ಶ್ರೀನಗರ, ಸೆ.5- ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭಾರತೀಯ ಸೇನೆ ಹಾಗೂ ಜಮ್ಮು-ಕಾಶ್ಮೀರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಓರ್ವ ಭಯೋತ್ಪಾದಕ ಹತನಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪುಲ್ವಾಮಾ ಜಿಲ್ಲೆಯ ಪಖೇರ್ಪೋರಾದಿಂದ ಬುಡ್ಗಾಮ್ನ ಯೂಸ್ಮಾರ್ಗ್ ಕಡೆಗೆ ಶಂಕಿತ ಭಯೋತ್ಪಾದಕರ ಗುಂಪು ತೆರಳುತ್ತಿರುವ ಕುರಿತು ದೊರೆತ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಯಿತು.
ಶ್ರೀನಗರ ಮೂಲದ ಚಿನಾರ್ ಕಾರ್ಪ್ಸ್ ‘ಎಕ್ಸ್’ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ ಭಾರತೀಯ ಸೇನೆ, ಜಮ್ಮು-ಕಾಶ್ಮೀರ ಪೊಲೀಸರು ಹಾಗೂ ಸಿಆರ್ಪಿಎಫ್ ಜಂಟಿಯಾಗಿ ಬುಡ್ಗಾಮ್ನ ಅಶ್ದರ್ ಗಾಲಿಯಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ್ದವು ಎಂದು ತಿಳಿಸಿದೆ.
ಕಾರ್ಯಾಚರಣೆ ವೇಳೆ ಅನುಮಾನಾಸ್ಪದ ಚಟುವಟಿಕೆ ಗಮನಿಸಿದ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರಿದಾಗ, ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಭಯೋತ್ಪಾದಕ ಹತನಾಗಿದ್ದಾನೆ. ಸ್ಥಳದಿಂದ ಒಂದು ಎಕೆ ರೈಫಲ್ ವಶಪಡಿಸಿಕೊಳ್ಳಲಾಗಿದೆ.
ಈ ಪ್ರದೇಶದಲ್ಲಿ ಮತ್ತೊಬ್ಬ ಭಯೋತ್ಪಾದಕ ಅಡಗಿಕೊಂಡಿರುವ ಶಂಕೆ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಹತನಾದ ಭಯೋತ್ಪಾದಕನ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಣಿವೆಯಲ್ಲಿ ಹಲವು ತಿಂಗಳುಗಳಿಂದ ಯಾವುದೇ ಪ್ರಮುಖ ಭಯೋತ್ಪಾದಕ ಚಟುವಟಿಕೆ ವರದಿಯಾಗಿರಲಿಲ್ಲ. ಇದೀಗ ನಡೆದಿರುವ ಈ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಿವೆ.
