Thursday, April 16, 2026
Homeರಾಜಕೀಯವಿಧಾನಸಭೆಯಲ್ಲಿ 'ಗೃಹಲಕ್ಷ್ಮಿ' ಗಲಾಟೆ, ಆಡಳಿತ-ಪ್ರತಿಪಕ್ಷಗಳ ನಡುವೆ ಭಾರಿ ವಾಗ್ವಾದ

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗಲಾಟೆ, ಆಡಳಿತ-ಪ್ರತಿಪಕ್ಷಗಳ ನಡುವೆ ಭಾರಿ ವಾಗ್ವಾದ

'Grihalakshmi' row in the Assembly, huge argument between the ruling and opposition

ಬೆಳಗಾವಿ, ಡಿ.17- ರಾಜ್ಯದಲ್ಲಿ ಗೃಹಲಕ್ಷಿ ಫಲಾನುಭವಿಗಳಿಗೆ ಹಣ ಪಾವತಿಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷೀ ಹೆಬ್ಬಾಳ್ಕರ್‌ ಅವರು ಸದನಕ್ಕೆ ತಪ್ಪು ಮಾಹಿತಿ ನೀಡಿ ಅಗೌರವ ತೋರಿದ್ದಾರೆ ಎಂದು ಆರೋಪಿಸಿ ಬಿಜೆಪಿ ಶಾಸಕರು ಮಾಡಿದ ಆರೋಪ ವಿಧಾನಸಭೆಯಲ್ಲಿಂದು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದಕ್ಕೆ ಎಡೆ ಮಾಡಿಕೊಟ್ಟು, ಸದನವನ್ನು ಕೆಲಕಾಲ ಮುಂದೂಡಿದ ಪ್ರಸಂಗ ವಿಧಾನಸಭೆಯಲ್ಲಿಂದು ನಡೆಯಿತು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಸದನಕ್ಕೆ ಆಗಮಿಸಿ ನೀಡಿರುವ ಉತ್ತರದ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಪಟ್ಟುಹಿಡಿದು ಬಿಜೆಪಿ ಸದಸ್ಯರು ಆಗ್ರಹಿಸಿದರಲ್ಲದೆ ಧರಣಿ ನಡೆಸಲು ಮುಂದಾದರು. ಆಡಳಿತ ಮತ್ತು ಬಿಜೆಪಿ ಶಾಸಕರ ನಡುವೆ ಮಾತಿನ ಚಕಮಕಿ, ವಾಗ್ವಾದ ಮುಂದುವರಯುತ್ತಿರುವುದನ್ನು ಗಮನಿಸಿದ ಸಭಾಧ್ಯಕ್ಷ ಯು.ಟಿ.ಖಾದರ್‌ ಅವರು ಕೆಲಕಾಲ ಸದನದ ಕಲಾಪಗಳನ್ನು ಮುಂದೂಡಿದರು.

