ಮೈಸೂರು, ಸೆ.7- ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಗೆ ಗಜಪಡೆಯನ್ನು ಸನ್ನದ್ಧಗೊಳಿಸುವ ಪ್ರಕ್ರಿಯೆ ಚುರುಕುಗೊಂಡಿದ್ದು, ಸಂಪ್ರದಾಯದಂತೆ ಆನೆಗಳಿಗೆ ಭಾರ ಹೊರುವ ತಾಲೀಮು ಆರಂಭವಾಗಿದೆ.
ಸೋಮೇಶ್ವರ ದೇವಾಲಯದ ಬಳಿ ಎಲ್ಲ ಆನೆಗಳಿಗೂ ಅರ್ಚಕ ಪ್ರಸಾದ್ ರಾವ್ ನೇತೃತ್ವದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಯಿತು. ಈ ವೇಳೆ ಗಾದಿ, ನವ್ದಾ ಹಾಗೂ ಮರಳಿನ ಮೂಟೆಗಳನ್ನು ಇರಿಸುವ ಕಬ್ಬಿಣದ ತೊಟ್ಟಿಲಿಗೂ ಪೂಜೆ ನೆರವೇರಿಸಲಾಯಿತು.
ಬಳಿಕ ಮಹೇಂದ್ರ ಆನೆಗೆ ಗಾದಿ ಹಾಗೂ ನವ್ದಾ ಬಿಗಿದು, ಅದರ ಮೇಲೆ ತೊಟ್ಟಿಲನ್ನು ಅಳವಡಿಸಲಾಯಿತು. ತೊಟ್ಟಿಲಿನಲ್ಲಿ ತಲಾ 50 ಕೆಜಿ ತೂಕದ 9 ಮರಳಿನ ಮೂಟೆಗಳನ್ನು ಇರಿಸುವ ಮೂಲಕ ಒಟ್ಟು 450 ಕೆಜಿ ಭಾರ ಹೊರುವ ತಾಲೀಮಿಗೆ ಚಾಲನೆ ನೀಡಲಾಯಿತು.
ಮಹೇಂದ್ರ ಆನೆಯೊಂದಿಗೆ ಲಕ್ಷ್ಮಿ ಹಾಗೂ ಕಾವೇರಿ ಆನೆಗಳು ಸಾಥ್ ನೀಡಿದವು. ಅರಮನೆಯಿಂದ ಬಲರಾಮ ದ್ವಾರದ ಮೂಲಕ ಹೊರಟ ಗಜಪಡೆ, ಜಂಬೂ ಸವಾರಿ ಸಾಗುವ ಮಾರ್ಗವಾದ ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ಆಸ್ಪತ್ರೆ, ಹಳೇ ಆರ್‌ಎಂಸಿ ವೃತ್ತ, ಹೊಸಬೀದಿ ಮಾರ್ಗವಾಗಿ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ತೆರಳಿ, ಬಳಿಕ ಇದೇ ಮಾರ್ಗದಲ್ಲಿ ಅರಮನೆಗೆ ವಾಪಸ್ಸಾಯಿತು.
ಮೊದಲ ದಿನದ ಭಾರ ಹೊರುವ ತಾಲೀಮು ಯಾವುದೇ ಅಳುಕಿಲ್ಲದೆ ಯಶಸ್ವಿಯಾಗಿ ನಡೆಯಿತು. ಮಹೇಂದ್ರ ಗಜಗಾಂಭೀರ್ಯದಿಂದ ಹೆಜ್ಜೆ ಹಾಕಿದರೆ, ಲಕ್ಷ್ಮಿ ಹಾಗೂ ಕಾವೇರಿ ಆನೆಗಳು ಸಾಥ್ ನೀಡಿದವು. ಮಹೇಂದ್ರನ ಹಿಂದೆ ಏಕಲವ್ಯ, ಗೋಪಿ, ಪ್ರಶಾಂತ್, ಶ್ರೀರಾಮ ಹಾಗೂ ಧನಂಜಯ ಆನೆಗಳು ಸಾಗಿದವು.
ಅರಮನೆಗೆ ಮೊದಲ ತಂಡದಲ್ಲಿ ಒಟ್ಟು 9 ಆನೆಗಳನ್ನು ಕರೆತರಲಾಗಿದ್ದು, ಶ್ರೀಕಂಠ ಆನೆಯನ್ನು ತಾಲೀಮಿನಿಂದ ಹೊರಗಿಡಲಾಗಿದೆ. ಉಳಿದ ಎಲ್ಲ ಆನೆಗಳಿಗೂ ಹಂತ ಹಂತವಾಗಿ ಭಾರ ಹೊರುವ ತಾಲೀಮು ನಡೆಸಲಾಗುತ್ತಿದೆ. ಜಂಬೂ ಸವಾರಿಯ ದಿನ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿ ಸೇರಿದಂತೆ ವಿವಿಧ ಜವಾಬ್ದಾರಿಗಳಿಗೆ ಗಜಪಡೆಯನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲೂ ತಾಲೀಮು ಮುಂದುವರಿಯಲಿದೆ.
