Homeಮನರಂಜನೆಭಾವನಾತ್ಮಕ ಪತ್ರ ಪಡೆದ ನಟ ದುನಿಯಾ ವಿಜಯ್‌ ಮಾಜಿ ಪತ್ನಿ ನಾಗರತ್ನ

ಭಾವನಾತ್ಮಕ ಪತ್ರ ಪಡೆದ ನಟ ದುನಿಯಾ ವಿಜಯ್‌ ಮಾಜಿ ಪತ್ನಿ ನಾಗರತ್ನ

Actor Duniya Vijay's ex-wife Nagaratna receives emotional letter

ಬೆಂಗಳೂರು, ಸೆ.4- ನಟ ದುನಿಯಾ ವಿಜಯ್‌ ಅವರ ಮೊದಲ ಪತ್ನಿ ನಾಗರತ್ನ ಅವರೊಂದಿಗಿನ ದಾಂಪತ್ಯ ಅಂತ್ಯಗೊಂಡ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ. ಈ ಎಲ್ಲ ಚರ್ಚೆಗಳಿಗೆ ತೆರೆ ಎಳೆಯುವ ರೀತಿಯಲ್ಲಿ ವಿಜಯ್‌ಕುಮಾರ್‌ ಅವರ ವಿಚ್ಛೇದಿತ ಪತ್ನಿ ನಾಗರತ್ನ ಅವರು ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪತ್ರವೊಂದನ್ನು ಹಂಚಿಕೊಂಡಿದ್ದಾರೆ.

ಮಕ್ಕಳ ಭವಿಷ್ಯಕ್ಕಾಗಿ ತಮಗಾದ ಎಲ್ಲ ನೋವುಗಳನ್ನು ಸಹಿಸಿಕೊಂಡಿದ್ದಾಗಿ ಹೇಳಿರುವ ಅವರು, ಮುಂದಿನ ದಿನಗಳಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ವಿಜಯ್‌ಕುಮಾರ್‌ ಅವರಿಗೆ ಮುಂದಿನ ಜೀವನದಲ್ಲಿ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.

‘ಎಲ್ಲ ಪ್ರೀತಿಯ ಜನತೆಗೆ ಹಾಗೂ ಮಾಧ್ಯಮದವರಿಗೆ ನನ್ನ ನಮಸ್ಕಾರಗಳು…’ ಎಂದು ಪತ್ರ ಆರಂಭಿಸಿರುವ ನಾಗರತ್ನ, ಇಷ್ಟು ವರ್ಷಗಳ ಕಾಲ ಮಕ್ಕಳಿಗಾಗಿ ಹಾಗೂ ಅವರ ಭವಿಷ್ಯದ ಒಳಿತಿಗಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದೇನೆ. ಮದುವೆಯನ್ನು ಉಳಿಸಿಕೊಳ್ಳುವ ಆಶಯದಿಂದ ವಿಚ್ಛೇದನವನ್ನು ವಿರೋಧಿಸುತ್ತಲೇ ಬಂದಿದ್ದೆ ಎಂದು ತಿಳಿಸಿದ್ದಾರೆ.

ಆದರೆ ಅದು ಸುಲಭವಾಗಿರಲಿಲ್ಲ. ಅಂತಿಮವಾಗಿ ನ್ಯಾಯಾಲಯ ವಿಚ್ಛೇದನ ಮಂಜೂರು ಮಾಡಿದೆ ಎಂದು ಹೇಳಿದ್ದಾರೆ.

‘ನಮ್ಮ ಮದುವೆಯ ಹೊರಗೆ ಆಯ್ಕೆ ಮಾಡಿಕೊಂಡ ಅನೈತಿಕ ಸಂಬಂಧವನ್ನು ಕಾನೂನುಬದ್ಧವಾಗಿ ಅಧಿಕೃತಗೊಳಿಸುವುದೇ ಈ ದೀರ್ಘ ಹೋರಾಟದ ಉದ್ದೇಶವಾಗಿದ್ದರೆ, ಕೊನೆಗೂ ಆ ಉದ್ದೇಶ ಈಡೇರಿದೆ’ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ತಾವು ಅನುಭವಿಸಿದ ‘ನಾರ್ಸಿಸಿಸ್ಟಿಕ್‌ ಅಬ್ಯೂಸ್‌’ ಹಾಗೂ ಅದರಿಂದಾದ ನೋವು ಮತ್ತು ಪರಿಣಾಮಗಳನ್ನು ಸಹಿಸಿಕೊಂಡಿದ್ದೇನೆ ಎಂದು ಹೇಳಿರುವ ಅವರು, ಹೊರಗಿನಿಂದ ಯಾರಿಗೂ ಕಾಣದಂತಹ ಆಳವಾದ ಮಾನಸಿಕ ಹಾಗೂ ಭಾವನಾತ್ಮಕ ನೋವನ್ನು ಒಳಗೇ ಇಟ್ಟುಕೊಂಡು ಬದುಕುವುದು ಹೇಗಿರುತ್ತದೆ ಎಂಬುದು ನನಗೆ ಮಾತ್ರ ಗೊತ್ತು ಎಂದಿದ್ದಾರೆ.

