ಡಾ. ಡಿ.ಸಿ. ರಾಮಚಂದ್ರ
ಶ್ರೀ ಕ್ಷೇತ್ರ ಆದಿಚುಂಚನಗಿರಿ
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ।
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ ॥
ಅಸತ್ಯ, ಅಧರ್ಮ, ಅನ್ಯಾಯ ಹೆಚ್ಚಿದಾಗಲೆಲ್ಲ ಮತ್ತೆ ಸತ್ಯ, ಧರ್ಮ, ನ್ಯಾಯಗಳನ್ನು ನೆಲೆಗೊಳಿಸಿ, ಮನುಕುಲದ ಸಂರಕ್ಷಣೆಗಾಗಿ ಕಾಲಕಾಲಕ್ಕೆ ನಾನು ಅವತರಿಸುತ್ತೇನೆ ಎಂದು ಶ್ರೀಕೃಷ್ಣ ಹೇಳಿದ ಮಾತು ಇಂದು ಬಹುಪಾಲು ಸೂಕ್ತವೆನಿಸುತ್ತದೆ. ಜನಪ್ರತಿನಿಧಿಗಳು ಹಗರಣಗಳಲ್ಲಿ ತೊಡಗಿ, ಸ್ವಾರ್ಥ, ಲಾಭ ಹಾಗೂ ಸ್ವಜನಪಕ್ಷಪಾತಕ್ಕೆ ಒಳಗಾಗಿರುವಾಗ, ಪ್ರಜೆಗಳ ಬದುಕು ದುರ್ಭರವಾಗಿರುವ ಸಂದರ್ಭದಲ್ಲಿ ಕೃಷ್ಣ ಅವತರಿಸಿ ಬರುವನೇ ಎಂದುಕೊಳ್ಳುವಂತಾದರೆ ಅದು ಅಸಹಜವೇನಲ್ಲ. ಧರ್ಮಾತ್ಮರನ್ನು ಧರ್ಮವು ಸದಾ ರಕ್ಷಿಸುತ್ತದೆ.
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ।
ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ ॥
ನಿನ್ನ ಕರ್ತವ್ಯ, ನಿನ್ನ ಕೆಲಸವನ್ನು ನೀನು ಮಾಡು. ಫಲಾಫಲಗಳ ಬಗ್ಗೆ ಯೋಚಿಸಬೇಡ ಎಂದು ಹುರಿದುಂಬಿಸಿದವನು ರುಕ್ಮಿಣೀರಮಣ ಶ್ರೀಕೃಷ್ಣ.
‘ಕೃಷ್ಣ’ ಎಂಬ ಶಬ್ದವೇ ದಿವ್ಯವಾದದ್ದು. ಶ್ರೀಕೃಷ್ಣ ಎಂದರೆ ಅತ್ಯುನ್ನತ ಆನಂದ, ಪರಮಾನಂದದ ಉತ್ತುಂಗ ಶಿಖರ. ಶ್ರೀಕೃಷ್ಣನ ಹೆಸರು ಲೋಕಪ್ರಿಯ. ರಾತ್ರಿ ಮಲಗುವ ಮುನ್ನ, ಬೆಳಿಗ್ಗೆ ಎದ್ದಕೂಡಲೇ ‘ಕೃಷ್ಣ, ಕೃಷ್ಣ’ ಎಂದು ಸ್ಮರಿಸುತ್ತಾ, ಆತನ ಹತ್ತಾರು ಚಿತ್ರಗಳನ್ನು ಕಣ್ತುಂಬಿಕೊಳ್ಳುವ ಭಕ್ತರಿದ್ದಾರೆ.
