Homeಅಂತಾರಾಷ್ಟ್ರೀಯನ.27ನ್ನು ಬಾಲ್ಯ ವಿವಾಹ ವಿರೋಧಿ ಜಾಗತಿಕ ದಿನಾಚರಣೆಯಾಗಿ ಘೋಷಿಸಿದ ವಿಶ್ವಸಂಸ್ಥೆ

ನ.27ನ್ನು ಬಾಲ್ಯ ವಿವಾಹ ವಿರೋಧಿ ಜಾಗತಿಕ ದಿನಾಚರಣೆಯಾಗಿ ಘೋಷಿಸಿದ ವಿಶ್ವಸಂಸ್ಥೆ

ನವದೆಹಲಿ/ನ್ಯೂಯಾರ್ಕ್‌, ಸೆ.5- ಬಾಲಕಿಯರ ಹಕ್ಕುಗಳ ರಕ್ಷಣೆ ಹಾಗೂ ಬಾಲ್ಯ ವಿವಾಹದ ಪಿಡುಗನ್ನು ಜಗತ್ತಿನಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ನವೆಂಬರ್‌ 27 ಅನ್ನು ಅಂತಾರಾಷ್ಟ್ರೀಯ ಬಾಲ್ಯ ವಿವಾಹ ವಿರೋಧಿ ದಿನ ಎಂದು ಅಧಿಕೃತವಾಗಿ ಘೋಷಿಸಿದೆ.

ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಮಂಡಿಸಲಾದ ಈ ಐತಿಹಾಸಿಕ ನಿರ್ಣಯಕ್ಕೆ ಜಾಗತಿಕ ಸಮುದಾಯದ ಸರ್ವಾನುಮತದ ಬೆಂಬಲ ದೊರೆತಿದ್ದು, ಮಕ್ಕಳ ಹಕ್ಕುಗಳ ರಕ್ಷಣೆಯ ಹೋರಾಟದಲ್ಲಿ ಇದೊಂದು ಮಹತ್ವದ ತಿರುವು ಎಂದು ಪರಿಗಣಿಸಲಾಗಿದೆ.

ಸಿಯೆರಾ ಲಿಯೋನ್‌ನ ಪ್ರಥಮ ಮಹಿಳೆ ಡಾ. ಫಾತಿಮಾ ಮಾಡ ಬಯೋ ಅವರ ನೇತೃತ್ವದಲ್ಲಿ ಹಾಗೂ ವಿವಿಧ ಮಕ್ಕಳ ಹಕ್ಕುಗಳ ಸಂಘಟನೆಗಳ ದೀರ್ಘಕಾಲದ ಹೋರಾಟದ ಫಲವಾಗಿ ಈ ದಿನ ಅಸ್ತಿತ್ವಕ್ಕೆ ಬಂದಿದೆ. ಬಾಲ್ಯ ವಿವಾಹ ಕೇವಲ ಸಾಮಾಜಿಕ ಪಿಡುಗು ಮಾತ್ರವಲ್ಲ, ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆಯೂ ಆಗಿದ್ದು, ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗೆ ದೊಡ್ಡ ಅಡ್ಡಿಯಾಗಿದೆ ಎಂದು ವಿಶ್ವಸಂಸ್ಥೆ ತನ್ನ ನಿರ್ಣಯದಲ್ಲಿ ಸ್ಪಷ್ಟಪಡಿಸಿದೆ.

ಭಾರತದಲ್ಲೂ ಅಭಿಯಾನ

ಭಾರತದಲ್ಲೂ ಬಾಲ್ಯ ವಿವಾಹದ ವಿರುದ್ಧದ ಹೋರಾಟ ತೀವ್ರಗೊಂಡಿದೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಆರಂಭಿಸಿರುವ ‘ಬಾಲ್ಯ ವಿವಾಹ ಮುಕ್ತ ಭಾರತ’ ಅಭಿಯಾನ ದೇಶಾದ್ಯಂತ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದೆ.

ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಮಕ್ಕಳ ವಿವಾಹ ಕಾನೂನುಬಾಹಿರವಾಗಿದ್ದು, ಇಂತಹ ವಿವಾಹಗಳನ್ನು ತಡೆಯಲು ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಭಾರತೀಯ ನ್ಯಾಯ ಸಂಹಿತೆ ಹಾಗೂ ಪೋಕ್ಸೊ ಕಾಯ್ದೆಗಳ ಅಡಿಯಲ್ಲಿ ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ಗಂಭೀರ ಅಪರಾಧವೆಂದು ಪರಿಗಣಿಸಿ ಕಠಿಣ ಶಿಕ್ಷೆಗೆ ಅವಕಾಶ ಕಲ್ಪಿಸಲಾಗಿದೆ.

