Thursday, May 2, 2024
Homeರಾಜ್ಯಅನಂತಕುಮಾರ್ ಹೆಗಡೆ ಜಾಗಕ್ಕೆ ಎಂಟ್ರಿ ಆಗ್ತಾರಾ ಕುಮಾರ್ ಬಂಗಾರಪ್ಪ ..?

ಅನಂತಕುಮಾರ್ ಹೆಗಡೆ ಜಾಗಕ್ಕೆ ಎಂಟ್ರಿ ಆಗ್ತಾರಾ ಕುಮಾರ್ ಬಂಗಾರಪ್ಪ ..?

ಬೆಂಗಳೂರು,ಮಾ.20- ಪಕ್ಷ ಬಿಡುವ ತೀರ್ಮಾನಕ್ಕೆ ಬಂದಿದ್ದ ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡರಿಗೆ ಚಿಕ್ಕಬಳ್ಳಾಪುರ, ಭಿನ್ನಮತಕ್ಕೆ ಕ್ಯಾರೆ ಎನ್ನದೆ ಜಗದೀಶ್ ಶೆಟ್ಟರ್‍ಗೆ ಬೆಳಗಾವಿ, ಅಚ್ಚರಿ ಬೆಳವಣಿಗೆ ಎಂಬಂತೆ ಉತ್ತರ ಕನ್ನಡದಿಂದ ಕುಮಾರ್ ಬಂಗಾರಪ್ಪ ಅವರಿಗೆ ಟಿಕೆಟ್ ಸಿಗುವ ಸಂಭವವಿದೆ. ರಾಜ್ಯದ ಐದು ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಯಾವುದೇ ಕ್ಷಣದಲ್ಲಿ ಟಿಕೆಟ್ ಘೋಷಣೆ ಮಾಡುವ ಸಂಭವವಿದೆ.

ಕಳೆದ ರಾತ್ರಿ ಬಿಜೆಪಿ ವರಿಷ್ಠರು ರಾಜ್ಯ ನಾಯಕರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಹಲವರ ಜೊತೆ ಟಿಕೆಟ್ ಹಂಚಿಕೆ ಸಂಬಂಧ ಮಾತುಕತೆ ನಡೆಸಿದ್ದಾರೆ.

ಜೆಡಿಎಸ್‍ಗೆ ಹಾಸನ, ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳನ್ನು ಬಿಟ್ಟುಕೊಟ್ಟು ಉಳಿದಿರುವ ಐದು ಕ್ಷೇತ್ರಗಳಾದ ಚಿಕ್ಕಬಳ್ಳಾಪುರ, ಚಿತ್ರದುರ್ಗ, ರಾಯಚೂರು, ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಯಾವುದೇ ಕ್ಷಣದಲ್ಲೂ ಟಿಕೆಟ್ ಘೋಷಣೆಯಾಗುವ ಸಂಭವವಿದೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಸದಾನಂದಗೌಡರನ್ನು ಪಕ್ಷದಲ್ಲೇ ಉಳಿಸಿಕೊಂಡು ಅವರಿಗೆ ಬೆಂಗಳೂರಿಗೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ ಇದೆ.

ಮಾಜಿ ಸಚಿವ ಡಾ.ಕೆ.ಸುಧಾಕರ್ ಹಾಗೂ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಪುತ್ರ ಅಲೋಕ್ ವಿಶ್ವನಾಥ್ ಅವರ ನಡುವೆ ಟಿಕೆಟ್ ಪಡೆಯಲು ತೀವ್ರ ಸ್ಪರ್ಧೆ ಏರ್ಪಟ್ಟಿತ್ತು.ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡಿದರೆ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂಬ ಹಿನ್ನೆಲೆಯಲ್ಲಿ ಇಬ್ಬರ ಜಗಳ ಮೂರನೇಯವರಿಗೆ ಲಾಭ ಎಂಬಂತೆ ಚಿಕ್ಕಬಳ್ಳಾಪುರದಿಂದ ಸದಾನಂದಗೌಡರಿಗೆ ಅದೃಷ್ಟ ಖುಲಾಯಿಸುವ ಸಂಭವವಿದೆ.