ವಸುದೇವ-ದೇವಕಿಯ ಪುತ್ರ, ಯಶೋದಾ ನಂದನ, ಬಾಲಕೃಷ್ಣ, ಗೋಪಿ-ರಾಧಾಕೃಷ್ಣ, ತುಂಟ ಕೃಷ್ಣ, ಪಾಂಡವಪ್ರಿಯ, ಸಾರಥಿ ಕೃಷ್ಣ, ಸಂಧಾನಕಾರ, ಗೀತಾಚಾರ್ಯ ಹೀಗೆ ಕೃಷ್ಣನ ಪಾತ್ರಗಳು ಹಲವಾರು. ಒಂದೊಂದು ಪಾತ್ರದಲ್ಲೂ ಹಿತೋಪದೇಶ ಮಾಡುವ ಈ ಮಹಾನುಭಾವ ನಮಗೆ ಪ್ರತ್ಯಕ್ಷವಾಗಿ ಕಾಣುತ್ತಿಲ್ಲ ಎಂಬುದೇ ಆತಂಕದ ವಿಷಯ.
ಸಮುದ್ರಕ್ಕೆ ಸಮುದ್ರವೇ ಸಾಟಿ. ಸೂರ್ಯನಿಗೆ ಸೂರ್ಯನೇ ಸಮ. ಹಾಗೆಯೇ ಕೃಷ್ಣನಿಗೆ ಸಾಟಿಯಾದವನು ಕೃಷ್ಣನೇ. ನೂರಾರು ವಿಧಗಳಲ್ಲಿ ಕೃಷ್ಣ ಬಲು ವಿಶಿಷ್ಟ ಶಕ್ತಿ ಮತ್ತು ವ್ಯಕ್ತಿತ್ವದ ಪ್ರತೀಕ. ನೆಚ್ಚಿಕೊಂಡವರನ್ನು ಬೆಳಕಿನೆಡೆಗೆ ಕರೆದೊಯ್ದ ಮಾರ್ಗದರ್ಶಿ.
ಬಾಲ್ಯದಲ್ಲಿ ಸಹಜ ತುಂಟಾಟದಿಂದ ಕೃಷ್ಣ ಎಲ್ಲರನ್ನೂ ರಂಜಿಸಿದ್ದುಂಟು. ಹಸುಗಳಿರುವ ಮನೆಗಳಿಗೆ ಹೊಕ್ಕು ಹಾಲು ಕುಡಿದು, ಬೆಣ್ಣೆ ತಿಂದು ತೇಗಿದ ಕುಮಾರ. ಗೋಪಿಕಾ ಸ್ತ್ರೀಯರನ್ನು ಕೊಳಲಿನ ದನಿಯಿಂದ ಮರುಳು ಮಾಡಿದ ರಸಿಕ. ಅವರ ಬಟ್ಟೆಗಳನ್ನು ಕದ್ದು ಕಾಡಿದ ತುಂಟ. ತಾಯಿಗೆ ತನ್ನ ಬಾಯಿಯಲ್ಲಿ ಬ್ರಹ್ಮಾಂಡವನ್ನು ತೋರಿದ ಪವಾಡ ಪುರುಷ.
ಕಾಳಿಂಗ ಮರ್ದನ ಮಾಡಿ, ಪೂತನಿಯನ್ನು ಸಂಹರಿಸಿ, ಮಾವ ಕಂಸನನ್ನು ಯಮಸದನಕ್ಕೆ ಅಟ್ಟಿದ ತಂತ್ರಗಾರ. ಆನೆಯ ಮದವನ್ನು ಅಡಗಿಸಿ, ಧೇನುಕಾಸುರ, ಚಾಣೂರ ಮುಂತಾದ ರಾಕ್ಷಸೀ ಪ್ರವೃತ್ತಿಗಳನ್ನು ಮೆಟ್ಟಿ, ದೇವಕಿ-ಯಶೋದೆಯರಿಗೆ ಪರಮಾನಂದ ಉಂಟುಮಾಡಿದ ವರಪುತ್ರ. ಧಾರಾಕಾರ ಮಳೆಯಲ್ಲಿ ಗೋವರ್ಧನ ಗಿರಿಯನ್ನು ಎತ್ತಿ ಹಿಡಿದು ಹಸುಗಳು ಹಾಗೂ ಗೋಕುಲದ ಜನರನ್ನು ಸಂರಕ್ಷಿಸಿದ ಜಗದ್ರಕ್ಷಕ.