ಇಂದು ಬೆಳಗ್ಗೆ ನಿಗದಿತ ಸಮಯಕ್ಕಿಂತ ಸುಮಾರು ಒಂದೂವರೆ ಗಂಟೆ ತಡವಾಗಿ ಸದನ ಆರಂಭವಾದಾಗ, ಬಿಜೆಪಿ ಶಾಸಕರು ಜೈ ಶ್ರೀರಾಮ್‌ ಎಂಬ ಘೋಷಣೆ ಕೂಗಿದರು. ತಡವಾಗಿ ಆರಂಭವಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಬಳಿಕ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಮಾತನಾಡಿ, ಕಳೆದ ಮೂರು ದಿನಗಳಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಸದನದಲ್ಲಿ ಕಾಣುತ್ತಿಲ್ಲ. ಗೃಹಲಕ್ಷ್ಮಿ ಹಣವನ್ನು ಫಲಾನುಭವಿಗಳಿಗೆ ಪಾವತಿ ಮಾಡಿರುವ ವಿಚಾರದಲ್ಲಿ ಸದನದಲ್ಲಿ ತಪ್ಪು ಮಾಹಿತಿ ಕೊಟ್ಟಿದ್ದಾರೆ. ಈ ವಿಚಾರವನ್ನು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಲು ನೋಟೀಸ್‌‍ ನೀಡಲಾಗಿತ್ತು. ಮೂರು ದಿನಗಳಿಂದ ಚರ್ಚೆಯಾಗುತ್ತಿದೆ. ಅವರು ಸದನದಲ್ಲಿ ಕಾಣುತ್ತಿಲ್ಲ. ಅವರು ಚಂದ್ರಲೋಕದಲ್ಲಿದ್ದಾರೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವರು ಉತ್ತರ ನೀಡುವಾಗ ನಾವು ಸ್ಪಷ್ಟನೆ ಕೇಳಿದಾಗಲೂ ಫೆಬ್ರವರಿ ತಿಂಗಳ ಹಣ ಕೊಟ್ಟಿದ್ದೇವೆ ಎಂದೇ ಹೇಳಿದ್ದಾರೆ. ಸಚಿವರಾದವರೂ ಅಧಿಕಾರಿಗಳ ಬಳಿ ಸರಿಯಾದ ಮಾಹಿತಿ ಪಡೆದು ಸೂಕ್ತ ಉತ್ತರ ಕೊಡಬೇಕಲ್ಲವೇ? ಸಚಿವರು ನೀಡುವ ಉತ್ತರವನ್ನು ಸತ್ಯವೆಂದೇ ಭಾವಿಸುತ್ತೇವೆ. ಈ ರೀತಿ ಆಗುವುದಾದರೆ ಮಂತ್ರಿಗಳು ಹೇಳುವುದೇ ಸುಳ್ಳೇ ಸುಳ್ಳು ಎಂದಾಗುತ್ತದೆ ಎಂದರು.

ಇದಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರಾದ ಡಾ.ಅಶ್ವತ್ಥನಾರಾಯಣ, ಆರಗ ಜ್ಞಾನೇಂದ್ರ, ಪ್ರಭು ಚವ್ಹಾಣ್‌, ಸುನೀಲ್‌ಕುಮಾರ್‌ ಮೊದಲಾದವರು ಪ್ರತಿಯಾಗಿ ಆಕ್ಷೇಪಿಸಿ ಮಾತನಾಡಲು ಮುಂದಾದಾಗ ಸದನದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಸಚಿವ ಪ್ರಿಯಾಂಕ್‌ ಖರ್ಗೆ ಮಾತನಾಡಿ, ಜವಾಬ್ದಾರಿ ನಮದೂ ಇದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವರು ಸದನಕ್ಕೆ ಉತ್ತರ ನೀಡಿರುವುದು ಮುಖ್ಯಮಂತ್ರಿಗಳ ಗಮನಕ್ಕೆ ಬಂದಾಗ ಅವರು ಸ್ಪಷ್ಟನೆ ನೀಡಿದ್ದಾರೆ. ಫೆಬ್ರವರಿ ಮತ್ತು ಮಾರ್ಚ್‌ ತಿಂಗಳ ಹಣ ಪಾವತಿಯಾಗದಿದ್ದರೆ ಆ ಹಣವನ್ನು ಫಲಾನುಭವಿಗಳಿಗೆ ಪಾವತಿಸುವ ಭರವಸೆಯನ್ನು ನೀಡಿದ್ದಾರೆ. ಸದನವನ್ನು ತಪ್ಪು ದಾರಿಗೆ ಎಳೆಯುವ ಯಾವ ಉದ್ದೇಶವೂ ಮಂತ್ರಿಗಳಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದಕ್ಕೆ ತೃಪ್ತರಾಗದ ಬಿಜೆಪಿ ಸದಸ್ಯರು ಇದಕ್ಕೆ ಸಂಬಂಧಪಟ್ಟ ಸಚಿವರು ಸದನಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದರು.

