Homeಜಿಲ್ಲಾ ಸುದ್ದಿಗಳುಕಾಡಾನೆಗಳ ಕಾದಾಟಕ್ಕೆ ಮನೆ ಜಖಂ, ಕೌರಿಗ್ರಾಮದಲ್ಲಿ ಗ್ರಾಮಸ್ಥರಲ್ಲಿ ಆತಂಕ

ಕಾಡಾನೆಗಳ ಕಾದಾಟಕ್ಕೆ ಮನೆ ಜಖಂ, ಕೌರಿಗ್ರಾಮದಲ್ಲಿ ಗ್ರಾಮಸ್ಥರಲ್ಲಿ ಆತಂಕ

ಬೇಲೂರು, ಸೆ.7- ತಾಲ್ಲೂಕಿನಲ್ಲಿ ಕಾಡಾನೆಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮನೆಯೊಂದರ ಸಮೀಪವೇ ಎರಡು ಕಾಡಾನೆಗಳು ಕಾದಾಡಿಕೊಂಡು ಎರಡು ಮರಗಳನ್ನು ನೆಲಕ್ಕುರುಳಿಸಿದ ಪರಿಣಾಮ ಮನೆ ಜಖಂಗೊಂಡಿರುವ ಘಟನೆ ಕೌರಿಗ್ರಾಮದಲ್ಲಿ ನಡೆದಿದೆ. ಘಟನೆಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

ತಾಲ್ಲೂಕಿನ ಮಲೆನಾಡು ಭಾಗದ ವಿವಿಧ ಗ್ರಾಮಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಪೈಕಿ 30ರಿಂದ 40ಕ್ಕೂ ಹೆಚ್ಚು ಆನೆಗಳು ಕೌರಿಗ್ರಾಮದ ಸುತ್ತಮುತ್ತ ಸಂಚರಿಸುತ್ತಿವೆ. ಹಗಲು-ರಾತ್ರಿ ಎನ್ನದೆ ತೋಟಗಳಿಗೆ ಲಗ್ಗೆ ಇಡುತ್ತಿರುವ ಆನೆಗಳ ಹಿಂಡು ಬೆಳೆಗಳನ್ನು ನಾಶಪಡಿಸುತ್ತಿದ್ದು, ಗ್ರಾಮಸ್ಥರು ಆತಂಕದಲ್ಲೇ ದಿನದೂಡುತ್ತಿದ್ದಾರೆ.

ಇದೀಗ ಹಿಂಡಿನಿಂದ ಬೇರ್ಪಟ್ಟ ಮದವೇರಿದ ಎರಡು ಕಾಡಾನೆಗಳು ಕೌರಿಗ್ರಾಮದ ವಾಸದ ಮನೆಗಳ ಸಮೀಪವೇ ಬೆಳಗಿನ ಜಾವ ಕಾದಾಟಕ್ಕಿಳಿದಿವೆ. ಪರಸ್ಪರ ಬಡಿದಾಡಿಕೊಂಡ ಆನೆಗಳು ಎದುರಿಗೆ ಸಿಕ್ಕ ಗಿಡ-ಮರಗಳನ್ನು ಉರುಳಿಸಿದ್ದು, ತೋಟದಲ್ಲಿನ ಬೆಳೆಗಳಿಗೂ ಹಾನಿಯಾಗಿದೆ.

ಆನೆಗಳ ಕಾದಾಟದ ವೇಳೆ ಉರುಳಿದ ಮರಗಳು ಗ್ರಾಮದ ಪ್ರಸನ್ನ ಎಂಬುವವರ ಮನೆಯ ಮೇಲೆ ಬಿದ್ದ ಪರಿಣಾಮ ಮನೆ ಜಖಂಗೊಂಡಿದೆ. ಮನೆಯ ಹೆಂಚುಗಳು, ಮರದ ವಸ್ತುಗಳು ಹಾಗೂ ಮನೆಗೆ ಹೊಂದಿಕೊಂಡಿದ್ದ ಶೆಡ್‌ ಕೂಡ ಹಾನಿಗೊಳಗಾಗಿದೆ. ಎರಡು ಕಾಡಾನೆಗಳು ಮನೆಯ ಸಮೀಪವೇ ಕಾದಾಡುತ್ತಿರುವ ದೃಶ್ಯವನ್ನು ಕಣ್ಣಾರೆ ಕಂಡ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಇದೇ ಗ್ರಾಮದ ಭುವನೇಶ್ವರ, ಪರಮೇಶ್ವರಯ್ಯ ಹಾಗೂ ಮಧು ಎಂಬುವವರ ತೋಟಗಳಲ್ಲೂ ಕಾಡಾನೆಗಳು ಬೀಡುಬಿಟ್ಟಿದ್ದು, ಬೆಳೆಗಳನ್ನು ತಿಂದು ತುಳಿದು ನಾಶಪಡಿಸಿವೆ. ತೋಟಗಳಲ್ಲಿ ಮನಬಂದಂತೆ ಓಡಾಡುತ್ತಿರುವ ಆನೆಗಳಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಬೆಳೆಗಾರರು ತಿಳಿಸಿದ್ದಾರೆ. ಕಾಡಾನೆಗಳ ನಿರಂತರ ಉಪಟಳದಿಂದ ಬೆಳೆಗಾರರು ಹಾಗೂ ಗ್ರಾಮಸ್ಥರು ಕಂಗಾಲಾಗಿದ್ದು, ಆನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸಿ ಶಾಶ್ವತ ಪರಿಹಾರ ಕಲ್ಪಿಸುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

RELATED ARTICLES
spot_img

Latest News