ಆದರೆ ಕಾನೂನುಗಳು ಕಠಿಣವಾಗಿದ್ದರೂ ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಅಜ್ಞಾನ, ಬಡತನ ಮತ್ತು ಸಾಂಪ್ರದಾಯಿಕ ನಂಬಿಕೆಗಳ ಕಾರಣದಿಂದ ಬಾಲ್ಯ ವಿವಾಹಗಳು ಸಂಪೂರ್ಣವಾಗಿ ನಿಂತಿಲ್ಲ.ವಿಶ್ವಸಂಸ್ಥೆ ನವೆಂಬರ್‌ 27 ಅನ್ನು ನಿರ್ದಿಷ್ಟ ದಿನವನ್ನಾಗಿ ಘೋಷಿಸಿರುವುದರಿಂದ, ಪ್ರತಿವರ್ಷ ಜಾಗತಿಕ ಮಟ್ಟದಲ್ಲಿ ಬಾಲ್ಯ ವಿವಾಹದ ವಿರುದ್ಧ ಜಾಗೃತಿ ಮೂಡಿಸಲು, ಸರ್ಕಾರಗಳನ್ನು ಹೊಣೆಗಾರರನ್ನಾಗಿಸಲು ಹಾಗೂ ಬಾಲಕಿಯರ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲು ಬಲವಾದ ವೇದಿಕೆ ದೊರೆತಂತಾಗಿದೆ.

ಭಾರತದಲ್ಲಿ ಬದಲಾಗುತ್ತಿರುವ ಚಿತ್ರ

ಕಳೆದ ಕೆಲವು ದಶಕಗಳ ಬೆಳವಣಿಗೆಯನ್ನು ಗಮನಿಸಿದರೆ ಭಾರತದಲ್ಲಿ ಬಾಲ್ಯ ವಿವಾಹದ ಪ್ರಮಾಣ ಇಳಿಕೆಯಾಗುತ್ತಿರುವುದು ಗೋಚರಿಸುತ್ತದೆ. ಹೆಣ್ಣುಮಕ್ಕಳ ಶಿಕ್ಷಣದ ವಿಸ್ತರಣೆ, ತಾಯಂದಿರ ಸಾಕ್ಷರತೆ ಹೆಚ್ಚಳ, ನಗರೀಕರಣ, ಸರ್ಕಾರಿ ಯೋಜನೆಗಳು, ಕಾನೂನು ಜಾರಿ ಮತ್ತು ಸಾರ್ವಜನಿಕ ಜಾಗೃತಿ ಇದಕ್ಕೆ ಪ್ರಮುಖ ಕಾರಣಗಳಾಗಿವೆ.

ಆದರೆ ರಾಜ್ಯವಾರು ಪರಿಸ್ಥಿತಿ ಒಂದೇ ರೀತಿಯಲ್ಲ. ಹಿಂದಿನ ವಿಶ್ಲೇಷಣೆಗಳ ಪ್ರಕಾರ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳಲ್ಲಿ ಬಾಲ್ಯ ವಿವಾಹದ ಪ್ರಮಾಣ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶಗಳು, ಬಡ ಕುಟುಂಬಗಳು ಹಾಗೂ ಕಡಿಮೆ ಶಿಕ್ಷಣ ಪಡೆದ ಸಮುದಾಯಗಳಲ್ಲಿ ಬಾಲ್ಯ ವಿವಾಹದ ಅಪಾಯ ಇನ್ನೂ ಹೆಚ್ಚಾಗಿದೆ.

ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವ ಈ ಪಿಡುಗಿನ ವಿರುದ್ಧ ಕೇವಲ ಕಾನೂನು ಕ್ರಮಗಳಷ್ಟೇ ಸಾಕಾಗುವುದಿಲ್ಲ. ಕುಟುಂಬ, ಸಮುದಾಯ, ಶಿಕ್ಷಣ ಸಂಸ್ಥೆಗಳು, ಸರ್ಕಾರಗಳು ಹಾಗೂ ನಾಗರಿಕ ಸಮಾಜ ಒಟ್ಟಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಬಾಲ್ಯ ವಿವಾಹವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯ ಎಂಬ ಸಂದೇಶವನ್ನು ವಿಶ್ವಸಂಸ್ಥೆಯ ಈ ನಿರ್ಣಯ ಮತ್ತಷ್ಟು ಬಲಪಡಿಸಿದೆ.

RELATED ARTICLES
spot_img

Latest News