ಕೈವ್, ಸೆ.4- ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ಭಾರತದ ನಿರ್ಧಾರವನ್ನು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಉಕ್ರೇನ್ ರಾಜಧಾನಿ ಕೈವ್‌ಗೆ ಅಧಿಕೃತ ಭೇಟಿ ನೀಡಿರುವ ಅವರು, ರಷ್ಯಾದಿಂದ ತೈಲ ಅಥವಾ ಖನಿಜಗಳನ್ನು ಖರೀದಿಸುವುದನ್ನು ನಿಲ್ಲಿಸಿದ ಮಾತ್ರಕ್ಕೆ ಉಕ್ರೇನ್ ಯುದ್ಧ ಬಗೆಹರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಾಸ್ಕೊದ ಆರ್ಥಿಕ ಜೀವನಾಡಿಯನ್ನು ಹತ್ತಿಕ್ಕುವ ಮೂಲಕ ಯುದ್ಧವನ್ನು ನಿಲ್ಲಿಸಬಹುದು ಎಂಬ ಪಾಶ್ಚಿಮಾತ್ಯ ದೇಶಗಳ ವಾದವನ್ನೂ ಅವರು ತಳ್ಳಿಹಾಕಿದ್ದಾರೆ.
ಮಾತುಕತೆಯಿಂದ ಮಾತ್ರ ಶಾಂತಿ ಸಾಧ್ಯ
ಐದನೇ ವರ್ಷಕ್ಕೆ ಕಾಲಿಡುತ್ತಿರುವ ಈ ಯುದ್ಧವನ್ನು ಯಾರೋ ಒಬ್ಬರು ತೈಲ, ರಸಗೊಬ್ಬರ ಅಥವಾ ಲೋಹಗಳನ್ನು ಖರೀದಿಸುವುದರಿಂದ ಅಥವಾ ಖರೀದಿಸದಿರುವುದರಿಂದ ಪರಿಹರಿಸಲು ಸಾಧ್ಯವಿಲ್ಲ. ಶಾಂತಿ ನೆಲೆಸಬೇಕಾದರೆ ನೇರ ಸಂವಾದ, ರಾಜತಾಂತ್ರಿಕತೆ ಮತ್ತು ಮಾತುಕತೆಗಳೇ ಏಕೈಕ ಮಾರ್ಗ ಎಂದು ಜೈಶಂಕರ್ ಹೇಳಿದ್ದಾರೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಅನಿಶ್ಚಿತವಾಗಿರುವ ಸಂದರ್ಭದಲ್ಲಿ ಭಾರತದ 140 ಕೋಟಿ ನಾಗರಿಕರ ಇಂಧನ ಅಗತ್ಯವನ್ನು ಪೂರೈಸುವುದು ಸರ್ಕಾರದ ಪ್ರಮುಖ ಹೊಣೆಗಾರಿಕೆಯಾಗಿದೆ. ಈ ವಿಚಾರದಲ್ಲಿ ಉಕ್ರೇನ್ ತನ್ನದೇ ಆದ ನಿಲುವು ಹೊಂದಿರುವಂತೆ, ಭಾರತದ ಹಿತಾಸಕ್ತಿ ಮತ್ತು ದೃಷ್ಟಿಕೋನವನ್ನೂ ಜಗತ್ತು ಗೌರವಿಸಬೇಕು ಎಂದು ಅವರು ಕರೆ ನೀಡಿದರು.
ರಷ್ಯಾದಿಂದ ತೈಲ ಮತ್ತು ಅನಿಲ ಆಮದು ಮಾಡಿಕೊಳ್ಳುವುದನ್ನು ಮುಂದುವರಿಸುವ ಭಾರತ ಹಾಗೂ ಚೀನಾದಂತಹ ರಾಷ್ಟ್ರಗಳ ಸರಕುಗಳ ಮೇಲೆ ಶೇ.100ರಷ್ಟು ಸುಂಕ ವಿಧಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಧಿಕಾರ ನೀಡುವ ಮಸೂದೆಯನ್ನು ಅಮೆರಿಕ ಸೆನೆಟ್ ಇತ್ತೀಚೆಗೆ ಅಂಗೀಕರಿಸಿದೆ.
ಮಾಸ್ಕೊದ ಇಂಧನ ಆದಾಯವನ್ನು ಕಡಿತಗೊಳಿಸುವುದರಿಂದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಆಡಳಿತಕ್ಕೆ ಹಣದ ಕೊರತೆ ಎದುರಾಗಿ ಯುದ್ಧವನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ ಎಂಬುದು ವಾಷಿಂಗ್ಟನ್ ಹಾಗೂ ಯುರೋಪಿಯನ್ ರಾಷ್ಟ್ರಗಳ ಲೆಕ್ಕಾಚಾರವಾಗಿದೆ.
ಭಾರತ-ರಷ್ಯಾ ತೈಲ ವಹಿವಾಟಿನ ಅಂಕಿ-ಅಂಶ
2022ರಲ್ಲಿ ಯುದ್ಧ ಆರಂಭಕ್ಕೂ ಮುನ್ನ ಭಾರತದ ಒಟ್ಟು ತೈಲ ಆಮದಿನಲ್ಲಿ ರಷ್ಯಾದ ಪಾಲು ಕೇವಲ ಶೇ.0.2ರಷ್ಟಿತ್ತು. ಯುದ್ಧದ ನಂತರ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾ ಮೇಲೆ ನಿರ್ಬಂಧ ಹೇರಿದಾಗ, ರಷ್ಯಾ ನೀಡಿದ ರಿಯಾಯಿತಿ ದರದ ಸದುಪಯೋಗ ಪಡೆದ ಭಾರತ ಇಂದು ತನ್ನ ಒಟ್ಟು ತೈಲ ಆಮದಿನ ಸುಮಾರು ಮೂರನೇ ಒಂದು ಭಾಗವನ್ನು ರಷ್ಯಾದಿಂದಲೇ ಪಡೆಯುತ್ತಿದೆ.
ಕಡಲ ಗುಪ್ತಚರ ಸಂಸ್ಥೆ ಕೆಪ್ಲರ್ ಮಾಹಿತಿಯ ಪ್ರಕಾರ, ಭಾರತವು ಜೂನ್ ಮತ್ತು ಜುಲೈನಲ್ಲಿ ದಿನಕ್ಕೆ ಗರಿಷ್ಠ 2.6 ಮಿಲಿಯನ್ ಬ್ಯಾರೆಲ್‌ಗಳಷ್ಟು ರಷ್ಯಾದ ತೈಲವನ್ನು ಆಮದು ಮಾಡಿಕೊಂಡಿತ್ತು. ಆದರೆ ಆಗಸ್ಟ್‌ನಲ್ಲಿ ಇದು ದಿನಕ್ಕೆ 2.1 ಮಿಲಿಯನ್ ಬ್ಯಾರೆಲ್‌ಗಳಿಗೆ ಇಳಿಕೆಯಾಗಿದೆ.
ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಖರೀದಿಸದೆ ಹೋಗಿದ್ದರೆ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 150 ಡಾಲರ್ ದಾಟಿ ಇಡೀ ವಿಶ್ವವೇ ತೀವ್ರ ಹಣದುಬ್ಬರಕ್ಕೆ ಸಿಲುಕುತ್ತಿತ್ತು ಎಂದು ಭಾರತೀಯ ನೀತಿ ನಿರೂಪಕರು ಮೊದಲಿನಿಂದಲೂ ವಾದಿಸುತ್ತಾ ಬಂದಿದ್ದಾರೆ.
