ಬೆಂಗಳೂರು,ಮಾ.20- ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ ಅವರು ಮಾತೃಪಕ್ಷ ಬಿಜೆಪಿಯನ್ನು ಬಿಟ್ಟು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರುವುದಿಲ್ಲ. ಈಗ ಕೇಳಿಬರುತ್ತಿರುವ ಸುದ್ದಿಗಳೆಲ್ಲವೂ ಊಹಾಪೋಹ ಎಂದು ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸದಾನಂದ ಗೌಡರಂತಹ ನಿಷ್ಠಾವಂತ ಶಿಸ್ತುಬದ್ದ ಕಾರ್ಯಕರ್ತ ಬಿಜೆಪಿ ಯಲ್ಲಿ ಯಾರು ಇಲ್ಲ. ಇವರೊಬ್ಬ ಸ್ಥಿತಪ್ರಜ್ಞ ರಾಜಕಾರಣಿ. ಯಾವುದೇ ಕಾರಣಕ್ಕೂ ಅವರು ಕಾಂಗ್ರೆಸ್ ಸೇರಲಾರರು ಎಂದು ಹೇಳಿದ್ದಾರೆ. ಮಾಧ್ಯಮಗಳಲ್ಲಿ ಬರುತ್ತಿರುವಂತೆ ನಮ್ಮ ಸದಾನಂದ ಗೌಡರು ಕಾಂಗ್ರೆಸ್ ಪಕ್ಷವನ್ನು ಸೇರುವುದು ಸತ್ಯಕ್ಕೆ ದೂರವಾದ ಮಾತು.
ಸದಾನಂದ ಗೌಡರು ಶಿಸ್ತಿನ ಸಿಪಾಯಿ. ಸಂಘ ಪರಿವಾರದ ಸದಸ್ಯರು. ಅವರು ಕಾಂಗ್ರೆಸ್ ಇಂದ ಆಫ಼ರ್ ಬಂದಿದೆ ಎಂದಷ್ಟೇ ಹೇಳಿದ್ದು. ಆದರೆ ಸೇರುತ್ತೇನೆ ಎಂದು ಹೇಳಿಯೇ ಇಲ್ಲ ಎಂದು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹಾರಿಕೆ ಸುದ್ದಿ ಹರಡುವವರು ದೇಶದ್ರೋಹಿಗಳು ಎಂದು. ಈಗ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಅಪ್ರಚಾರ ಮಾಡುವವರು ಈಗ ಸಾಲಿಗೆ ಸೇರುವವರು. ಮೋದಿ ಅಲೆಯನ್ನು ನೋಡಿ ಈಗಲೇ ಸೋಲುವ ಭೀತಿಯಲ್ಲಿರುವ ಕಾಂಗ್ರೆಸ್ ನಾಯಕರು ಜನರ ಹಾದಿ ತಪ್ಪಿಸಲು ಈ ರೀತಿಯ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಸದಾನಂದಗೌಡರಿಗೆ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಅವರು, ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲಿದ್ದಾರೆ ಎಂಬ ವದಂತಿ ಕೇಳಿಬಂದಿತ್ತು. ಇದೀಗ ಈ ವದಂತಿಗಳಿಗೆ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರೂ ಆಗಿರುವ ಎಸ್.ಹರೀಶ್ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.