ಬೆಂಗಳೂರು, ಸೆ.4- ದೇಶದ ಆಂತರಿಕ ಭದ್ರತೆಗೆ ದಿಮಾಗಿ (ಬೌದ್ಧಿಕ) ನಕ್ಸಲಿಸಂ ಅಪಾಯಕಾರಿಯಾಗಿದ್ದು, ಇದರ ವಿರುದ್ಧ ಸಮಾಜದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ದಿಮಾಗಿ ನಕ್ಸಲಿಸಂ’ ಕುರಿತ ಚರ್ಚಾಕೂಟದಲ್ಲಿ ಮಾತನಾಡಿದ ಅವರು, ಹಿಂದೆ ಪಶುಪತಿನಾಥದಿಂದ ತಿರುಪತಿಯವರೆಗೆ ವಿಸ್ತರಿಸಿದ್ದ ರೆಡ್ ಕಾರಿಡಾರ್ನಲ್ಲಿ ಸಕ್ರಿಯವಾಗಿದ್ದ ಶಸ್ತ್ರಸಜ್ಜಿತ ನಕ್ಸಲರ ಪ್ರಭಾವ ಕಡಿಮೆಯಾಗಿದ್ದು, ನಗರ ಪ್ರದೇಶಗಳಲ್ಲಿ ಬೌದ್ಧಿಕ ನಕ್ಸಲಿಸಂ ರೂಪದಲ್ಲಿ ಹೊಸ ಸವಾಲು ಎದುರಾಗಿದೆ ಎಂದು ಪ್ರತಿಪಾದಿಸಿದರು.
ನಗರಗಳಲ್ಲಿರುವ ಸುಶಿಕ್ಷಿತ ವರ್ಗದ ಕೆಲವರು ಸಾಮಾಜಿಕ ಜಾಲತಾಣಗಳ ಮೂಲಕ ನಿರ್ದಿಷ್ಟ ವಿಚಾರಧಾರೆಗಳನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಸಾಮಾಜಿಕ ಜಾಲತಾಣಗಳ ಅಲ್ಗಾರಿದಂಗಳನ್ನು ವ್ಯವಸ್ಥಿತವಾಗಿ ಬಳಸಿಕೊಂಡು ಹಿಂದೂ ಚಿಂತನೆಗಳನ್ನು ಹತ್ತಿಕ್ಕುವ ಹಾಗೂ ದೇಶವಿರೋಧಿ ಬರಹಗಳಿಗೆ ಉತ್ತೇಜನ ನೀಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ್ ಗೌಡ, ರಾಷ್ಟ್ರಧರ್ಮ ಸಂಘಟನೆಯ ಸಂಸ್ಥಾಪಕ ಸಂತೋಷ ಕೆಂಚಂಬ ಸೇರಿದಂತೆ 150ಕ್ಕೂ ಅಧಿಕ ಮಂದಿ ಉಪಸ್ಥಿತರಿದ್ದರು.