ಹೀಗಾಗಿಯೇ ಇಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಸದಾನಂದಗೌಡರು ರದ್ದುಪಡಿಸಿ ತಮ್ಮ ಸ್ವಕ್ಷೇತ್ರ ಪುತ್ತೂರಿಗೆ ತೆರಳಿದ್ದಾರೆ. ಇನ್ನು ಧಾರವಾಡ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್‍ಗೆ ಪಕ್ಷದ ಹಲವರ ವಿರೊಧದ ನಡುವೆಯೂ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಲು ವರಿಷ್ಠರು ಸಮ್ಮತಿಸಿದ್ದಾರೆ.

ಯಾವ ಬಂಡಾಯದ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ಕ್ಷೇತ್ರದಲ್ಲಿ ನೀವು ಪ್ರಚಾರವನ್ನು ಆರಂಭಿಸಿ. ಉಳಿದಿದ್ದನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಶೆಟ್ಟರ್‍ಗೆ ಟಿಕೆಟ್ ತಪ್ಪಿಸಲು ದೆಹಲಿಗೆ ತೆರಳಿದ್ದ ಬೆಳಗಾವಿಯ ಬಿಜೆಪಿ ನಿಯೋಗಕ್ಕೆ ಸಮಯ ಅವಕಾಶವನ್ನು ಕೊಡದೆ ವಾಪಸ್ ಕಳುಹಿಸಿದ್ದಾರೆ.

ಸಂವಿಧಾನ ಕುರಿತು ವಿವಾದತ್ಮಕ ಹೇಳಿಕೆ ನೀಡಿದ್ದ ಉತ್ತರಕನ್ನಡ ಸಂಸದ ಅನಂತಕುಮಾರ್ ಹೆಗಡೆ ಬಹುತೇಕ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ. ಈ ಕ್ಷೇತ್ರದಿಂದ ಅಚ್ಚರಿ ಎಂಬಂತೆ ಮಾಜಿ ಸಂಸದ ಕುಮಾರ್ ಬಂಗಾರಪ್ಪ ಅಭ್ಯರ್ಥಿಯಾಗುವ ಸಾಧ್ಯತೆಗಳು ಕಂಡುಬಂದಿದೆ.ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ವಿಧಾನಸಭಾ ಕ್ಷೇತ್ರದಿಂದ ಸೋತ ಬಳಿಕ ಸಕ್ರಿಯ ರಾಜಕಾರಣದಿಂದ ದೂರ ಸರಿದಿದ್ದ ಅವರು ಇತ್ತೀಚೆಗೆ ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರಮೋದಿ ಅವರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಜಿಲ್ಲೆಯಲ್ಲಿ ಈಡಿಗರು, ನಾಮಧಾರಿಗಳು ಸೇರಿದಂತೆ ಹಿಂದುಳಿದ ವರ್ಗಗಳ ಮತಗಳೇ ನಿರ್ಣಾಯಕವಾಗಿರುವುದರಿಂದ ಕುಮಾರ ಬಂಗಾರಪ್ಪ ಅವರನ್ನು ಅಭ್ಯರ್ಥಿ ಮಾಡಲು ಪಕ್ಷ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. ಉಳಿದಂತೆ ಚಿತ್ರದುರ್ಗದಿಂದ ಸಚಿವ ಎ.ನಾರಾಯಣಸ್ವಾಮಿ, ರಾಯಚೂರಿನಿಂದ ಬಿ.ವಿ.ನಾಯಕ್ ಇಲ್ಲವೇ ತಿಪ್ಪರಾಜ್ ಹವಾಲ್ದಾರ್ ಅಭ್ಯರ್ಥಿಯಾಗುವ ಸಂಭವವಿದೆ.

RELATED ARTICLES

Latest News