ಗುರು ಸಾಂದೀಪನಿಯ ಮಗನನ್ನು ಸಮುದ್ರದಾಳದಿಂದ ಹೊರತಂದು ಗುರುದಕ್ಷಿಣೆ ಸಲ್ಲಿಸಿದ ನೆಚ್ಚಿನ ಶಿಷ್ಯ. ಬಾಲ್ಯದ ಸ್ನೇಹಿತ ಸುಧಾಮನು ತಂದಿದ್ದ ಅವಲಕ್ಕಿಯನ್ನು ತಿಂದು, ಆತನ ದಾರಿದ್ರ್ಯವನ್ನು ದೂರ ಮಾಡಿ ಸಿರಿವಂತನನ್ನಾಗಿಸಿದ ನೆಚ್ಚಿನ ಗೆಳೆಯ.
ಮಾನವರು ಮಾತ್ರವಲ್ಲ, ಹಸು, ನವಿಲು ಹಾಗೂ ಪಕ್ಷಿಗಳಿಗೂ ಕೃಷ್ಣನೆಂದರೆ ಅವ್ಯಾಜ ಪ್ರೀತಿ. ಆತನ ಕೊಳಲಿನ ಕರೆಗೆ ಮೋಹಗೊಂಡವರು ಗೋಪಿಕೆಯರು ಮಾತ್ರವಲ್ಲ; ದನ-ಕರುಗಳೂ ಕಿವಿನಿಮಿರಿಸಿ ಕೇಳುತ್ತಿದ್ದವು ಎಂಬುದು ಸುಸ್ಪಷ್ಟ.
ಆಗ ಕಲಿಯುಗ ಕಾಲಿಟ್ಟಿರಲಿಲ್ಲ. ಅದು ದ್ವಾಪರ ಯುಗ. ಶ್ರೀಕೃಷ್ಣ ಎಂಬ ಮಹಾಪುರುಷ ವಸುದೇವ-ದೇವಕಿಯರಿಗೆ ಮಗನಾಗಿ ಜನಿಸಿದ. ಸೋದರಮಾವ ಕಂಸನ ಆಕ್ರೋಶಕ್ಕೆ ಸಿಲುಕದೆ, ಉಳಿದು-ಬೆಳೆದು ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸಿ, ಸತ್ಯ-ಧರ್ಮ-ನ್ಯಾಯಗಳನ್ನು ಎತ್ತಿಹಿಡಿದ ಮಹಾನುಭಾವ ಆತ.
ಕುರುವಂಶದ ದಾಯಾದಿ ಕಲಹದಲ್ಲಿ ಪಾಂಡವರ ಪರವಾಗಿ ನಿಂತು, ಕುರುಕ್ಷೇತ್ರ ಯುದ್ಧವನ್ನು ತಪ್ಪಿಸಲು ಶಕ್ತಿಮೀರಿ ಶ್ರಮಿಸಿದ್ದು ಸರ್ವವಿದಿತ. ಸಾಮ, ದಾನ, ಭೇದ, ದಂಡ—ಈ ಚತುರೋಪಾಯಗಳನ್ನು ಕಾಲಕಾಲಕ್ಕೆ ಬಳಸಿ ವೈರ ಮರೆತು ಮೈತ್ರಿಗೆ ಹಾತೊರೆದ ಈತ, ಅನಿವಾರ್ಯವೆನಿಸಿದಾಗ ಸಂಘರ್ಷಕ್ಕೂ ಹುರಿದುಂಬಿಸಿದ್ದು ಸ್ಫಟಿಕದಷ್ಟು ನಿಚ್ಚಳ.
ಸೋದರರು ಹೊಡೆದಾಡಬಾರದು, ಅಮಾಯಕ ಜನರು ಸಾಯಬಾರದು, ರಕ್ತದ ಓಕುಳಿ ಹಾಗೂ ಕಣ್ಣೀರು ತಪ್ಪಿಸಬೇಕು ಎಂಬುದು ಕೃಷ್ಣನ ಕಳಕಳಿಯಾಗಿತ್ತು ಎಂಬುದರಲ್ಲಿ ಸಂದೇಹವಿಲ್ಲ.
