Homeಅಂತಾರಾಷ್ಟ್ರೀಯನೇಪಾಳ ಭೀಕರ ಪ್ರವಾಹದಲ್ಲಿ 600 ಶಾಲಾ ಮಕ್ಕಳು ನಾಪತ್ತೆ

ನೇಪಾಳ ಭೀಕರ ಪ್ರವಾಹದಲ್ಲಿ 600 ಶಾಲಾ ಮಕ್ಕಳು ನಾಪತ್ತೆ

ಕಠ್ಮಂಡು, ಸೆ.4 (ಪಿಟಿಐ)- ನೇಪಾಳದ ರಸುವಾ ಮತ್ತು ನುವಕೋಟ್‌ ಜಿಲ್ಲೆಗಳಲ್ಲಿ ಸಂಭವಿಸಿದ ಭೀಕರ ಪ್ರವಾಹದ ಬಳಿಕ ಸುಮಾರು 600 ಶಾಲಾ ಮಕ್ಕಳು ಇನ್ನೂ ಪತ್ತೆಯಾಗಿಲ್ಲ. ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 1,282ಕ್ಕೆ ಏರಿಕೆಯಾಗಿದ್ದು, 4,700ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.

ಆಗಸ್ಟ್‌ 26ರಂದು ನೇಪಾಳ-ಟಿಬೆಟ್‌ ಗಡಿಯ ಬಳಿ ಸಂಭವಿಸಿದ ಹಿಮ-ಬಂಡೆ ಕುಸಿತದಿಂದ ಉಂಟಾದ ಹಠಾತ್‌ ಪ್ರವಾಹವು ಉತ್ತರ ಮತ್ತು ಮಧ್ಯ ನೇಪಾಳದ ಹಲವು ಪಟ್ಟಣಗಳು ಹಾಗೂ ಗ್ರಾಮಗಳನ್ನು ಧ್ವಂಸಗೊಳಿಸಿದೆ. ಪ್ರವಾಹದ ಬಳಿಕ ವ್ಯಾಪಕ ಹಾನಿ ಸಂಭವಿಸಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ನೇಪಾಳ ಪೊಲೀಸರ ಪ್ರಕಾರ, ಚಿಟ್ವಾನ್‌ನಲ್ಲಿ 359, ನವಲ್‌ಪರಾಸಿ ಪೂರ್ವದಲ್ಲಿ 218, ನವಲ್‌ಪರಾಸಿ ಪಶ್ಚಿಮದಲ್ಲಿ 208, ನುವಕೋಟ್‌ನಲ್ಲಿ 185, ಗೂರ್ಖಾದಲ್ಲಿ 72, ಧಾಡಿಂಗ್‌ನಲ್ಲಿ 60, ರಸುವಾದಲ್ಲಿ 140 ಹಾಗೂ ತನಹುದಲ್ಲಿ 38 ಶವಗಳನ್ನು ಹೊರತೆಗೆಯಲಾಗಿದೆ.

ಕಠ್ಮಂಡುವಿನ ಎರಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಮೃತಪಟ್ಟಿರುವುದರಿಂದ ಸಾವಿನ ಸಂಖ್ಯೆ 1,282ಕ್ಕೆ ತಲುಪಿದೆ. ವಿವಿಧ ಪ್ರದೇಶಗಳಲ್ಲಿ ನಾಪತ್ತೆಯಾಗಿರುವ 4,798 ಮಂದಿಗಾಗಿ ಭದ್ರತಾ ಪಡೆಗಳ ಜಂಟಿ ತಂಡ ಶೋಧ ಕಾರ್ಯ ನಡೆಸುತ್ತಿದೆ.

ರಸುವಾದಲ್ಲಿ 280, ನುವಕೋಟ್‌ನಲ್ಲಿ 350 ಮಕ್ಕಳು ನಾಪತ್ತೆ

ರಸುವಾದಲ್ಲಿ ಅಂದಾಜು 280 ಮಕ್ಕಳು ನಾಪತ್ತೆಯಾಗಿದ್ದು, ಮಧ್ಯ ನೇಪಾಳದ ನೆರೆಯ ನುವಕೋಟ್‌ನಲ್ಲಿ 300ರಿಂದ 350 ಮಕ್ಕಳು ಇನ್ನೂ ಪತ್ತೆಯಾಗಿಲ್ಲ ಎಂದು ಸ್ಥಳೀಯ ಶಿಕ್ಷಣ ಅಭಿವೃದ್ಧಿ ಮತ್ತು ಸಮನ್ವಯ ಘಟಕಗಳು ತಿಳಿಸಿವೆ. ಸ್ಥಳೀಯ ಸರ್ಕಾರಗಳು ಹಾಗೂ ಶಿಕ್ಷಣ ಸಂಸ್ಥೆಗಳು ಸಂಗ್ರಹಿಸಿರುವ ಅಂಕಿ-ಅಂಶಗಳನ್ನು ಆಧರಿಸಿ ‘ಕಠ್ಮಂಡು ಪೋಸ್ಟ್‌’ ಈ ವರದಿ ಮಾಡಿದೆ.

ನುವಕೋಟ್‌ ಶಿಕ್ಷಣ ಅಭಿವೃದ್ಧಿ ಮತ್ತು ಸಮನ್ವಯ ಘಟಕದ ಮುಖ್ಯಸ್ಥ ಸೂರ್ಯ ಬಹದ್ದೂರ್‌ ಖತ್ರಿ ಮಾತನಾಡಿ, ನಾಪತ್ತೆಯಾಗಿರುವ ವಿದ್ಯಾರ್ಥಿಗಳ ಪರಿಶೀಲಿತ ಮಾಹಿತಿಯನ್ನು ಸಂಗ್ರಹಿಸಲು ಮುಖ್ಯೋಪಾಧ್ಯಾಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಆದರೆ ಹಲವು ಶಾಲಾ ಮುಖ್ಯಸ್ಥರೊಂದಿಗೆ ಸಂಪರ್ಕ ಸಾಧ್ಯವಾಗದ ಕಾರಣ ನಿಖರ ಅಂಕಿ-ಅಂಶ ಸಂಗ್ರಹಿಸುವುದು ಕಷ್ಟವಾಗುತ್ತಿದೆ ಎಂದು ಹೇಳಿದರು.