ಸದಸ್ಯ ಸುರೇಶ್‌ಕುಮಾರ್‌ ಮಾತನಾಡಿ, ಸುಳ್ಳು ಹೇಳುವ ಉದ್ದೇಶ ಸಚಿವರಿಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಗೃಹಲಕ್ಷ್ಮಿ ಹಣವನ್ನು ಚುನಾವಣೆಯ ಹಿಂದಿನ ದಿನ ಫಲಾನುಭವಿಗಳಿಗೆ ಖಾತೆಗೆ ಜಮೆ ಮಾಡುತ್ತಾರೆ. ಅದೇ ರೀತಿ ಅಧಿವೇಶನದ ಕೊನೆಯ ದಿನ ಉತ್ತರ ಕೊಡುತ್ತಾರೆ. ಫಲಾನುಭವಿಗಳಿಗೆ ಗೃಹಲಕ್ಷ್ಮಿಯ ಹಣವೂ ಬರುವುದಿಲ್ಲ. ಸದನದಲ್ಲಿ ನಮಗೆ ಉತ್ತರವೂ ಬರುವುದಿಲ್ಲ ಎಂದು ವ್ಯಂಗ್ಯವಾಡಿದರು.

ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಯು.ಟಿ.ಖಾದರ್‌ ಅವರು, ಸದನಕ್ಕೆ ತಪ್ಪು ಮಾಹಿತಿ ಕೊಟ್ಟಿದ್ದಾರೆಂದು ಆಕ್ಷೇಪ ಮಾಡುತ್ತೀರಿ. ಸಂಬಂಧಪಟ್ಟ ಸಚಿವರನ್ನು ಕರೆದು ಮಾತನಾಡಿ ಸೂಕ್ತ ಉತ್ತರ ಕೊಡಿಸುವುದಾಗಿ ಭರವಸೆ ನೀಡಿ, ಪ್ರಶ್ನೋತ್ತರ ಕಲಾಪ ನಡೆಸಲು ಸಹಕರಿಸಿ ಎಂದರು.
ಬಿಜೆಪಿ ಸದಸ್ಯ ಸುನೀಲ್‌ಕುಮಾರ್‌ ಮಾತನಾಡಿ, ಇದೇ ವಿಚಾರ ಮೂರು ದಿನದಿಂದ ಚರ್ಚೆಯಾಗುತ್ತಿದೆ. ಇದು ಕೇವಲ ಹಣದ ವಿಚಾರವಲ್ಲ. ಸದನಕ್ಕೆ ತಪ್ಪು ಮಾಹಿತಿ ಕೊಟ್ಟಿದ್ದಾರೆ. ಆ ರೀತಿ ತಪ್ಪು ಮಾಹಿತಿ ಕೊಟ್ಟವರನ್ನು ಕರೆಸಿ ಸ್ಪಷ್ಟಪಡಿಸಿದ ನಂತರವೇ ಸದನ ನಡೆಸಿ. ಅಲ್ಲಿಯವರೆಗೂ ನಾವು ಪ್ರಶ್ನೋತ್ತರ ನಡೆಯಲು ಸಹಕರಿಸುವುದಿಲ್ಲ? ಮೂರು ದಿನದಿಂದ ಎಲ್ಲಿ ಹೋಗಿದ್ದಾರೆ? ಎಂದು ಪ್ರಶ್ನಿಸಿದರು.