‘ಕೃಷ್ಣಾ, ನನ್ನ ಮಕ್ಕಳೈವರ ಭಾರ ನಿನ್ನದು’ ಎಂಬ ತನ್ನ ಸೋದರತ್ತೆ ಕುಂತಿದೇವಿಯ ಮಾತಿಗೆ, ‘ಹೌದು, ಅವರಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ನನ್ನದು’ ಎಂದ ಕೃಷ್ಣ. ಆತನ ಈ ಮಾತು ಕುಂತಿಗೆ ಸಮಾಧಾನ ತಂದಿತ್ತು.
ಅರ್ಧರಾಜ್ಯ ಕೊಡುವುದು ಒತ್ತಟ್ಟಿಗಿರಲಿ, ಐದು ಗ್ರಾಮಗಳನ್ನಾದರೂ ಕೊಡು ಎಂಬ ಮಾತಿಗೂ ದುರ್ಯೋಧನ ಮಣಿಯದೆ ಇದ್ದಾಗ, ಪಾಂಡವರಿಗೆ ನ್ಯಾಯಯುತ ಪಾಲು ದೊರಕಿಸಿಕೊಡಲು ಕೃಷ್ಣ ಸರ್ವಪ್ರಯತ್ನ ಮಾಡಿದ್ದು ಸುಳ್ಳಲ್ಲ.
ಈ ಮಧ್ಯೆ ಪಗಡೆಯಾಟದಲ್ಲಿ ಸೋತ ಪಾಂಡವರೈವರ ಪತ್ನಿ ದ್ರೌಪದಿಯ ವಸ್ತ್ರಾಪಹರಣದ ಪ್ರಸಂಗದಲ್ಲಿ ಆಕೆಗೆ ಅಕ್ಷಯಾಂಬರವನ್ನು ನೀಡಿ ಸಲಹಿದ ಕೀರ್ತಿ ಕೃಷ್ಣನಿಗೆ ಸಲ್ಲುತ್ತದೆ. ಅದಕ್ಕೂ ಮುನ್ನ ರಾಜಸೂಯ ಯಾಗದಲ್ಲಿ ಕೈಗೆ ಗಾಯವಾದಾಗ, ಕೃಷ್ಣನಿಗೆ ದ್ರೌಪದಿ ತನ್ನ ಪೀತಾಂಬರದ ಒಂದು ಭಾಗವನ್ನು ಹರಿದು ಕೈಗೆ ಕಟ್ಟಿದ್ದಳು. ಆ ವಸ್ತ್ರದ ಋಣವನ್ನು ಮರೆಯದೆ ದಯಪಾಲಿಸಿದ ಅಣ್ಣ, ಉದಾರಿ ಶ್ರೀಕೃಷ್ಣ.
ಎರಡನೇ ಸಲ ಪಗಡೆಯಾಟದಲ್ಲಿ ಸೋತು ಪಾಂಡವರು ದ್ರೌಪದಿಯೊಂದಿಗೆ ವನವಾಸಕ್ಕೆ ತೆರಳಿದಾಗ ಕೃಷ್ಣ ಮರುಗಿದ. ಕಾಲಕಾಲಕ್ಕೆ ಕಾಡಿಗೆ ತೆರಳಿ ಅವರಿಗೆ ಮಾರ್ಗದರ್ಶನ ಮಾಡಿದ.
ವನವಾಸ-ಅಜ್ಞಾತವಾಸ ಯಶಸ್ವಿಯಾಗಿ ಮುಗಿಸಿಕೊಂಡು ಬಂದ ಪಾಂಡವರಿಗೆ ರಾಜ್ಯ ಕೊಡುವುದಿಲ್ಲ, ‘ಸೂಜಿ ಮೊನೆಯಷ್ಟು ಮಣ್ಣನ್ನೂ ಕೊಡುವುದಿಲ್ಲ’ ಎಂಬ ದುರ್ಯೋಧನನ ನುಡಿ ಕರ್ಣಕಠೋರವಾಗಿತ್ತು. ದುಶ್ಶಾಸನ, ಶಕುನಿ, ಕರ್ಣರ ಮಾತುಗಳಿಗೂ ಇದೇ ಧೋರಣೆ. ವಿದುರ, ಭೀಷ್ಮಾಚಾರ್ಯ, ದ್ರೋಣರ ಮಾತನ್ನೂ ಈ ಚಾಂಡಾಲ ಚೌಕಡಿ ಕಿವಿಗೆ ಹಾಕಿಕೊಳ್ಳಲಿಲ್ಲ. ಪುತ್ರವ್ಯಾಮೋಹದಿಂದ ಕುರುಡನಾಗಿದ್ದ ಧೃತರಾಷ್ಟ್ರ ತೋರಿದ್ದು ಅಸಹಾಯಕತೆ.