ಕೆಲವು ನಾಪತ್ತೆಯಾಗಿದ್ದ ವಿದ್ಯಾರ್ಥಿಗಳು ಪತ್ತೆಯಾಗಿದ್ದಾರೆ. ಆದರೆ ವಿವಿಧ ಶಾಲೆಗಳಿಂದ ಲೆಕ್ಕಕ್ಕೆ ಸಿಗದ ಮಕ್ಕಳ ಕುರಿತು ಹೊಸ ವರದಿಗಳು ಬರುತ್ತಲೇ ಇವೆ. ನಮ್ಮ ಜಿಲ್ಲೆಯಲ್ಲಿ ಕನಿಷ್ಠ 300 ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ ಎಂದು ಅಂದಾಜಿಸಲಾಗಿದೆ ಎಂದು ಖತ್ರಿ ತಿಳಿಸಿದ್ದಾರೆ.

ನುವಕೋಟ್‌ನ ಬಿದೂರ್‌ ಪುರಸಭೆಯೊಂದರಲ್ಲೇ ಪ್ರವಾಹ ಸಂಭವಿಸಿದ ಬಳಿಕ ಸುಮಾರು 250 ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಪುರಸಭೆಯ ಶಿಕ್ಷಣ ಘಟಕದ ಶಾಲಾ ನಿರೀಕ್ಷಕ ನವರಾಜ್‌ ಸಪ್ಕೋಟಾ ಹೇಳಿದ್ದಾರೆ.

‘ನೆಲಮಟ್ಟದ ಪರಿಸ್ಥಿತಿ ಅತ್ಯಂತ ದುಃಖಕರವಾಗಿದೆ. ಕೆಲವು ಸಂದರ್ಭಗಳಲ್ಲಿ ತಮ್ಮ ಮಕ್ಕಳನ್ನು ಹುಡುಕಲಾಗದೆ ಪರದಾಡುತ್ತಿರುವ ಬದುಕುಳಿದ ಪೋಷಕರನ್ನು ನಾವು ಕಂಡಿದ್ದೇವೆ. ಮತ್ತೊಂದೆಡೆ, ಬದುಕುಳಿದ ವಿದ್ಯಾರ್ಥಿಗಳು ನಾಪತ್ತೆಯಾಗಿರುವ ತಮ್ಮ ಪೋಷಕರನ್ನು ಹುಡುಕುತ್ತಿರುವ ಪ್ರಕರಣಗಳೂ ಇವೆ’ ಎಂದು ಸಪ್ಕೋಟಾ ತಿಳಿಸಿದ್ದಾರೆ.ಬಿದೂರ್‌ನಲ್ಲಿ 170 ಶಿಕ್ಷಣ ಸಂಸ್ಥೆಗಳಿದ್ದು, ಅವುಗಳಲ್ಲಿ 142 ಸಮುದಾಯ ಶಾಲೆಗಳು ಹಾಗೂ 28 ಖಾಸಗಿ ಶಾಲೆಗಳಾಗಿವೆ.

ರಸುವಾದ ಸ್ಥಳೀಯ ಶಿಕ್ಷಣ ಘಟಕದ ಮುಖ್ಯಸ್ಥ ದುರ್ಗಾ ಪ್ರಸಾದ್‌ ಸಿಲ್ವಾಲ್‌ ಮಾತನಾಡಿ, ಅಧಿಕೃತ ಪರಿಶೀಲನೆ ಮುಂದುವರಿದಿದ್ದು, ಜಿಲ್ಲೆಯಾದ್ಯಂತ ಪ್ರಸ್ತುತ 280 ವಿದ್ಯಾರ್ಥಿಗಳು ನಾಪತ್ತೆಯಾಗಿರುವುದು ಪ್ರಾಥಮಿಕ ದಾಖಲೆಗಳಿಂದ ತಿಳಿದುಬಂದಿದೆ ಎಂದು ಹೇಳಿದ್ದಾರೆ.

ಶಿಕ್ಷಕರೂ ನಾಪತ್ತೆ

ಪ್ರವಾಹದ ಪರಿಣಾಮ ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿಯ ಮೇಲೂ ಬೀರಿದೆ. ರಸುವಾ ಮತ್ತು ನುವಕೋಟ್‌ ಜಿಲ್ಲೆಗಳಲ್ಲಿ ಒಟ್ಟು 22 ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ನಾಪತ್ತೆಯಾಗಿರುವುದನ್ನು ಶಿಕ್ಷಣ ಘಟಕಗಳು ದೃಢಪಡಿಸಿವೆ. ಇದಲ್ಲದೆ, ತೀರ್ಥಯಾತ್ರೆಗಾಗಿ ರಸುವಾಗೆ ತೆರಳಿದ್ದ ಧಾಡಿಂಗ್‌ ಮತ್ತು ಗೂರ್ಖಾ ಜಿಲ್ಲೆಗಳ ಹಲವು ಶಿಕ್ಷಕರು ಪ್ರವಾಹದಲ್ಲಿ ಸಿಲುಕಿಕೊಂಡಿದ್ದು, ಅವರೂ ನಾಪತ್ತೆಯಾಗಿದ್ದಾರೆ.

RELATED ARTICLES
spot_img

Latest News