನ ಹಂಚಿಕೆ ಪ್ರಸ್ತಾವನೆಯನ್ನು ಸಂಪುಟ ಸಭೆಯಲ್ಲಿ ಮಂಡಿಸಲಾಗುತ್ತಿದ್ದು, ಅನುಮತಿ ದೊರೆತರೆ, ನಿಗದಿತ ಮಾನದಂಡದಂತೆ ನೈಸ್‌‍ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ನಿವೇಶನ ಹಂಚಿಕೆ ಮಾಡುವ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಇದೆ.

RELATED ARTICLES
spot_img

Latest News