ಬೆಂಗಳೂರು, ಸೆ.3- ಕೇಂದ್ರ ಸಚಿವರಾಗಿ ಎಚ್.ಡಿ.ಕುಮಾರಸ್ವಾಮಿಯವರು ಬೆಂಗಳೂರಿನಲ್ಲಿ ಪ್ರತಿದಿನ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಹೊಟ್ಟೆಕಿಚ್ಚನ್ನು ತೋರಿಸಿಕೊಳ್ಳುವ ಬದಲಾಗಿ, ದೆಹಲಿಗೆ ಹೋಗಿ ರಾಜ್ಯದ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಜಲ ಸಂಪನ್ಮೂಲ ಸಚಿವ ಎನ್.ಚೆಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ. ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿಯವರು ಬಾಯಿಗೆ ಬಂದಂತೆ ಮಾತನಾಡುವ ಬದಲು ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚೆಲುವರಾಯಸ್ವಾಮಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಲು ದೆಹಲಿಗೆ ಹೋಗಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಇಂತಹ ಹದ್ದುಮೀರಿದ ಮಾತುಗಳಿಗೆ ಉತ್ತರ ನೀಡುವುದು ಬೇಡ ಎಂದುಕೊಂಡಿದ್ದೆ. ಆದರೆ ಕೆಲವೊಮೆ ಪ್ರತಿಕ್ರಿಯಿಸಬೇಕಾಗುತ್ತದೆ. ದೆಹಲಿಗೆ ಯಾರಾದರೂ ನೀರು ಬಿಡಲು ಹೋಗುತ್ತಾರೆಯೇ ಎಂದು ಪ್ರಶ್ನಿಸಿದರು. ಎಲ್ಲಿ ಯಾವ ವಿಚಾರವನ್ನು ಹೇಗೆ ಮಾತನಾಡಬೇಕು ಎಂಬುದನ್ನು ಮರೆತು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ದೆಹಲಿಯಲ್ಲಿ ಜಲಶಕ್ತ್ತಿ ಸಚಿವರು, ಎಲ್ಲಾ ರಾಜ್ಯಗಳ ನೀರಾವರಿ ಸಚಿವರುಗಳನ್ನು ಕರೆದು ಚರ್ಚೆ ಮಾಡಿದ್ದಾರೆ. ಕುಮಾರಸ್ವಾಮಿಯವರು ಪ್ರಮುಖ ಖಾತೆಯ ಕೇಂದ್ರ ಸಚಿವರಾಗಿ ದೆಹಲಿಯಲ್ಲಿ ಉತ್ತಮ ಕೆಲಸ ಮಾಡುವ ಬದಲು ಬೆಂಗಳೂರಿಗೆ ಬಂದು ಪತ್ರಿಕಾಗೋಷ್ಠಿ ಮಾಡುತ್ತಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿರುವುದಕ್ಕೆ ಕುಮಾರಸ್ವಾಮಿಯವರಿಗೆ ಹೊಟ್ಟೆ ನೋವು ಬಂದಿದ್ದು ಸಹಿಸಿಕೊಳ್ಳಲಾಗುತ್ತಿಲ್ಲ, ಇದಕ್ಕೆ ಮದ್ದಿಲ್ಲ ಎಂದು ಹೇಳಿದರು.
ಹಿಂದೆ ದೇವೇಗೌಡರು ಮತ್ತು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗಲೂ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿದ್ದಾರೆ. ನಾವು ರೈತರ ರಕ್ಷಣೆಗೆ ಬದ್ಧರಾಗಿದ್ದೇವೆ. ಸುಪ್ರೀಂಕೋರ್ಟ್ ಸಿಡಬ್ಲ್ಯೂಆರ್ಸಿ, ಸಿಡಬ್ಲ್ಯೂಎಂಎ ಮುಂದೆ ರಾಜ್ಯ ಸರ್ಕಾರ ಸಮರ್ಥ ವಾದ ಮಂಡಿಸಿದೆ ಎಂದರು.
ತಮಿಳುನಾಡು 22 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕೇಳಿದಾಗ ರಾಜ್ಯದ ಪ್ರಬಲ ವಾದಗಿಂದಾಗಿಯೇ ಸಮಿತಿಗಳು ಕಡಿಮೆ ನೀರು ಬಿಡುವಂತೆ ನಿರ್ಧರಿಸಲು ಸಾಧ್ಯವಾಗಿದೆ. ಇದೇ 8ರಂದು ನಡೆಯುವ ಮತ್ತೊಂದು ವಿಚಾರಣೆಯಲ್ಲಿ ನೀರನ್ನು ಸಂಪೂರ್ಣ ನಿಲ್ಲಿಸಲು ಆದೇಶಿಸುವಂತೆ ನಾವು ಒತ್ತಡ ಹಾಕುತ್ತಿದ್ದೇವೆ ಎಂದರು. ಕೆಪಿಎಸ್ಸಿ ಅಕ್ರಮಗಳ ತನಿಖೆಗೆ ನಾವ್ಯಾರೂ ಅಡ್ಡಿಪಡಿಸಿಲ್ಲ. ಆದರೆ ಕೆಪಿಎಸ್ಸಿಗೆ ಸಾಹುಕಾರ್ ಶಿವಶಂಕರಪ್ಪ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದು ಯಾರು? ಎಂಬುದಕ್ಕೆ ಮೊದಲು ಉತ್ತರ ನೀಡಲಿ. ಬಿಜೆಪಿಯವರು ಶಿವಶಂಕರಪ್ಪ ಅವರನ್ನು ಅಧ್ಯಕ್ಷರನ್ನಾಗಿ ಕೂರಿಸಿದ್ದರು. ಅವರಿಂದಾದ ಭ್ರಷ್ಟಾಚಾರದ ಹೊಣೆಗಾರಿಕೆಯನ್ನು ಬಿಜೆಪಿಯವರೇ ಹೊತ್ತುಕೊಳ್ಳಬೇಕು ಎಂದರು.
ಕೆಪಿಎಸ್ಸಿಯಾಗಲೀ ಅಥವಾ ನೀಟ್ ವಿಷಯದಲ್ಲಾಗಲೀ ಅನ್ಯಾಯಕ್ಕೊಳಗಾದ ಜನರ ಪರವಾಗಿ ನಾವು ಧ್ವನಿ ಎತ್ತುತ್ತೇವೆ ಎಂದರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಉತ್ತಮ ಪರೀಕ್ಷೆಗಳು ನಡೆಯುತ್ತಿವೆ. ಕೆಪಿಎಸ್ಸಿಗೂ ಉತ್ತಮರನ್ನು ನೇಮಿಸಿದರೆ, ನೇಮಕಾತಿಗಳು ಉತ್ತಮವಾಗುತ್ತಿದ್ದವು ಎಂದರು.
