Homeರಾಜ್ಯಪ್ರಭಾವಿ ವ್ಯಕ್ತಿಗಳ ಸಲಹೆಯಂತೆ ಐಎಎಸ್‌‍ ಅಧಿಕಾರಿ ಜ್ಞಾನೇಂದ್ರ ನಾಪತ್ತೆ!

ಪ್ರಭಾವಿ ವ್ಯಕ್ತಿಗಳ ಸಲಹೆಯಂತೆ ಐಎಎಸ್‌‍ ಅಧಿಕಾರಿ ಜ್ಞಾನೇಂದ್ರ ನಾಪತ್ತೆ!

ಬೆಂಗಳೂರು,ಸೆ.3- ಪಶುವೈದ್ಯಾಧಿಕಾರಿಗಳ ನೇಮಕ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಐಎಎಸ್‌‍ ಅಧಿಕಾರಿ ಜ್ಞಾನೇಂದ್ರಕುಮಾರ್‌ ಅವರು ತಲೆಮರೆಸಿಕೊಂಡಿದ್ದ ಹಿಂದಿನ ಒಂದು ವಾರದ ರೋಚಕ ಮಾಹಿತಿ ಹಾಗೂ ಅಕ್ರಮದ ಕರಾಳ ಮುಖಗಳು ಸದ್ಯ ಸಿಐಡಿ ತನಿಖೆಯಲ್ಲಿ ಬಹಿರಂಗಗೊಂಡಿವೆ. ಕೆಪಿಎಸ್‌‍ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸುತ್ತಿದ್ದಂತೆ, ಮುಂದಿನ ಟಾರ್ಗೆಟ್‌ ತಾನೇ ಆಗಬಹುದು ಎಂದು ಅರಿತ ಐಎಎಸ್‌‍ ಅಧಿಕಾರಿ ಜ್ಞಾನೇಂದ್ರಕುಮಾರ್‌ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ಪರಾರಿಯಾಗಲು ಸಂಚು ರೂಪಿಸಿದ್ದರು.

ಪ್ರಭಾವಿ ವ್ಯಕ್ತಿಗಳ ನಿರಂತರ ಸಲಹೆ ಹಾಗೂ ಮಾಹಿತಿಯ ಮೇರೆಗೆ ಬ್ಯಾಗ್‌ನಲ್ಲಿ ಬಟ್ಟೆಗಳನ್ನು ತುಂಬಿಕೊಂಡು ಬೆಂಗಳೂರಿನಿಂದ ನೇರವಾಗಿ ದೆಹಲಿಗೆ ವಿಮಾನಯಾನ ಮಾಡಿದ್ದರು. ದೆಹಲಿಯಲ್ಲಿ ತಳವೂರಿದ್ದ ಅವರು, ಅಲ್ಲಿಂದ ನೋಯ್ಡಾಗೆ ತೆರಳಿ ರಹಸ್ಯವಾಗಿ ರೂಮ್‌ವೊಂದನ್ನು ಬುಕ್‌ ಮಾಡಿಕೊಂಡು ತನ್ನ ಗೆಳತಿಯನ್ನು ಕರೆಸಿಕೊಂಡಿದ್ದರು ಎಂದು ತಿಳಿದುಬಂದಿದೆ. ಘಟನೆ ಬಳಿಕ ರಾಜ್ಯದ ಪ್ರಭಾವಿ ಗಣ್ಯರ ಸೂಚನೆಯಂತೆ ನಿವೃತ್ತ ಐಎಎಸ್‌‍ ಅಧಿಕಾರಿಯೊಬ್ಬರು ದೆಹಲಿಗೆ ತೆರಳಿ ಜ್ಞಾನೇಂದ್ರಕುಮಾರ್‌ ಅವರನ್ನು ಭೇಟಿಯಾಗಿ, ಇಡಿ ಹಾಗೂ ತನಿಖಾಧಿಕಾರಿಗಳ ವಿಚಾರಣೆಯನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ಪಾಠ ಮಾಡಿದ್ದರು.
ನಂತರ ತಮ ಮೂವರು ಬ್ಯಾಚ್‌ಮೇಟ್‌ಗಳನ್ನು ದೆಹಲಿಗೆ ಕರೆಸಿಕೊಂಡ ಜ್ಞಾನೇಂದ್ರ ಕುಮಾರ್‌, ಅಲ್ಲಿಂದ ನೇರವಾಗಿ ಶ್ರೀಲಂಕಾಕ್ಕೆ ಪರಾರಿಯಾಗಿದ್ದರು.ಶ್ರೀಲಂಕಾದಲ್ಲಿ ಎರಡು ದಿನ ವಾಸ್ತವ್ಯ ಹೂಡಿದ್ದ ವೇಳೆ ತಮ ವಿರುದ್ಧ ಲುಕ್‌ಔಟ್‌ ನೋಟಿಸ್‌‍ ಜಾರಿಯಾಗುವ ಮುನ್ಸೂಚನೆ ಸಿಕ್ಕ ಕೂಡಲೇ, ತಕ್ಷಣ ಕೊಲಂ ಬೊದಿಂದ ಚೆನ್ನೈಗೆ ವಾಪಸ್ಸಾಗಿದ್ದರು.

