ಬೆಂಗಳೂರು, ಸೆ.4- ಮಂಗಳೂರಿನ ಭಜರಂಗದಳದ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳು ಪರಪ್ಪನ ಅಗ್ರಹಾರ ಕಾರಾಗೃಹದ ವಾರ್ಡನ್ ಮೇಲೆ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ. ಈ ಕುರಿತು ಕಾರಾಗೃಹದ ಪ್ರಭಾರ ಅಧೀಕ್ಷಕ ಮಂಜುನಾಥ್ ಅವರು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸೆ.2ರಂದು ಬೆಳಗ್ಗೆ 10.30ರ ಸುಮಾರಿಗೆ ಜೈಲು ವಾರ್ಡನ್ ಮಂಜುನಾಥ್ ಹವೇಲಿ ಅವರು ಕೈದಿಯೊಬ್ಬರ ಮಾಹಿತಿ ಪಡೆಯಲು ಅನೆಕ್ಸ್-1 ಕಾರಾಗೃಹಕ್ಕೆ ತೆರಳಿದ್ದರು. ಈ ವೇಳೆ ಮೊಹಮ್ಮದ್ ಮುಜಾಯಿನ್ ಎಂಬಾತ ಅವರ ಬಳಿ ಬಂದು, ಭದ್ರತಾ ವಿಭಾಗದಿಂದ ಅನೆಕ್ಸ್-1 ಕಾರಾಗೃಹಕ್ಕೆ ವರ್ಗಾವಣೆಯಾಗುವಾಗ ಹೆಚ್ಚುವರಿಯಾಗಿ ತಂದಿದ್ದ ವಸ್ತುಗಳನ್ನು ಜೈಲಿನೊಳಗೆ ಬಿಡದಂತೆ ತಡೆದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಗಲಾಟೆ ಮಾಡಿದ್ದಾನೆ.
ಬಳಿಕ ವಾರ್ಡನ್ ಅವರನ್ನು ನಿಂದಿಸಿ ಮುಖ ಹಾಗೂ ಮೂಗಿನ ಮೇಲೆ ಗುದ್ದಿ ಗಾಯಗೊಳಿಸಿದ್ದಾನೆ. ನಂತರ ಆತನೊಂದಿಗೆ ಇದ್ದ ಅಬ್ದುಲ್ ಶಫ್ವಾನ್, ಮೊಹಮ್ಮದ್ ರಿಜ್ವಾನ್, ನಯಾಜ್ ಹಾಗೂ ಕಲಂದರ್ ಶಫಿ ಸೇರಿಕೊಂಡು ಮಂಜುನಾಥ್ ಹವೇಲಿ ಅವರನ್ನು ಕೊಠಡಿಯೊಂದಕ್ಕೆ ಎಳೆದೊಯ್ದು ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ.
ಅಲ್ಲದೆ, ಅವರ ಕುತ್ತಿಗೆಯನ್ನು ಬಲವಾಗಿ ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಧಾವಿಸಿದ ಕಾರಾಗೃಹ ಸಿಬ್ಬಂದಿ ವಾರ್ಡನ್ ಅವರನ್ನು ರಕ್ಷಿಸಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಮೊಹಮ್ಮದ್ ಮುಜಾಯಿನ್, ಅಬ್ದುಲ್ ಶಫ್ವಾನ್, ಮೊಹಮ್ಮದ್ ರಿಜ್ವಾನ್, ನಯಾಜ್ ಹಾಗೂ ಕಲಂದರ್ ಶಫಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
