ಚಿಕ್ಕಮಗಳೂರು,ಮಾ.21- ಎಲೆಕ್ಟೊರಲ್ ಬಾಂಡ್‍ಗಳು ದೇಶದಲ್ಲಿಯೇ ಅತ್ಯಂತ ದೊಡ್ಡ ಭ್ರಷ್ಟಾಚಾರವಾಗಿದ್ದು, ಸಂಪೂರ್ಣ ಮಾಹಿತಿ ಹೊರಬಂದ ಬಳಿಕ ನಾನೂ ತಿನ್ನುವುದಿಲ್ಲ, ತಿನ್ನಲೂ ಬಿಡುವುದಿಲ್ಲ ಎಂದು ಹೇಳಿಕೊಳ್ಳುತ್ತಿದ್ದವರ ಬಣ್ಣ ಬಯಲಾಗಲಿದೆ ಎಂದು ಕಾಂಗ್ರೆಸ್ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದ್ದಾರೆ.
ಕಾರ್ಯಕರ್ತರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ದೇಶದ ಜನರ ಭಾವನೆಗಳಿಗೆ ಸ್ಪಂದಿಸಿ ಎಲೆಕ್ಟೊರಲ್ ಬಾಂಡ್ ಪ್ರಕರಣದಲ್ಲಿ ಆದೇಶಗಳನ್ನು ನೀಡುತ್ತಿದೆ, ವಾದ ಮಂಡಿಸುತ್ತಿರುವ ಹಿರಿಯ ವಕೀಲ ಪ್ರಶಾಂತ್ ಭೂಷಣ್‍ರವರು ಸಂಗ್ರಹವಾದ ದೇಣಿಗೆಯಲ್ಲಿ ಶೇ.90 ರಷ್ಟು ಪಾಲು ಒಂದೇ ಪಕ್ಷಕ್ಕೆ ಸೇರಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಲೆಕ್ಟೊರಲ್ ಬಾಂಡ್‍ಗಳ ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸದೆ, ಮೀನಾಮೇಷ ಎಣಿಸುತ್ತಿರುವುದು ಅನುಮಾನಗಳನ್ನು ಹುಟ್ಟಿಹಾಕಿದೆ ಎಂದು ಹೇಳಿದರು.
ಬಿಜೆಪಿಗೆ ದೇಣಿಗೆ ನೀಡಿರುವ 30 ಕಾರ್ಪೊರೇಟ್ ಸಂಸ್ಥೆಗಳ ಪೈಕಿ 14 ಕಂಪನಿಗಳ ಮೇಲೆ ಒಂದು ಅಥವಾ ಒಂದೂವರೆ ತಿಂಗಳ ಹಿಂದೆ ಸಿಬಿಐ, ಇಡಿ ಅಥವಾ ಜಾರಿ ನಿರ್ದೇಶನಾಲಯದ ದಾಳಿಗಳಾಗಿರುವುದು ಸ್ಪಷ್ಟವಾಗಿದೆ. 40 ಜನರ ಸಾವಿಗೆ ಕಾರಣವಾಗುವಂತಹ ಕಳಪೆ ಕಾಮಗಾರಿ ಮಾಡಿದ ಸಂಸ್ಥೆಯಿಂದ ತಮಿಳುನಾಡಿನಲ್ಲಿ ಜೀವರಕ್ಷಕ ಔಷಧಿಗಳನ್ನು ಕಳಪೆ ಗುಣಮಟ್ಟದಲ್ಲಿ ತಯಾರಿಸುತ್ತಿದ್ದ ಸಂಸ್ಥೆಯಿಂದಲೂ ದೇಣಿಗೆ ಪಡೆಯಲಾಗಿದೆ. ಮತ್ತೊಂದು ಆತಂಕಕಾರಿ ಎಂದರೆ ಪಾಕಿಸ್ತಾನದ ಸಂಸ್ಥೆಗೂ ಎಲೆಕ್ಟೊರಲ್ ಬಾಂಡ್‍ಗಳನ್ನು ಮಾರಾಟ ಮಾಡಲಾಗಿದೆ.
ಈ ಹಿಂದೆ ವಿದೇಶಿ ಸಂಸ್ಥೆಗಳಿಂದ ಹಣ ಪಡೆಯಲು ಅವಕಾಶವಿರಲಿಲ್ಲ. 2017 ರಲ್ಲಿ ಕಾನೂನು ತಿದ್ದುಪಡಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಲೋಕಸಭಾ ಚುನಾವಣೆಗೆ ಚಿಕ್ಕಮಗಳೂರು-ಉಡುಪಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯ ಘೋಷಣೆಯಾಗುವವರೆಗೂ ನಾನೂ ಕೂಡ ಆಕಾಂಕ್ಷಿಯಾಗಿರುತ್ತೇನೆ. ಇದು ನಮ್ಮ ಆಂತರಿಕ ಪ್ರಜಾಪ್ರಭುತ್ವ. ಬಿಜೆಪಿಯಲ್ಲಿ ಪ್ರಬಲ ಆಕಾಂಕ್ಷಿಗಳಾಗಿದ್ದ ಸಿ.ಟಿ.ರವಿ, ಪ್ರಮೋದ್ ಮಧ್ವರಾಜ್ ಅಥವಾ ಜನನಾಯಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರಿಗೆ ಟಿಕೆಟ್ ನೀಡಿಲ್ಲ. ಸ್ರ್ಪಧಿಸುವುದಿಲ್ಲ ಎಂದು ಹೇಳುತ್ತಿದ್ದ ಕೋಟ ಶ್ರೀನಿವಾಸ್ ಪೂಜಾರಿಗೆ ಅವಕಾಶ ಮಾಡಿಕೊಡಲಾಗಿದೆ.
ತಮ್ಮ ವಿರುದ್ಧ ಗೋ ಬ್ಯಾಕ್ ಚಳವಳಿ ನಡೆಸಿದವರಿಗೆ ಚುನಾವಣೆಯಲ್ಲಿ ಸ್ರ್ಪಧಿಸಲು ಬಿಡುವುದಿಲ್ಲ ಎಂದು ಶೋಭಾ ಕರಂದ್ಲಾಜೆ ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ಬಿಜೆಪಿಯ ಆಂತರಿಕ ದ್ವೇಷ ಜಿಲ್ಲೆಯ ಆಡಳಿತದ ಮೇಲೆ ಕೆಟ್ಟ ಪರಿಣಾಮಕ್ಕೆ ಅವಕಾಶವಾಗಬಾರದೆಂದು ಎಚ್ಚರಿಸಿದರು.