ಪಾಂಡವರಿಗೆ ಅವರ ಪಾಲು ಕೊಡಿಸುವಲ್ಲಿ ಕೃಷ್ಣ ಮಾಡಿದ ರಾಯಭಾರ, ರಾಜಿಯತ್ನ ಕೌರವರ ಹಠದಿಂದ ಯಶಸ್ವಿಯಾಗಲಿಲ್ಲ. ‘ಯುದ್ಧ ಮಾಡಿ, ರಾಜ್ಯ ಗೆಲ್ಲಿ’ ಎಂಬುದು ಕೌರವರ ಉದ್ಧಟತನದ ಮಾತಾಯಿತು. ಯುದ್ಧ ಅನಿವಾರ್ಯವಾದಾಗ ಕೃಷ್ಣ ಅರ್ಜುನನ ಸಾರಥಿಯಾಗಿ ಸಲಹೆ ನೀಡಿದ್ದು ಈಗ ಇತಿಹಾಸ.
‘ಭೀಷ್ಮ-ದ್ರೋಣರು ನನ್ನ ಗುರುಗಳು. ಉಳಿದಂತೆ ಬಂಧು-ಬಾಂಧವರು ಯುದ್ಧಭೂಮಿಯಲ್ಲಿ ನಿಂತಿದ್ದಾರೆ. ಅವರನ್ನು ನಾನು ಕೊಲ್ಲಲಾರೆ. ಆದ್ದರಿಂದ ಯುದ್ಧ ಮಾಡಲಾರೆ’ ಎಂದು ಧನುರ್ವಿದ್ಯೆಯಲ್ಲಿ ಪಾರಂಗತನಾದ ಅರ್ಜುನನ ಮನವೊಲಿಸಿ ಯುದ್ಧಕ್ಕೆ ಅಣಿಗೊಳಿಸಿದವನು ಶ್ರೀಕೃಷ್ಣ.
ಯುದ್ಧದಲ್ಲಿ ‘ನನ್ನವರು, ತನ್ನವರು’ ಎಂಬ ಭೇದವಿಲ್ಲ. ಧರ್ಮದ ಪರವಾಗಿ ನಿಲ್ಲುವುದೇ ಮುಖ್ಯ ಎಂಬ ಸಂದೇಶವನ್ನು ಕೃಷ್ಣ ನೀಡಿದ.
ಹದಿನೆಂಟು ದಿನಗಳ ಮಹಾಭಾರತ ಯುದ್ಧದಲ್ಲಿ ಕೌರವರ ಹನ್ನೊಂದು ಅಕ್ಷೌಹಿಣಿ ಸೈನ್ಯ ಹಾಗೂ ಪಾಂಡವರ ಏಳು ಅಕ್ಷೌಹಿಣಿ ಸೈನ್ಯ ನಾಶವಾದದ್ದು ದುರದೃಷ್ಟಕರ. ಭೀಷ್ಮ, ದ್ರೋಣ, ಕರ್ಣರ ಅವಸಾನದೊಂದಿಗೆ ದುರ್ಯೋಧನ-ದುಶ್ಶಾಸನರ ಸಾವಿನ ಬಳಿಕ ಪಾಂಡವರಿಗೆ ವಿಜಯಲಕ್ಷ್ಮಿ ಒಲಿದಳು.