ಸದಸ್ಯ ಬಸವನಗೌಡ ಪಾಟೀಲ್‌ ಯತ್ನಾಳ್‌ ಮಾತನಾಡಿ, ಸಚಿವರು ಬೇಕಾದ ರೀತಿ ಉತ್ತರ ನೀಡುತ್ತಾರೆ ಎಂದರೆ ಹೇಗೆ? ಎಂದು ಪ್ರಶ್ನೆ ಮಾಡಿದರು. ಮತ್ತೆ ಅಶೋಕ್‌ ಮಾತನಾಡಿ, ಈ ಚಳಿಗಾಲದ ಅಧಿವೇಶನದಲ್ಲಿ ವಿಧೇಯಕಗಳ ಮಂಡನೆ, ಚರ್ಚೆ, ಅನುಮೋದನೆಗೆ ಸಹಕರಿಸಿದ್ದೇವೆ.

ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದಿದೆ. ಮುಖ್ಯಮಂತ್ರಿಗಳು ಫೆಬ್ರವರಿ ಮತ್ತು ಮಾರ್ಚ್‌ ತಿಂಗಳ ಹಣ ಪಾವತಿಯಾಗದಿದ್ದರೆ ಕೊಡಿಸುವುದಾಗಿ ಹೇಳಿದ್ದಾರೆ. ಆದರೆ ಸಚಿವರು ಸದನಕ್ಕೆ ತಪ್ಪು ಉತ್ತರ ನೀಡುವ ಮೂಲಕ ಅಗೌರವ ತೋರಿದ್ದಾರೆ. ಒಂದು ಕೋಟಿ 20 ಲಕ್ಷ ಜನರಿಗೆ ಸಂಬಂಧಿಸಿದ ವಿಚಾರವಿದು. ಅವರ ಖಾತೆಗಳಿಗೆ ಫೆಬ್ರವರಿ ಮತ್ತು ಮಾರ್ಚ್‌ ತಿಂಗಳ ಹಣ ಪಾವತಿಯಾಗಿಲ್ಲ. ಎರಡು ತಿಂಗಳು ಬಿಟ್ಟು ಮುಂದಿನ ತಿಂಗಳ ಹಣವನ್ನು ಕೊಟ್ಟಿರುವುದು ಇತಿಹಾಸದಲ್ಲಿ ನಡೆದಿರುವುದಿಲ್ಲ. ಮೋಸ ಮಾಡಲು ಈ ರೀತಿ ಮಾಡಿದ್ದಾರೆಯೇ? ಆ ಹಣ ಸ್ವಂತಕ್ಕೆ ಬಳಸಿದ್ದಾರೆಯೇ? ಪಕ್ಷಕ್ಕೆ ಕೊಟ್ಟಿದ್ದಾರೆಯೇ? ಅಥವಾ ಖಜಾನೆ ಖಾಲಿಯಾಗಿದೆಯೇ? ಎಂದು ಅವರು ಪ್ರಶ್ನಿಸಿದರು.

ಆಗ ಕೃಷಿ ಸಚಿವ ಚಲುವರಾಯಸ್ವಾಮಿ ಆಕ್ಷೇಪವೆತ್ತಿ ಮಾತನಾಡಲು ಮುಂದಾದಾಗ, ಆಡಳಿತ ಮತ್ತು ಬಿಜೆಪಿ ಶಾಸಕರ ನಡುವೆ ಏರಿದ ದನಿಯಲ್ಲಿ ಮಾತಿನ ಚಕಮಕಿ ನಡೆದು ಸದನ ಗೊಂದಲ, ಗದ್ದಲದ ಗೂಡಾಯಿತು.

ಸಭಾಧ್ಯಕ್ಷರು ಪ್ರಶ್ನೋತ್ತರ ಕಲಾಪಕ್ಕೆ ಸಹಕರಿಸುವಂತೆ ಮನವಿ ಮಾಡುತ್ತಿದ್ದಂತೆ ಬಿಜೆಪಿ ಶಾಸಕರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗಿಳಿದು ಧರಣಿ ನಡೆಸಲು ಮುಂದಾದರು. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಅರಿತ ಸಭಾಧ್ಯಕ್ಷರು ಸದನದ ಕಲಾಪವನ್ನು ಕೆಲಕಾಲ ಮುಂದೂಡಿದರು.

RELATED ARTICLES

Latest News