ಬೆಂಗಳೂರಿಗೆ ವಾಪಸ್‌‍ -ಬಂಧನ
ಚೆನ್ನೈನಿಂದ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದು ದೇವನಹಳ್ಳಿಯ ರೆಸಾರ್ಟ್‌ವೊಂದರಲ್ಲಿ ಅಡಗಿಕೊಂಡಿದ್ದರು. ಈ ಮಧ್ಯೆ ಸಿಐಡಿ ನೋಟೀಸ್‌‍ ಜಾರಿಯಾದ ಹಿನ್ನೆಲೆಯಲ್ಲಿ ಎರಡು ದಿನ ವಿಚಾರಣೆಗೂ ಹಾಜರಾಗಿದ್ದರು. ಆದರೆ ಸಿಐಡಿ ಕಚೇರಿಯಿಂದ ಹೊರಬರುತ್ತಿದ್ದಂತೆ ಮನೆ ಬಳಿ ಇಡಿ ಅಧಿಕಾರಿಗಳು ಕಾದುಕುಳಿತಿದ್ದಾರೆ ಎಂದು ಪ್ರಭಾವಿ ವ್ಯಕ್ತಿಯೊಬ್ಬರಿಂದ ಮತ್ತೊಮೆ ಎಚ್ಚರಿಕೆ ಬಂದಿದೆ. ಬಂಧನದಿಂದ ತಪ್ಪಿಸಿಕೊಳ್ಳಲು ಪುನಃ ಸಿಐಡಿ ಕಚೇರಿಯೊಳಗೆ ತೆರಳಿದ್ದ ಅವರನ್ನು, ನೋಟೀಸ್‌‍ಗೆ ಸರಿಯಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಮಧ್ಯರಾತ್ರಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಸ್ತುತ ನ್ಯಾಯಾಲಯದ ಆದೇಶದಂತೆ 10 ದಿನಗಳ ಸಿಐಡಿ ಕಸ್ಟಡಿಯಲ್ಲಿರುವ ಜ್ಞಾನೇಂದ್ರಕುಮಾರ್‌ ಅವರನ್ನು ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಈ ಬೃಹತ್‌ ನೇಮಕಾತಿ ಹಗರಣದ ಹಿಂದೆ ಯಾರ್ಯಾರು ಕೈಜೋಡಿಸಿದ್ದಾರೆ? ಎಂಬ ಕರಾಳ ಸತ್ಯಗಳು ಹೊರಬೀಳುವ ನಿರೀಕ್ಷೆಯಿದೆ.

RELATED ARTICLES
spot_img

Latest News