ಅಭಿಮನ್ಯು ಹಾಗೂ ಉಪಪಾಂಡವರನ್ನು ಕಳೆದುಕೊಂಡಾಗ ಪಾಂಡವರಿಗೆ, ದ್ರೌಪದಿ-ಸುಭದ್ರೆಯರಿಗೆ ಉಂಟಾದ ಸಂಕಟ ಅಂತಿಂಥದ್ದಲ್ಲ. ಅಂತೂ ಧರ್ಮಯುದ್ಧದಲ್ಲಿ ಪಾಂಡವರನ್ನು ಗೆಲ್ಲಿಸಿ, ಧರ್ಮರಾಜನನ್ನು ರಾಜನನ್ನಾಗಿ ಮಾಡಿ ಸಿಂಹಾಸನದಲ್ಲಿ ಕುಳ್ಳಿರಿಸುವ ಮೂಲಕ ಶ್ರೀಕೃಷ್ಣನು ಕುಂತಿಗೆ ನೀಡಿದ ವಚನವನ್ನು ಪರಿಪಾಲಿಸಿದ. ಪಾಂಡವರ ಹಿತಾಸಕ್ತಿಯ ರಕ್ಷಣೆ ನನ್ನ ಕೆಲಸ ಎಂದು ಆತ ನೀಡಿದ್ದ ಆಶ್ವಾಸನೆಯನ್ನು ನೆರವೇರಿಸಿದ.
ಬಾಲ್ಯದಲ್ಲಾಗಲಿ, ಯೌವ್ವನದಲ್ಲಾಗಲಿ ಶ್ರೀಕೃಷ್ಣನ ರೂಪ ಮನಮೋಹಕ. ಹಲವಾರು ದೃಷ್ಟಿಯಲ್ಲಿ ಈತ ಮಾನವನೂ ಹೌದು; ದೇವನೂ ಹೌದು. ದೈವೀ ಪಾತ್ರದಲ್ಲಿ ಕಾಣಿಸಿಕೊಳ್ಳುವ ಕೃಷ್ಣನ ನಾಲ್ಕು ಕೈಗಳಲ್ಲೂ ಒಂದೊಂದು ಸಾಮಗ್ರಿ. ಇವೆಲ್ಲವೂ ಸಾಮ, ದಾನ, ಭೇದ, ದಂಡಗಳ ಪ್ರತಿರೂಪಗಳೆಂದು ವ್ಯಾಖ್ಯಾನಿಸಲಾಗುತ್ತದೆ.
ಯುದ್ಧ ತಪ್ಪಿಸಲು ರಾಯಭಾರ ನಡೆಸಿದಾಗ ಸಾಮೋಪಾಯವನ್ನು ಮೊದಲು ಬಳಸಿದ. ಕಮಲ ಇದರ ಸಂಕೇತ. ಎರಡನೆಯದು ದಾನೋಪಾಯ. ಶಂಖ ಇದರ ಸಂಕೇತ. ‘ದುರ್ಯೋಧನ, ನೀನೇ ಬಹುಪಾಲು ರಾಜ್ಯ ಇಟ್ಟುಕೋ. ಪಾಂಡವರಿಗೆ ಐದು ಗ್ರಾಮಗಳನ್ನು ಕೊಟ್ಟುಬಿಡು’ ಎಂಬ ಮಾತನ್ನು ದುರ್ಯೋಧನ ಕೇಳಲಿಲ್ಲ.
ಮೂರನೆಯದು ಭೇದೋಪಾಯ. ಗದೆ ಇದರ ಸಂಕೇತ. ಕರ್ಣನನ್ನು ಬರಮಾಡಿಕೊಂಡು, ‘ನೀನು ಕುಂತಿಯ ಹಿರಿಯ ಮಗ. ಪಾಂಡವರ ಬಳಿ ಬಂದುಬಿಡು. ರಾಜ್ಯವನ್ನು ನೀನೇ ಆಳು. ತಾಯಿಯ ಮನಸ್ಸು ನೋಯಿಸದೆ, ನಿನ್ನ ಸಹೋದರರನ್ನು ಕೊಲ್ಲದಿರು’ ಎಂಬ ಕೃಷ್ಣನ ಮಾತಿಗೂ ಬೆಲೆ ಕೊಡಲಿಲ್ಲ ಕರ್ಣ. ಮಾತೃವಾತ್ಸಲ್ಯ, ಬಂಧುಪ್ರೇಮಕ್ಕಿಂತ ಸ್ವಾಮಿನಿಷ್ಠೆಯೇ ಅವನಿಗೆ ಮಿಗಿಲಾಯಿತು.