ತಮ್ಮ ಅನುಭವವನ್ನು ಒಂದು ದಿನ ಖಂಡಿತವಾಗಿಯೂ ಹಂಚಿಕೊಳ್ಳಲು ಬಯಸುತ್ತೇನೆ. ಯಾರ ಮೇಲೂ ಆರೋಪ ಹೊರಿಸುವುದು ತಮ್ಮ ಉದ್ದೇಶವಲ್ಲ. ಇಂತಹ ಪರಿಸ್ಥಿತಿಯಲ್ಲಿರುವ ಮಹಿಳೆಯರಿಗೆ ತಾವು ಒಂಟಿಯಲ್ಲ ಎಂಬ ಅರಿವು ಮೂಡಿಸುವುದೇ ಉದ್ದೇಶ ಎಂದು ತಿಳಿಸಿದ್ದಾರೆ.

‘ನನ್ನ ಮಕ್ಕಳ ಭವಿಷ್ಯವೇ ಯಾವಾಗಲೂ ನನ್ನ ಮೊದಲ ಆದ್ಯತೆಯಾಗಿತ್ತು. ಇಂದಿಗೂ ಅದೇ ನನ್ನ ಮೊದಲ ಆದ್ಯತೆ. ಅವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ ನನ್ನ ವೈಯಕ್ತಿಕ ನೋವುಗಳು ಅದರ ಮೇಲೆ ನೆರಳು ಬೀಳುವುದು ನನಗೆ ಇಷ್ಟವಿಲ್ಲ. ಆದ್ದರಿಂದ ಇಂದು ನಾನು ಮೌನವಾಗಿರಲು ಆಯ್ಕೆ ಮಾಡಿಕೊಂಡಿದ್ದೇನೆ. ಎಲ್ಲದಕ್ಕೂ ಒಂದು ಸರಿಯಾದ ಸಮಯವಿದೆ. ಒಂದು ದಿನ ನನ್ನ ಅನುಭವವನ್ನು ನನ್ನದೇ ಮಾತುಗಳಲ್ಲಿ ಹಂಚಿಕೊಳ್ಳುತ್ತೇನೆ’ ಎಂದು ನಾಗರತ್ನ ಹೇಳಿದ್ದಾರೆ.

ತಮ್ಮ ಮೂವರು ಮಕ್ಕಳು ಯಾವಾಗಲೂ ತಮ್ಮ ಶಕ್ತಿಯಾಗಿ ತಮ್ಮೊಂದಿಗೆ ನಿಂತಿದ್ದಾರೆ ಎಂದು ಹೇಳಿರುವ ಅವರು, ‘ನಿಮ್ಮೆಲ್ಲರ ಆಶೀರ್ವಾದ ನನ್ನ ಮೂವರು ಮಕ್ಕಳ ಮೇಲಿದ್ದರೆ ನನಗೆ ಅಷ್ಟೇ ಸಾಕು’ ಎಂದು ತಿಳಿಸಿದ್ದಾರೆ.

ವಿಜಯ್‌ಕುಮಾರ್‌ ಅವರು ತಮ್ಮ ಜೀವನದಲ್ಲಿ ಸಂತೋಷವಾಗಿರಲಿ ಎಂದು ಹಾರೈಸಿರುವ ನಾಗರತ್ನ, ‘ಉಳಿದದ್ದನ್ನು ಕಾಲಕ್ಕೂ ಕರ್ಮಕ್ಕೂ ಬಿಡುತ್ತೇನೆ’ ಎಂದು ಹೇಳುವ ಮೂಲಕ ತಮ್ಮ ಭಾವನಾತ್ಮಕ ಪತ್ರವನ್ನು ಮುಗಿಸಿದ್ದಾರೆ.

ನಾಗರತ್ನ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿಲ್ಲ. ಬದಲಾಗಿ ತಮ್ಮ ಪುತ್ರಿ ಮೋನಿಷಾ ವಿಜಯ್‌ಕುಮಾರ್‌ ಅವರ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಈ ಪತ್ರವನ್ನು ಹಂಚಿಕೊಂಡಿದ್ದಾರೆ.

RELATED ARTICLES
spot_img

Latest News