ಬೆಂಗಳೂರು,ಸೆ.3- ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಕರ್ನಾಟಕ ಲೋಕಸೇವಾ ಆಯೋಗದ ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆ ಹಗರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ವೆಟರ್ನರಿ ಡಿಗ್ರಿಯಲ್ಲಿ ಪದೇ ಪದೇ (ಎರೆಡೆರಡು ಬಾರಿ) ಅನುತ್ತೀರ್ಣರಾಗಿದ್ದ ಅಭ್ಯರ್ಥಿ ಸುಗರೇಶ್ ಜಾಕ್, ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ 600 ಅಂಕಗಳಿಗೆ ಬರೋಬ್ಬರಿ 478 ಅಂಕಗಳನ್ನು (ಡಿಸ್ಟಿಂಕ್ಷನ್) ಗಳಿಸಿ ಟಾಪ್ 2 ರ್ಯಾಂಕ್ ಪಡೆದಿದ್ದಾನೆ.
ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದವರೇ ಈ ಮಟ್ಟದ ಅಂಕಗಳಿಸಲು ಹೆಣಗಾಡುವಾಗ, ಡಿಗ್ರಿಯಲ್ಲೇ ಫೇಲ್ ಆಗಿದ್ದ ಅಭ್ಯರ್ಥಿಗೆ ಈ ಸಾಧನೆ ಹೇಗೆ ಸಾಧ್ಯವಾಯಿತು ಎಂಬುದು ಅಚ್ಚರಿಗೆ ಕಾರಣವಾಗಿದೆ. ಅಂದಹಾಗೆ ಈ ಅಭ್ಯರ್ಥಿ ಅಂದಿನ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ಸಂಬಂಧಿ ಎಂಬುದು ತನಿಖೆಯಿಂದ ತಿಳಿದುಬಂದಿದ್ದು, ಕೃಪಾಕಟಾಕ್ಷದ ಮೂಲಕವೇ ಈ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ.
