Homeರಾಷ್ಟ್ರೀಯಮಹಿಳೆಯರ ಬಗ್ಗೆ ಅವಹೇಳನಕಾರಿ ಮಾತನಾಡಿದರೆ ಕಾನೂನು ಕ್ರಮ : ವಿಜಯ್ ವಾರ್ನಿಂಗ್

ಮಹಿಳೆಯರ ಬಗ್ಗೆ ಅವಹೇಳನಕಾರಿ ಮಾತನಾಡಿದರೆ ಕಾನೂನು ಕ್ರಮ : ವಿಜಯ್ ವಾರ್ನಿಂಗ್

ಚೆನ್ನೈ, ಸೆ.7- ಮಹಿಳೆಯರ ಬಗ್ಗೆ ಅವಹೇಳನಕಾರಿ ಅಥವಾ ದ್ವಂದ್ವಾರ್ಥದ ಹೇಳಿಕೆಗಳನ್ನು ನೀಡಿದರೆ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್‌ ಹೇಳಿದ್ದಾರೆ. ಇತ್ತೀಚೆಗೆ ಉದಯನಿಧಿ ಸ್ಟಾಲಿನ್‌ ಅವರ ಹೇಳಿಕೆಗೆ ಸಂಬಂಧಿಸಿದ ವಿವಾದದ ನಡುವೆಯೇ ವಿಜಯ್‌ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.ವಿಧಾನಸಭೆಯಲ್ಲಿ ಯಾವುದೇ ವ್ಯಕ್ತಿಯ ಹೆಸರನ್ನು ಉಲ್ಲೇಖಿಸದೆ ಮಾತನಾಡಿದ ವಿಜಯ್‌, ಜನರು ಅಥವಾ ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡುವುದನ್ನು ಯಾರೂ ಬಯಸಬಾರದು ಎಂದು ಹೇಳಿದರು.

ಕೆಲವರು ದ್ವಂದ್ವಾರ್ಥದ ರೀತಿಯಲ್ಲಿ ಮಾತನಾಡುವುದನ್ನು ಜನರು ಗಮನಿಸುತ್ತಿದ್ದಾರೆ. ಪ್ರತಿಯೊಬ್ಬರ ಮನೆಯಲ್ಲೂ ಮಹಿಳೆಯರು ಸಹೋದರಿಯರು ಹಾಗೂ ತಾಯಂದಿರ ಸ್ಥಾನದಲ್ಲಿದ್ದಾರೆ. ಹೀಗಾಗಿ ಮಹಿಳೆಯರಿಗೆ ಅವಮಾನವಾಗುವ ರೀತಿಯಲ್ಲಿ ಯಾರಾದರೂ ಮಾತನಾಡಿದರೆ ಕಾನೂನು ತನ್ನ ಕ್ರಮ ಕೈಗೊಳ್ಳಲಿದೆ ಎಂದು ಅವರು ಎಚ್ಚರಿಸಿದರು.

ಹೇಳಿಕೆ ಸುತ್ತ ವಿವಾದ

ಇತ್ತೀಚೆಗೆ ತಂಜಾವೂರಿನಲ್ಲಿ ನಡೆದ ಕಾವೇರಿ ಪ್ರತಿಭಟನೆ ಸಂದರ್ಭದಲ್ಲಿ ಉದಯನಿಧಿ ಸ್ಟಾಲಿನ್‌ ಮಾತನಾಡುತ್ತಿದ್ದ ವೇಳೆ ಬೆಂಬಲಿಗರು ನಟಿ ತ್ರಿಶಾ ಅವರ ಹೆಸರನ್ನು ಘೋಷಿಸಿದ ಹಿನ್ನೆಲೆಯಲ್ಲಿ ವಿವಾದ ಉಂಟಾಗಿತ್ತು. ಈ ವೇಳೆ ಉದಯನಿಧಿ ಪ್ರತಿಕ್ರಿಯಿಸಿದ ರೀತಿಯನ್ನು ಕೆಲವರು ಆಕ್ಷೇಪಾರ್ಹ ಹಾಗೂ ದ್ವಂದ್ವಾರ್ಥದ ಹೇಳಿಕೆ ಎಂದು ವ್ಯಾಖ್ಯಾನಿಸಿದ್ದರು.

ಆದರೆ ಉದಯನಿಧಿ ಸ್ಟಾಲಿನ್‌ ಅವರು ಯಾವುದೇ ಆಕ್ಷೇಪಾರ್ಹ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದರು. ತಾವು ಕಾವೇರಿ ಸಮಸ್ಯೆಯನ್ನೇ ಉಲ್ಲೇಖಿಸಿ ಮಾತನಾಡಿದ್ದಾಗಿ ಅವರು ಹೇಳಿಕೊಂಡಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್‌ 4ರಂದು ಉದಯನಿಧಿ ಅವರನ್ನು ಚೆನ್ನೈನ ನಿವಾಸದಲ್ಲಿ ಬಂಧಿಸಿ ವಿಚಾರಣೆಗಾಗಿ ತಂಜಾವೂರಿಗೆ ಕರೆದೊಯ್ಯಲಾಗಿತ್ತು. ಬಳಿಕ ಅದೇ ದಿನ ಅವರನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ಈ ಬೆಳವಣಿಗೆಗಳ ಬೆನ್ನಲ್ಲೇ ಮುಖ್ಯಮಂತ್ರಿ ವಿಜಯ್‌ ಅವರು ವಿಧಾನಸಭೆಯಲ್ಲಿ ನೀಡಿರುವ ಹೇಳಿಕೆ, ಮಹಿಳೆಯರ ಗೌರವ ಹಾಗೂ ಸಾರ್ವಜನಿಕ ವ್ಯಕ್ತಿಗಳ ಜವಾಬ್ದಾರಿಯುತ ಹೇಳಿಕೆಗಳ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.

RELATED ARTICLES
spot_img

Latest News