ತಿ.ನರಸೀಪುರ,ಮಾ.20- ಆಸ್ತಿ ಬರೆದು ಕೊಡಲು ನಿರಾಕರಿಸಿದ ತಂದೆಯನ್ನು ಮಗನೇ ತನ್ನಸ್ನೇಹಿತರೊಡಗೂಡಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲು ಯತ್ನಿಸಿದ ಘಟನೆ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪುರಸಭೆ ವ್ಯಾಪ್ತಿಯ ಆಲಗೂಡು ಗ್ರಾಮದ ರಾಚಪ್ಪಾಜಿ (60) ಎಂಬುವವರೇ ತನ್ನಪುತ್ರ ಸುಭಾಷ್ ಹಾಗು ಸ್ನೇಹಿತರಿಂದ ಚಾಕು ಇರಿತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಸೆಣೆಸಾಟ ನಡೆಸುತ್ತಿರುವ ವ್ಯಕ್ತಿ.
ಜೊತೆಗಿದ್ದ ರಾಚಪ್ಪಾಜಿಯ ಸ್ನೇಹಿತ ಮಹದೇವ ಅಲಿಯಾಸ್ ಕೆಂಚ ಸಹ ಚಾಕು ಇರಿತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಟ್ಟಣದ ಹೊರ ವಲಯದಲ್ಲಿರುವ ಮೂಲ ಸ್ಥಾನೇಶ್ವರ ಸ್ವಾಮಿ ದೇವಸ್ಥಾನದ ಮುಂದಿನ ಆವರಣದಲ್ಲಿ ಘಟನೆ ನಡೆದಿದೆ.
ಪ್ರಮುಖ ಆರೋಪಿ ಸುಭಾಷ್ ರೊಂದಿಗೆ ಬೋಗನಮೊಮ್ಮಗ ಅಜಿತ,ಮಣ್ಣಪ್ಪನ ಮೊಮ್ಮಗ ಶಶಿ ಎಂಬುವರ ಮಗ ರಾಜೇಂದ್ರ, ಬೂಕಿ ಮಗ ಮಹೇಶ್, ಕುಳ್ಳಿ ಮಾದ ಎಂಬುವರೇ ಹಲ್ಲೆ ಆರೋಪಿಗಳಾಗಿದ್ದು ಘಟನೆ ಸಂಬಂಧಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ತನ್ನ ಮಗನಿಂದಲೇ ತೀವ್ರವಾದ ಇರಿತಕ್ಕೊಳಗಾಗಿರುವ ರಾಚಪ್ಪಾಜಿ ತಮ್ಮಮಕ್ಕಳಿಗೆ ಕೊಡಬೇಕಾದ ಆಸ್ತಿಯನ್ನು ನೀಡಿ ಸಂಸಾರದಿಂದ ಬಿಡುಗಡೆ ಹೊಂದಿದ್ದಾರೆನ್ನಲಾಗಿದ್ದು,ಸುಭಾಷ್ ತನ್ನತಂದೆಯನ್ನು ಮತ್ತೆ ಆಸ್ತಿ ನೀಡುವಂತೆ ಒತ್ತಾಯಿಸಿದ್ದಾನೆ.ಆದರೆ ಮಗನಬೇಡಿಕೆಗೆ ಒಪ್ಪದ ರಾಚಪ್ಪಾಜಿ ನೀಡಬೇಕಾದ ಆಸ್ತಿಯನ್ನು ನೀಡಿ ನಾನು ನಿಮ್ಮಂದ ಬಿಡುಗಡೆ ಹೊಂದಿದ್ದೇನೆ.
ಹಾಗಾಗಿ ನನ್ನಮುಂದಿನ ಜೀವನಕ್ಕೆ ಸ್ಪಲ್ಪ ಆಸ್ತಿ ಇಟ್ಟುಕೊಂಡಿದ್ದೇನೆ.ನಿಮಗೆ ಮತ್ತೆ ಆಸ್ತಿ ಕೊಡುವುದಿಲ್ಲ ಎಂದಾಗ ಕುಪಿತನಾದ ಸುಭಾಷ್ ತನ್ನ ಇತರೆ ಸ್ನೇಹಿತರೊಂದಿಗೆ ಸೇರಿ ಮೂಲಸ್ಥಾನೇಶ್ವರ ಸ್ವಾಮಿ ದೇವಸ್ಥಾನದ ಬಳಿ ಚಾಕುವಿನಿಂದ ಹಲ್ಲೆ ನಡೆಸಿ. ಕುತ್ತಿಗೆ, ಕೋಯ್ದು ಕೊಲೆ ಮಾಡಲು ಯತ್ನಿಸಿದ್ದಾನೆ.
ಕುತ್ತಿಗೆಗೆ ಚಾಕುವಿನಿಂದ ಹಲ್ಲೆ ನಡೆಸಿದ ಪರಿಣಾಮ ಆತ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಜೊತೆಯಲ್ಲಿದ್ದ ಮಹದೇವನ ಮೇಲೂ ಹಲ್ಲೆ ನಡೆಸಿದ್ದಾರೆ. ಆತನ ಹೊಟ್ಟೆಗೆ ಚಾಕುವಿನಿಂದ ಚುಚ್ಚಿದ್ದಾರೆ.ವಿಷಯ ತಿಳಿದು ಸ್ಥಳಕ್ಕೆ ಬಂದ ಮಹದೇವನ ಮಗ ಮನುವನ್ನು ನೋಡಿ ಆರೋಪಿಗಳು ಪರಾರಿಯಾಗಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಇಬ್ಬರನ್ನೂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಹಲ್ಲೆಗೊಳಗಾದ ರಾಚಪ್ಪಾಜಿ ಸ್ಥಿತಿ ಗಂಭೀರವಾಗಿದ್ದು, ಘಟನೆ ಸಂಬಂಧ ಕೇಸು ದಾಖಲಿಸಿಕೊಂಡಿರುವ ಪಿಎಸ್ ಐ ಜಗದೀಶ್ ದೂಳ್ ಶೆಟ್ಟಿ ಮುಂದಿನ ಕ್ರಮ ಜರುಗಿಸಿದ್ದಾರೆ.