ಕೊನೆಗೆ ಉಳಿದದ್ದು ದಂಡೋಪಾಯ. ಅನಿವಾರ್ಯವಾಗಿ ಯುದ್ಧಕ್ಕೆ ಅಣಿಯಾಗಬೇಕಾಯಿತು. ಕುರುಕ್ಷೇತ್ರದ ರಣರಂಗದಲ್ಲಿ ಪಾಂಚಜನ್ಯ ಶಂಖನಾದ ಮಾಡಿದುದಲ್ಲದೆ, ಭೀಷ್ಮನ ಮೇಲೆ ಸುದರ್ಶನ ಚಕ್ರ ಪ್ರಯೋಗಕ್ಕೂ ಮುಂದಾದ ಶ್ರೀಕೃಷ್ಣ, ಧರ್ಮರಕ್ಷಣೆಯ ಸಂಕಲ್ಪದಲ್ಲಿ ಹಿಂದೆ ಸರಿಯಲಿಲ್ಲ.
ವಸುದೇವಸುತಂ ದೇವಂ ಕಂಸಚಾಣೂರಮರ್ದನಂ ।
ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಮ್ ॥
ವಸುದೇವರ ಮಗನಾದ, ಸದಾ ದೇವಕಿಗೆ ಪರಮಾನಂದವನ್ನು ನೀಡುವ, ಕಂಸ-ಚಾಣೂರರನ್ನು ನಾಶ ಮಾಡಿದ, ಜಗತ್ತಿನ ಗುರುವಾದ ಕೃಷ್ಣನಿಗೆ ನಮಿಸುವೆನು.
ಯಾದವ ಕುಲದವರು ತಮ್ಮತಮ್ಮಲ್ಲೇ ಹೊಡೆದಾಡಿ, ಮದ್ಯಪಾನ ಮಾಡಿ ಮಣ್ಣುಪಾಲಾದಂತೆಯೇ, ಕಲಿಯುಗದಲ್ಲಿ ಕೆಲ ರಾಜಕಾರಣಿಗಳು ಪರಸ್ಪರ ಪ್ರತಿಷ್ಠೆಗೆ ಅಂಟಿಕೊಂಡು, ಅಪರೂಪಕ್ಕೆ ಕೈಗೆ ಬಂದಿದ್ದ ಅಧಿಕಾರದ ಚುಕ್ಕಾಣಿ ಕಳೆದುಕೊಳ್ಳುವ ನಿದರ್ಶನ ನಮ್ಮೆದುರಿಗಿದೆ.
ಶ್ರೀಕೃಷ್ಣನ ಮಾನವೀಯ ತತ್ವಾದರ್ಶಗಳನ್ನು ಅಳವಡಿಸಿಕೊಂಡು, ಪರಸ್ಪರ ಒಳಿತು ಮತ್ತು ಅಭಿವೃದ್ಧಿಗೆ ಶ್ರಮಿಸುತ್ತಾ, ಕುಟುಂಬ, ಸಮಾಜ, ರಾಜ್ಯ, ರಾಷ್ಟ್ರದ ಮೂಲಕ ಜಗತ್ತಿನ ಶ್ರೇಯಸ್ಸಿಗೆ ಮುಂದಾಗುವ ಮನಸ್ಸು ನಮ್ಮದಾದರೆ ಸಾಕು. ಅಂತಹ ಸದ್ಬುದ್ಧಿ ಹಾಗೂ ಸಮೃದ್ಧಿಯನ್ನು ಶ್ರೀಕೃಷ್ಣ ಮನುಕುಲಕ್ಕೆ ಕರುಣಿಸಲಿ.
