ಬೆಂಗಳೂರು, ಸೆ.4- ರಾಜ್ಯದಲ್ಲಿ ಮಳೆ ಕೊರತೆ ಹಾಗೂ ಎದುರಾಗಬಹುದಾದ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವ ಮಹತ್ವಾಕಾಂಕ್ಷಿ ಮೋಡ ಬಿತ್ತನೆ ಯೋಜನೆಗೆ ಇಂದು ನಗರದ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ ನೀಡಿದರು.
ಮೋಡ ಬಿತ್ತನೆ ಕಾರ್ಯಾಚರಣೆಗೆ ಸಿದ್ಧಪಡಿಸಲಾಗಿರುವ ವಿಶೇಷ ಲಘು ವಿಮಾನಕ್ಕೆ ರಾಷ್ಟ್ರಧ್ವಜ ಹಾಗೂ ನಾಡಧ್ವಜ ತೋರುವ ಮೂಲಕ ಸಚಿವರು ಚಾಲನೆ ನೀಡಿದರು. ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳ್ಳುವ ಮೂಲಕ ರಾಜ್ಯದ ಜಲಸಂಕಷ್ಟ ಕಡಿಮೆಯಾಗಲಿ ಹಾಗೂ ರೈತರಿಗೆ ಅನುಕೂಲವಾಗಲಿ ಎಂದು ಅವರು ಆಶಿಸಿದರು.
ಜಲಸಂಕಷ್ಟದ ಎಚ್ಚರಿಕೆ
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಪ್ರಸಕ್ತ ವರ್ಷ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ತೀವ್ರ ಬರ ಪರಿಸ್ಥಿತಿ ಎದುರಾಗುವ ಸಾಧ್ಯತೆಯಿದ್ದು, ಅದರ ಪ್ರಮಾಣವನ್ನು ಈಗಲೇ ನಿಖರವಾಗಿ ಅಂದಾಜಿಸಲು ಸಾಧ್ಯವಿಲ್ಲ ಎಂದರು.
ಸೆಪ್ಟೆಂಬರ್ ಅಂತ್ಯದ ವೇಳೆಗೆ ಮುಂಗಾರು ಮುಕ್ತಾಯಗೊಳ್ಳಲಿದ್ದು, ಅಷ್ಟರೊಳಗೆ ಕುಡಿಯುವ ನೀರಿನ ಅಗತ್ಯ ಪ್ರಮಾಣದ ಶೇಖರಣೆಯಾಗದಿದ್ದರೆ ಮುಂದಿನ ಜೂನ್ವರೆಗೆ ನೀರಿನ ತೀವ್ರ ಅಭಾವ ಎದುರಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದರು.
ನೀರಿನ ಕೊರತೆಯನ್ನು ಸರಿದೂಗಿಸಲು ಹಾಗೂ ರೈತರ ಹಿತದೃಷ್ಟಿಯಿಂದ ಮೋಡ ಬಿತ್ತನೆಗೆ ಮುಂದಾಗಿದ್ದೇವೆ. ಈ ಹಿಂದೆ ನಡೆದ ಮೋಡ ಬಿತ್ತನೆ ಕಾರ್ಯಾಚರಣೆ ಶೇ.35ರಷ್ಟು ಯಶಸ್ವಿಯಾಗಿತ್ತು. ಏನೇ ನಷ್ಟ ಅಥವಾ ಲಾಭವಾದರೂ ಯೋಜನೆಯಿಂದ ಜನರಿಗೆ ಒಳಿತಾಗಬೇಕು ಎಂಬುದೇ ಸರ್ಕಾರದ ಆಶಯ. ನಾಡಿನ ಹಿತ ಕಾಯುವುದೇ ನಮ್ಮ ಆದ್ಯತೆ ಎಂದು ಅವರು ಹೇಳಿದರು.
28.52 ಕೋಟಿ ರೂ. ಯೋಜನೆ
ಮೋಡ ಬಿತ್ತನೆ ಯೋಜನೆಗೆ ಜಿಎಸ್ಟಿ ಹೊರತುಪಡಿಸಿ ಒಟ್ಟು 28.52 ಕೋಟಿ ರೂ. ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಜಲಸಂಪನ್ಮೂಲ ಇಲಾಖೆಯ ಕರ್ನಾಟಕ ನೀರಾವರಿ ನಿಗಮ ನಿಯಮಿತ ಹಾಗೂ ಕಂದಾಯ ಇಲಾಖೆಯ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ಎನ್ಡಿಎಂಸಿ) ಜಂಟಿಯಾಗಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿವೆ.
ಮೋಡ ಬಿತ್ತನೆ ಕಾರ್ಯವನ್ನು ಓಠಿಜಿ ಇ್ಝಜಿಞಠಿಛಿ ಟಜ್ಛಿಜ್ಚಿಠಿಜಿಟ್ಞ ಇಟ್ಞ್ಠ್ಝಠ್ಞಿಠಿ ಔಔ ಸಂಸ್ಥೆಗೆ ಕೆಟಿಪಿಪಿ ಕಾಯ್ದೆಯಡಿ ವಿನಾಯಿತಿ ನೀಡಿ ಗುತ್ತಿಗೆ ನೀಡಲಾಗಿದೆ. ಯೋಜನೆಯ ಮೇಲ್ವಿಚಾರಣೆ ಹಾಗೂ ತಾಂತ್ರಿಕ ಮೌಲ್ಯಮಾಪನಕ್ಕಾಗಿ ಸರ್ಕಾರ ಎರಡು ಪ್ರತ್ಯೇಕ ಸಮಿತಿಗಳನ್ನು ರಚಿಸಿದೆ.
ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರ ನೇತೃತ್ವದ ಮೇಲ್ವಿಚಾರಣಾ ಸಮಿತಿ ಯೋಜನೆಯ ಸಮಗ್ರ ಉಸ್ತುವಾರಿ ವಹಿಸಲಿದೆ. ಕೆಎಸ್ಎನ್ಡಿಎಂಸಿ ನಿರ್ದೇಶಕರ ಅಧ್ಯಕ್ಷತೆಯ ಎಂಟು ಸದಸ್ಯರ ತಾಂತ್ರಿಕ ಸಲಹಾ ಮತ್ತು ಮೌಲ್ಯಮಾಪನ ಸಮಿತಿ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಲಿದೆ.
ರಾಡಾರ್ ಮೂಲಕ ಮೋಡಗಳ ಗುರುತು
ಮೋಡ ಬಿತ್ತನೆ ಎನ್ನುವುದು ಮೋಡಗಳಲ್ಲಿರುವ ತೇವಾಂಶವನ್ನು ಮಳೆಯಾಗಿ ಪರಿವರ್ತನೆಯಾಗುವ ಪ್ರಕ್ರಿಯೆಯನ್ನು ಉತ್ತೇಜಿಸುವ ವೈಜ್ಞಾನಿಕ ವಿಧಾನವಾಗಿದೆ. ಮೋಡಗಳ ಸ್ವರೂಪಕ್ಕೆ ಅನುಗುಣವಾಗಿ ಸಿಲ್ವರ್ ಅಯೋಡೈಡ್, ಪೊಟ್ಯಾಸಿಯಮ್ ಅಯೋಡೈಡ್, ಡ್ರೈ ಐಸ್ ಅಥವಾ ಸೋಡಿಯಂ ಕ್ಲೋರೈಡ್ನಂತಹ ಕಣಗಳನ್ನು ಬಳಸಲಾಗುತ್ತದೆ.
ಹವಾಮಾನ ರಾಡಾರ್ ಮೂಲಕ ಗಾಳಿಯ ವೇಗ, ತೇವಾಂಶ, ಮೋಡಗಳ ಸಾಂದ್ರತೆ ಸೇರಿದಂತೆ ವಿವಿಧ ಅಂಶಗಳನ್ನು ನಿರಂತರವಾಗಿ ಪರಿಶೀಲಿಸಲಾಗುತ್ತದೆ. ಮಳೆ ಸುರಿಸುವ ಸಾಮರ್ಥ್ಯ ಹೊಂದಿರುವ ಸೂಕ್ತ ಮೋಡಗಳು ಕಂಡುಬಂದಾಗ ವಿಶೇಷ ವಿಮಾನದ ಮೂಲಕ ಅವುಗಳೊಳಗೆ ಅಥವಾ ಕೆಳಭಾಗದಲ್ಲಿ ಅಗತ್ಯ ವಸ್ತುಗಳನ್ನು ಸಿಂಪಡಿಸಲಾಗುತ್ತದೆ.
ಸೂಕ್ತ ಪ್ರದೇಶಗಳಿಗೆ ವಿಮಾನ
ಮೋಡ ಬಿತ್ತನೆಗೆ ಯಾವುದೇ ಜಿಲ್ಲೆಯನ್ನು ಮೊದಲೇ ನಿಗದಿಪಡಿಸಲಾಗುವುದಿಲ್ಲ. ತಾಂತ್ರಿಕ ತಂಡ ನೀಡುವ ಹವಾಮಾನ ವರದಿಯ ಆಧಾರದ ಮೇಲೆ ಮಳೆ ಕೊರತೆ ಇರುವ ಪ್ರದೇಶಗಳು, ಪ್ರಮುಖ ಜಲಾಶಯಗಳ ಜಲಾನಯನ ಪ್ರದೇಶಗಳು ಹಾಗೂ ಕೃಷಿ ಬಿಕ್ಕಟ್ಟು ಎದುರಿಸುತ್ತಿರುವ ಜಿಲ್ಲೆಗಳಿಗೆ ಆದ್ಯತೆ ನೀಡಲಾಗುತ್ತದೆ.
ಪ್ರತಿ ಎರಡು ಗಂಟೆಗೊಮ್ಮೆ ಲಭ್ಯವಾಗುವ ಹವಾಮಾನ ದತ್ತಾಂಶದ ಆಧಾರದ ಮೇಲೆ ಕಾರ್ಯಾಚರಣೆಯ ಸ್ಥಳವನ್ನು ನಿರ್ಧರಿಸಲಾಗುತ್ತದೆ.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಜಿ.ಸಿ.ಚಂದ್ರಶೇಖರ್, ಮಾಜಿ ಸಚಿವ ಎಚ್.ಕೆ.ಪಾಟೀಲ್, ಶಾಸಕ ಕೋನರೆಡ್ಡಿ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
