Homeರಾಜ್ಯಮನುಷ್ಯನನ್ನು ಸಾಯಿಸಿ ಹೆಬ್ಬಾವು ರಕ್ಷಿಸುವ ಯೋಚನೆ ಬೇಡ : ಕಸ್ತೂರಿ ರಂಗನ್‌ ವರದಿಗೆ ಕಿಮ್ಮನೆ ರತ್ನಾಕರ್‌...

ಮನುಷ್ಯನನ್ನು ಸಾಯಿಸಿ ಹೆಬ್ಬಾವು ರಕ್ಷಿಸುವ ಯೋಚನೆ ಬೇಡ : ಕಸ್ತೂರಿ ರಂಗನ್‌ ವರದಿಗೆ ಕಿಮ್ಮನೆ ರತ್ನಾಕರ್‌ ವಿರೋಧ

ಶಿವಮೊಗ್ಗ, ಸೆ.4- ಕಸ್ತೂರಿ ರಂಗನ್‌ ವರದಿ ಅನುಷ್ಠಾನದ ಹೆಸರಿನಲ್ಲಿ ಮನುಷ್ಯರ ಬದುಕಿಗೆ ತೊಂದರೆ ಉಂಟುಮಾಡಿ ಕಾಡುಪ್ರಾಣಿಗಳನ್ನು ರಕ್ಷಿಸುವ ಯೋಜನೆ ಸರಿಯಲ್ಲ. ಮೊದಲು ಮನುಷ್ಯರಿಗೆ ಬದುಕಲು ಅವಕಾಶ ನೀಡಿ, ಬಳಿಕ ಪರಿಸರ ಸಂರಕ್ಷಣೆಯ ಬಗ್ಗೆ ಯೋಚಿಸಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಹೇಳಿದರು. ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮನುಷ್ಯನನ್ನು ಸಾಯಿಸಿ ಹೆಬ್ಬಾವು ಬದುಕಿಸುವ ಯೋಚನೆ ಬೇಡ’ ಎಂದು ಸರ್ಕಾರದ ಕ್ರಮವನ್ನು ಟೀಕಿಸಿದರು.

ಕಸ್ತೂರಿ ರಂಗನ್‌ ವರದಿ ಅನುಷ್ಠಾನದಿಂದ ಜನರನ್ನು ಒಕ್ಕಲೆಬ್ಬಿಸುವುದಾದರೆ ಅವರನ್ನು ಎಲ್ಲಿಗೆ ಕಳುಹಿಸಲಾಗುತ್ತದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಕಸ್ತೂರಿ ರಂಗನ್‌ ಅವರು ಪರಿಸರ ತಜ್ಞರಲ್ಲ, ಶಿಕ್ಷಣ ತಜ್ಞರಾಗಿದ್ದರು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಪರಿಸರ ಸಂರಕ್ಷಣೆಯ ಜತೆಗೆ ಮನುಷ್ಯನ ಅಸ್ತಿತ್ವವೂ ಉಳಿಯಬೇಕು. ಇದಕ್ಕಾಗಿ ಪರ್ಯಾಯ ವ್ಯವಸ್ಥೆ ಏನು ಮಾಡಲಾಗಿದೆ ಎಂಬುದನ್ನು ಸರ್ಕಾರ ತಿಳಿಸಬೇಕು ಎಂದು ಆಗ್ರಹಿಸಿದರು.

1900ರಲ್ಲಿ ದೇಶದ ಜನಸಂಖ್ಯೆ ಸುಮಾರು 20 ಕೋಟಿಯಷ್ಟಿತ್ತು. ಇದೀಗ 140 ಕೋಟಿಗೂ ಅಧಿಕವಾಗಿದೆ. ಜನಸಂಖ್ಯೆ ನಿರಂತರವಾಗಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಜನರು ನೀರಿನಲ್ಲಿ ಅಥವಾ ಗಾಳಿಯಲ್ಲಿ ಮನೆ ಕಟ್ಟಲು ಸಾಧ್ಯವಿಲ್ಲ. ದೇಶದಲ್ಲಿ ಕೋಟ್ಯಂತರ ಜನರು ಬಡತನದಲ್ಲಿದ್ದು, ಹಲವರಿಗೆ ಸೂಕ್ತ ಸೂರು ಹಾಗೂ ಉದ್ಯೋಗವೂ ಇಲ್ಲ. ಹೀಗಿರುವಾಗ ಇಂತಹ ಯೋಜನೆಗಳನ್ನು ಜಾರಿಗೊಳಿಸುವ ಮುನ್ನ ಸರ್ಕಾರ ಸಮಗ್ರವಾಗಿ ಯೋಚಿಸಬೇಕು ಎಂದರು.

ಕಸ್ತೂರಿ ರಂಗನ್‌ ವರದಿಯನ್ನು ರದ್ದುಪಡಿಸಬೇಕು ಅಥವಾ ಅದರ ಅಧಿಸೂಚನೆಯನ್ನು ಹಿಂಪಡೆಯಬೇಕು. ಈ ವರದಿಯನ್ನು ಹಿಂದಿನಿಂದಲೂ ವಿರೋಧಿಸುತ್ತಾ ಬಂದಿದ್ದೇವೆ. ಇದೀಗ ಮತ್ತೆ ವರದಿ ಜಾರಿ ಕುರಿತು ಕರಡು ಅಧಿಸೂಚನೆ ಪ್ರಕಟವಾಗಿದ್ದು, ಈ ಕುರಿತು ಚರ್ಚಿಸಲು ಅಧಿವೇಶನ ಕರೆಯಲಾಗಿದೆ. ಮೂರು ದಿನಗಳ ಅಧಿವೇಶನದಲ್ಲಿ ಒಂದು ದಿನ ಈ ಯೋಜನೆ ಕುರಿತು ಚರ್ಚೆ ನಡೆಯಲಿದೆ ಎಂದು ಹೇಳಿದರು. ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ರಮೇಶ್‌ ಹೆಗಡೆ, ಶಿವಣ್ಣ, ಹಾಲಪ್ಪ, ಶಿವಾನಂದ, ಅಮರ್‌ನಾಥ್‌ ಹಾಗೂ ಗಾಜನೂರು ಗಣೇಶ್‌ ಇದ್ದರು.

RELATED ARTICLES
spot_img

Latest News